Advertisement

ಕ್ರಿಕೆಟ್‌ ಜನಪ್ರಿಯತೆಯನ್ನೂ ಮೀರೀತು ಕಬಡ್ಡಿ: ಸುಕೇಶ್‌

10:04 AM Oct 28, 2019 | Sriram |

“ಗ್ರಾಮೀಣ ಮಟ್ಟದ ಕಬಡ್ಡಿ ಇಂದು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕ್ರಿಕೆಟ್‌ ಜನಪ್ರಿಯತೆ ಯನ್ನು ಮೀರಿದರೂ ಆಶ್ಚರ್ಯವಿಲ್ಲ’ ಎಂದು
“ಉದಯವಾಣಿ’ ಜತೆ ತನ್ನ ಮನದಾಳದ ಮಾತನ್ನು ಹಂಚಿಕೊಂಡವರು ನೂತನ ಪ್ರೊ ಕಬಡ್ಡಿ ಚಾಂಪಿಯನ್‌ ಆಗಿ ಮೂಡಿಬಂದ ಬೆಂಗಾಲ್‌ ವಾರಿಯರ್ ತಂಡದ ಸ್ಟಾರ್‌ ಆಟಗಾರ, ಕಾರ್ಕಳ ಮೂಲದ ಕಡ್ತಲದ ಸುಕೇಶ್‌ ಹೆಗ್ಡೆ. ಇವರೊಂದಿಗೆ ನಡೆದ ಸಂದರ್ಶನ ಇಲ್ಲಿದೆ.

Advertisement

ಬೆಂಗಾಲ್‌ ವಾರಿಯರ್ ಪ್ರಶಸ್ತಿ ಗೆಲ್ಲುತ್ತದೆ ಎಂಬ ವಿಶ್ವಾಸ ಇತ್ತೇ?
ಫೈನಲ್‌ ತಲುಪುತ್ತೇವೆ ಎಂಬ ವಿಶ್ವಾಸ ಇತ್ತು. ಆದರೆ ಚಾಂಪಿಯನ್‌ ಪಟ್ಟ ನಮಗೆ ಒಲಿಯುತ್ತದೆ ಎಂಬ ಯೋಚನೆ ಇರಲಿಲ್ಲ. ಈಗ ಖುಷಿಯಾಗಿದೆ. ತಂಡದ ಎಲ್ಲ ಸದಸ್ಯರ, ತರಬೇತುದಾರರ ಸಾಂಘಿಕ ಪ್ರಯತ್ನದಿಂದ ಈ ಪಟ್ಟ ಒಲಿದಿದೆ.

ಕನ್ನಡಿಗ ಕೋಚ್‌ ರಮೇಶ್‌ ಕಳೆದ ಸಲ ಬುಲ್ಸ್‌ ತಂಡದಲ್ಲಿದ್ದಾಗ ಅದು ಚಾಂಪಿಯನ್‌ ಆಗಿತ್ತು. ಈಗ ಬೆಂಗಾಲ್‌ ಸರದಿ…
ಹೌದು… ಕೋಚ್‌ ಬಿ.ಸಿ. ರಮೇಶ್‌ ಅವರಿಗೆ ಕಬಡ್ಡಿಯಲ್ಲಿ ಅಗಾಧ ಅನುಭವವಿದೆ. ಅವರು ಮೊದಲು ಕಬಡ್ಡಿ ಆಟಗಾರರಾಗಿದ್ದರು. ಕಬಡ್ಡಿಯ ತಂತ್ರಗಾರಿಕೆ ಅವರಿಗೆ ತಿಳಿದಿದೆ. ತಂಡ ಚಾಂಪಿಯನ್‌ ಆಗಲು ಅವರ ಅನುಭವವೂ ಮುಖ್ಯ ಕಾರಣ.

ಪ್ರೊ ಕಬಡ್ಡಿ ಕೂಟಕ್ಕೂ ಮುನ್ನ ನಿಮ್ಮ ತಯಾರಿ ಯಾವ ರೀತಿ ಇತ್ತು?
ಪ್ರೊ ಕಬಡ್ಡಿ ಆರಂಭವಾಗುವುದಕ್ಕೂ 3 ತಿಂಗಳ ಹಿಂದಿನಿಂದಲೇ ಅಭ್ಯಾಸ ಆರಂಭಿಸಿದ್ದೆ. ಕಳೆದ ಕೆಲವು ಸೀಸನ್‌ಗಳಲ್ಲಿ ಅನಾರೋಗ್ಯ ಕಾಡಿತ್ತು. ಹೀಗಾಗಿ ಈ ಬಾರಿ ಫಿಟ್‌ನೆಸ್‌ಗೆ ಹೆಚ್ಚಿನ ಒತ್ತು ನೀಡಿದ್ದೆ. ಪಂದ್ಯಗಳ ವಿರಾಮದ ನಡುವೆ ಕಬಡ್ಡಿಯ ಹೊಸ ಟೆಕ್ನಿಕ್‌ಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ಸ್ವಿಮ್ಮಿಂಗ್‌, ಜಿಮ್‌ನಲ್ಲೂ ತೊಡಗಿಸಿಕೊಳ್ಳುತ್ತಿದ್ದೆ.

ಕಬಡ್ಡಿಯಲ್ಲಿ ವಿಶೇಷ ಆಸಕ್ತಿ ತೋರುತ್ತಿರುವ ಯುವಕರಿಗೆ ನಿಮ್ಮ ಸಲಹೆ?
ಗ್ರಾಮೀಣ ಪ್ರದೇಶದ ಕಬಡ್ಡಿ ಇಂದು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದೆ. ಮುಂದಿನ ದಿನಗಳಲ್ಲಿ ಕ್ರಿಕೆಟನ್ನು ಹಿಂದಿಕ್ಕಿದ್ದರೂ ಆಶ್ಚರ್ಯವಿಲ್ಲ. ಗ್ರಾಮೀಣ ಮಟ್ಟದ ಕ್ರೀಡಾಪಟುಗಳಿಗೆ ಆಟದ ಜಾಣ್ಮೆ, ಪ್ರದರ್ಶನ ನೀಡುವ ಕಲೆಯ ಬಗ್ಗೆ ತಿಳಿದುಕೊಳ್ಳಲು ಇತ್ತೀಚಿನ ದಿನಗಳಲ್ಲಿ ಹಲವಾರು ಮಾಧ್ಯಮಗಳಿವೆ.

Advertisement

ರಾಷ್ಟ್ರೀಯ ತಂಡದಲ್ಲಿ ಗುರುತಿಸಿಕೊಂಡಿರುವ ಬಗ್ಗೆ ಹೇಳಿ?
ಭಾರತ ತಂಡದಲ್ಲಿ ಗುರುತಿಸಿಕೊಳ್ಳುವುದು ಪ್ರತಿಯೊಬ್ಬ ಆಟಗಾರನ ಕನಸು. ನಾನು ಈ ಹಿಂದೆ 2 ಬಾರಿ ಭಾರತ ಪರ ಆಡಿದ್ದೇನೆ. ರಾಜ್ಯ ಮಟ್ಟದ ಕಬಡ್ಡಿ ಇದ್ದು, ಇದರಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುತ್ತೇನೆ.

ಪ್ರೊ ಕಬಡ್ಡಿ ನಿಮ್ಮ ಜೀವನ ಶೈಲಿ, ಪರಿಸ್ಥಿತಿಯನ್ನು ಎಷ್ಟು ಬದಲಾಯಿಸಿದೆ?
ಪ್ರೊ ಕಬಡ್ಡಿಯಿಂದ ನನ್ನ ಜೀವನ ಶೈಲಿಯಲ್ಲಿ ತುಂಬಾ ಬದಲಾವಣೆಯಾಗಿದೆ. ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ಈ ಹಿಂದೆ ಸುಕೇಶ್‌ ಅಂದರೆ ಯಾರು ಎಂದು ತಿಳಿದಿರಲಿಲ್ಲ. ಆದರೆ ಇಂದು ಹಳ್ಳಿಗಳಲ್ಲೂ ನನ್ನನ್ನು ಗುರುತಿಸುತ್ತಾರೆ.

ಬುಲ್ಸ್‌ ಪರ ಆಡುವ ಕನಸು
ನಾನು ಕರ್ನಾಟಕದವನಾಗಿದ್ದರೂ ರಾಜ್ಯ ತಂಡದಲ್ಲಿ (ಬೆಂಗಳೂರು ಬುಲ್ಸ್‌) ಆಡಲು ಅವಕಾಶ ದೊರಕಿಲ್ಲ ಎಂಬ ನೋವು ಕಾಡುತ್ತಿದೆ. ಆಟಗಾರರನ್ನು ಬಿಡ್ಡಿಂಗ್‌ ಮೂಲಕ ಖರೀದಿ ಮಾಡುವುದರಿಂದ ನಿರ್ದಿಷ್ಟ ತಂಡವನ್ನು ಸೇರಲು ನಮ್ಮಿಂದಾಗದು. ಮುಂದಿನ ಆವೃತ್ತಿಗಳಲ್ಲಿ ಬೆಂಗಳೂರು ತಂಡದಲ್ಲಿ ಗುರುತಿಸಲು ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ.

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next