ಹುಬ್ಬಳ್ಳಿ: ಕೇಂದ್ರದಿಂದ ಅವಳಿನಗರಕ್ಕೆ ಸಿಆರ್‌ಎಫ್ ಅನುದಾನ ಸಾಕಷ್ಟು ಬಂದಿದ್ದರೂ ಮೈತ್ರಿ ಸರಕಾರ ನಿರ್ಲಕ್ಷ್ಯ ತೋರಿದ್ದರಿಂದಲೇ ಅನೇಕ ಕಾಮಗಾರಿಗಳು ಕುಂಠಿತಗೊಂಡಿದ್ದವು. ಈಗ ಅವೆಲ್ಲ ಕಾಮಗಾರಿಗಳನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸಂಗೊಳ್ಳಿ ರಾಯಣ್ಣ ನಗರದಲ್ಲಿ ಭೈರಿದೇವರಕೊಪ್ಪ ಮತ್ತು ಗಾಮನಗಟ್ಟಿ ನಡುವೆ ನೇರ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸುಮಾರು 10 ಕೋಟಿ ರೂ. ವೆಚ್ಚದ ಸಿಆರ್ ಎಫ್ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಿಂದಿನ ಸರಕಾರದ ತೀವ್ರ ನಿರ್ಲಕ್ಷ್ಯದಿಂದ ಈ ಕಾಮಗಾರಿ ಕುಂಠಿತಗೊಂಡಿತ್ತು. ಈಗ ಅವಧಿಗೆ ಮುನ್ನವೇ ಕಾಮಗಾರಿ ಮುಗಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಭೈರಿದೇವರಕೊಪ್ಪ ಮತ್ತು ಗಾಮನಗಟ್ಟಿ ನಡುವೆ ಉತ್ತಮ ಗುಣಮಟ್ಟದ ರಸ್ತೆಯನ್ನಾಗಿ ಮಾರ್ಪಡಲಾಗುವುದು. ಈ ಕಾಮಗಾರಿ ಬಹುಬೇಗನೆ ಮುಗಿಸಲಿದ್ದೇವೆ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಮಾಜಿ ಸದಸ್ಯ ಚಂದ್ರಶೇಖರ ಮನಗುಂಡಿ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ ಮೊದಲಾದವರಿದ್ದರು.