Advertisement
ಹೆಸರಿನಲ್ಲಿ ಹಾವೇಕೆ?ಈ ಪಕ್ಷಿಯು ಹೆಚ್ಚಾಗಿ ಹಾವು ಮತ್ತು ಸರೀಸೃಪ ವರ್ಗದ ಪ್ರಾಣಿಗಳನ್ನೇ ಹೆಚ್ಚಾಗಿ ತಿನ್ನುವುದರಿಂದ ಇದಕ್ಕೆ ” ಜುಟ್ಟು ಹಾವು ಗಿಡುಗ’ ಎಂಬ ಹೆಸರು ಬಂದಿದೆ. ಹಸಿರು ಹಾವು, ಓತಿಕ್ಯಾತ, ನಾಗರಹಾವು, ಹರಣೆ, ಲಾರ್ವಾ ಇದರ ಮುಖ್ಯ ಆಹಾರ. ಕೈಟ್ ಮತ್ತು ಈಗಲ್ ಎಂಬ ಎರಡು ಪ್ರಭೇದದ ಹಕ್ಕಿಗಳಿಗೂ “ಹದ್ದು’ ಎನ್ನುತ್ತಾರೆ. “ಕೈಟ್’ಗಳನ್ನು ಹದ್ದು ಎಂದೂ, “ಈಗಲ್’ಗಳನ್ನು ಗಿಡುಗ ಎಂದೂ ಬರೆದರೆ ಅವುಗಳ ನಿಖರತೆ ತಿಳಿಯುವುದರಿಂದ ಈಗಲ್‌ಗಳನ್ನು “ಗಿಡುಗ’ ಎಂದೇ ಬರೆಯಲಾಗಿದೆ.
ಈ ಪಕ್ಷಿಗೆ ತುದಿಯಲ್ಲಿ ಕೊಕ್ಕೆಯಂತೆ ಬಗ್ಗಿರುವ, ದಪ್ಪ ಬೂದುಬಣ್ಣದ ಚುಂಚು (ಕೊಕ್ಕು)ಇದೆ. ಚುಂಚಿನ ಈ ರಚನೆ ಪ್ರಾಣಿಗಳನ್ನು ಬೇಟೆಯಾಡಿ, ಹರಿದು ತಿನ್ನಲು ಸಹಾಯಕ. ಹಾವುಗಳನ್ನು ಎತ್ತರದ ಮರಗಳಿಂದಲೇ ಗುರುತಿಸಿ, ಅವುಗಳನ್ನು ಬೆನ್ನಟ್ಟಿ, ಇಲ್ಲವೇ ಕೆಲವೊಮ್ಮೆ ನೆಲದಮೇಲೆ ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತದೆ. ಹಳದಿಬಣ್ಣದ ಕಣ್ಣಿನ ಮಧ್ಯ ಇರುವ ಕಪ್ಪು ಚುಕ್ಕೆಯಂಥ ಪಾಪೆ ನೋಟದ ತೀಕ್ಷ್ಣತೆಯನ್ನು ಹೆಚ್ಚಿಸಿದೆ. ಕುತ್ತಿಗೆಯ ಮೇಲ್ಭಾಗದಲ್ಲಿ ಗರಿಗಳ ಜುಟ್ಟು ಇದೆ. ಹಾವುಗಳನ್ನು ತಿನ್ನುವ ಜುಟ್ಟಿನ ಗಿಡುಗ ಎನ್ನಲು ಇದೇ ಕಾರಣ. ಇದರ ಜುಟ್ಟು ಕೂಗುವಾಗ ನೆಟ್ಟಗೆ ನಿಲ್ಲುತ್ತದೆ. ಹಳದಿ ಬಣ್ಣದ ಬಲವಾದ ಕಾಲುಗಳಲ್ಲಿ ಮೂರು ಬೆರಳುಗಳಿದ್ದು, ಅದರ ತುದಿಯಲ್ಲಿ ಚೂಪಾದ ಉಗುರುಗಳಿವೆ. ಇದು ಹಾರುತ್ತಾ ಎರಗಿ ಬೇಟೆಯನ್ನು ಕಾಲಲ್ಲಿ ಹಿಡಿದು, ನಂತರ ಎತ್ತರದ ಮರದಮೇಲೆ ಕುಳಿತು, ಚುಂಚಿನಿಂದ ಚುಚ್ಚಿ ಬೇಟೆಯನ್ನು ತಿನ್ನುತ್ತದೆ. ವಿಷದ ಹಾವುಗಳನ್ನೂ ಇದು ಬೇಟೆಯಾಡಿ ತಿನ್ನುತ್ತದೆ. ಹಾವಿನ ವಿಷ ಈ ಪಕ್ಷಿಗೆ ಹಾನಿಕಾರಕವೇ, ಅಲ್ಲವೇ ? ವಿಷದ ಹಾವನ್ನು ತಿಂದರೂ ಇದಕ್ಕೆ ಸಣ್ಣದೊಂದು ತೊಂದರೆಯೂ ಆಗುವುದಿಲ್ಲವೇ? ಎಂಬುದನ್ನು ಸಂಶೋಧನೆಗಳಿಂದ ತಿಳಿಯಬೇಕಿದೆ.
Related Articles
Advertisement
ಹಿಮಾಲಯ ಪ್ರದೇಶ, ನೇಪಾಳ, ಕರ್ನಾಟಕ, ತಮಿಳುನಾಡು, ಅಂಡಮಾನ್- ನಿಕೋಬಾರ್, ಶ್ರೀಲಂಕಾ, ಕಬಿನಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಈ ಪಕ್ಷಿಗಳು ಕಂಡು ಬರುತ್ತವೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಇವು ಮರಿ ಮಾಡಲು ಸ್ಥಳದ ಆಯ್ಕೆ ಮಾಡುತ್ತವೆ. ನೀರಿನ ಸಮೀಪ ಎತ್ತರದ ಮರಗಳಲ್ಲಿ ಕಟ್ಟಿಗೆ ತುಂಡು ಸೇರಿಸಿ, ಗೂಡು ಕಟ್ಟುತ್ತವೆ. ಅದರ ಮೇಲೆ ಹಸಿರೆಲೆ ಹರಡಿ ಒಂದು ಅಥವಾ ಎರಡು ಮೊಟ್ಟೆ ಇಡುತ್ತವೆ. ಮೊಟ್ಟೆ ಕಾರಣಾಂತರಗಳಿಂದ ಮರಿಯಾಗದಿದ್ದಾಗ 2 ಅಥವಾ 7 ವಾರದಲ್ಲಿ ಪುನಃ ಮೊಟ್ಟೆ ಇಡುತ್ತವೆ. ಗಂಡು ಹೆಣ್ಣು ಸೇರಿ ಗೂಡು ಕಟ್ಟುತ್ತವೆ. ಮೊಟ್ಟೆ ಮರಿಯಾಗಲು 41 ದಿನ ಬೇಕು.
ಪಿ. ವಿ. ಭಟ್ ಮೂರೂರು