Advertisement

ಕಷ್ಟದಲ್ಲಿದ್ದಾಗ ಸಂತೈಸಿದವರಿಗೆ ಚಿರಋಣಿ: ಡಿಕೆಶಿ

10:06 AM Oct 28, 2019 | Lakshmi GovindaRaju |

ಬೆಂಗಳೂರು: “ಆಗಸ್ಟ್‌ 29ರಂದು ಇ.ಡಿ ಅಧಿಕಾರಿಗಳು ನೀಡಿದ ನೋಟಿಸ್‌ಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದೆ. ಏಳು ಬಾರಿ ಶಾಸಕನಾಗಿ ಆಯ್ಕೆಯಾದ ಜನಪ್ರತಿನಿಧಿ ನಾನು. ಅಂದು ಇಲ್ಲಿಂದ ಹೋದವನು ನೇರವಾಗಿ ಪಕ್ಷದ ಹಾಗೂ ಕಾರ್ಯಕರ್ತರ ದೇವಾಲಯಕ್ಕೆ ಇಂದು ಬಂದಿದ್ದೇನೆ’ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಭಾವುಕರಾಗಿ ನುಡಿದರು.

Advertisement

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದಲ್ಲಿ 51 ದಿನ ಜೈಲು ವಾಸ ಅನುಭವಿಸಿ ಶನಿವಾರ ಬೆಂಗಳೂರಿಗೆ ಆಗಮಿಸಿದರು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಮೆರವಣಿಗೆಯ ಮೂಲಕ ಆಗಮಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದು ವಿಶೇಷ ಸಂದರ್ಭ. ಭಕ್ತ ಹಾಗೂ ಭಗವಂತನಿಗೆ ನಡೆಯುವ ವ್ಯವಹಾರ. ಹಾಗಾಗಿಯೇ ಇಲ್ಲಿಗೆ ಮೊದಲು ಬಂದಿದ್ದೇನೆ. ಕಲ್ಲು ಪ್ರಕೃತಿ.

ಅದನ್ನು ಕಡಿದಾಗ ಆಕೃತಿ ಪಡೆಯುತ್ತದೆ. ಅಕೃತಿಯನ್ನು ಪೂಜಿಸಿದಾಗ ಸಂಸ್ಕೃತಿಯಾಗುತ್ತದೆ. ಮಾಧ್ಯಮ ಗಳು ನನ್ನನ್ನು ಪರ ಹಾಗೂ ವಿರುದ್ಧವಾಗಿ ವಿಮರ್ಶಿಸಿದ್ದಾರೆ. ನನಗೆ ಯಾಕೆ ಈ ಸ್ಥಿತಿ ಬಂತು ಅಂತ ಬಹಳ ಯೋಚಿಸಿದ್ದೇನೆ. ನನ್ನ ಮೇಲೆ ಪಕ್ಷ, ಕಾರ್ಯಕರ್ತರು, ಮುಖಂಡರು ಅಭಿಮಾನ, ಪ್ರೀತಿ ತೋರಿಸಿದರು. ಬಿಜೆಪಿ ಯವರೂ ಸಹಕರಿಸಿದರು. ಅವರೆಲ್ಲರ ಋಣ ತೀರಿಸಲು ಶಕ್ತಿ ಕೊಡುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ’ ಎಂದರು.

“ರಾಜಕಾರಣ ಬೇರೆ, ಆತ್ಮೀಯತೆ ಬೇರೆ. ಮನುಷ್ಯತ್ವ ಬೇಕು. ರಾಜಕಾರಣದಲ್ಲಿ ಯಾವ ಪಕ್ಷವೂ ಶಾಶ್ವತ ಅಲ್ಲ. ಇದನ್ನೆಲ್ಲ ಯೋಚಿಸಿ ನನ್ನ ಬದುಕು ನಡೆಸುತ್ತಿದ್ದೇನೆ. ನಾನು ಕಷ್ಟದಲ್ಲಿದ್ದಾಗ ಸ್ವಾಮೀಜಿಗಳು, ಎಲ್ಲಾ ಪಕ್ಷದ ನಾಯಕರು ನನ್ನನ್ನು, ಕುಟುಂಬದವರನ್ನು ಭೇಟಿ ಮಾಡಿ, ಸಮಾಧಾನ ಪಡಿಸಿದ್ದಾರೆ. ಅವರೆಲ್ಲರಿಗೂ ಋಣಿಯಾಗಿದ್ದೇನೆ’ ಎಂದರು.

ಭಾವುಕರಾದ ಮಾಜಿ ಸಚಿವ: ಜನರ ಮನಸ್ಸಲ್ಲಿ ಶಿವಕುಮಾರ್‌ ಮೋಸ ಮಾಡಿಲ್ಲ, ತಪ್ಪು ಮಾಡಿಲ್ಲ ಎಂಬುದಿದೆ. ತಪ್ಪೆಸಗಿದ್ದರೆ ದೇವರು, ನ್ಯಾಯಾಂಗ ವ್ಯವಸ್ಥೆ ನನ್ನನ್ನು ಶಿಕ್ಷಿಸುತ್ತದೆ. ನಾನು ನನ್ನ ತಾಯಿಗೆ ಕೇಳದೆ, ಅವರನ್ನು ನಂಬದೇ ಹೇಗೆ ಬಾಳಲಿ. ನಾನು ನನ್ನ ತಾಯಿಗೆ ಬೇನಾಮಿದಾರ. ನಾನು ಕಾನೂನನ್ನು ಪ್ರಶ್ನಿಸಲ್ಲ. ನ್ಯಾಯಾಲಯದಿಂದ ಅನ್ಯಾಯದ ತೀರ್ಪು ಬರಬಾರದು ಎಂದು ಹೇಳುತ್ತಾ ಬಂದವನು. ನನ್ನ ವಿರುದ್ಧ ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿದೆ. ನನ್ನ ವಿರುದ್ಧ ಅಕ್ರಮ ಹಣ ಸಾಗಾಟ ಪ್ರಕರಣ ದಾಖಲಾಗಿದೆ. ಅದೆಲ್ಲಕ್ಕೂ ಮುಂದೆ ಉತ್ತರ ನೀಡುತ್ತೇನೆ ಎಂದರು.

Advertisement

ಕ್ಷಮೆ ಕೋರಿದ ಡಿಕೆಶಿ: ತಾವು ದೆಹಲಿಯಿಂದ ಬೆಂಗಳೂರಿಗೆ ಬಂದಾಗ ತಮ್ಮನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದಿ ದ್ದರು. ಆ ಸಮಯದಲ್ಲಿ ಟ್ರಾಫಿಕ್‌ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ ಯಾಗಿದೆ. ಈ ಸಂದರ್ಭದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಬಂದಿದ್ದರು. ಇಂತಹ ಸಂದರ್ಭ ದಲ್ಲಿ ಹಣ ಕೊಟ್ಟು ಕರೆಸಲು ಸಾಧ್ಯವಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯಿಂದ ಸಾಕಷ್ಟು ಕಾಯಕರ್ತರು ನನಗೆ ಬೆಂಬಲ ವ್ಯಕ್ತಪಡಿ ಸಿದ್ದಾರೆ. ಟ್ರಾಫಿಕ್‌ ಸಮಸ್ಯೆಯಿಂದ ಜನರಿಗೆ ತೊಂದರೆಯಾಗಿದ್ದರೆ, ಅವರ ಕ್ಷಮೆ ಕೋರು ತ್ತೇನೆ ಎಂದು ಹೇಳಿದರು.

ಕೈ ಕೊಯ್ದುಕೊಂಡ ಡಿಕೆಶಿ ಅಭಿಮಾನಿ
ಕುಣಿಗಲ್‌ (ತುಮಕೂರು): ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬರುತ್ತಿರುವ ಸುದ್ದಿ ತಿಳಿದ ಸಂತಸದಲ್ಲಿ ಡಿಕೆಶಿ ಅಭಿಮಾನಿ, ಜೋಡಿಹೊಸಹಳ್ಳಿ ಗ್ರಾಮದ ಬೋರೇಗೌಡ ಅವರು, ಶುಕ್ರವಾರ ರಾತ್ರಿ ಬ್ಲೇಡಿನಿಂದ ತಮ್ಮ ಕೈಯನ್ನು ಕೊಯ್ದುಕೊಂಡಿದ್ದಾರೆ. “ನನಗೆ ದೆಹಲಿಗೆ ಬರಲು ಆಗಲಿಲ್ಲ. ಬೆಂಗಳೂರಿಗೆ ಶನಿವಾರ ಬಂದು ನಿಮ್ಮನ್ನು ನೋಡುತ್ತೇನೆ.

ನಿಮಗೋಸ್ಕರ ಪ್ರಾಣ ಕೊಡಲು ಸಿದ್ಧನಿದ್ದೇನೆ. ಇಷ್ಟೇ ಅಣ್ಣ, ನನ್ನ ಕೈಯಲ್ಲಿ ಆಗುವುದು. ನನಗೆ ಡಿಕೆಶಿಯೇ ಬಾಸ್‌. ನನ್ನಿಂದ ನಿಮಗೆ ಅಭಿಮಾನ ಕೊಡುವುದು ಇಷ್ಟೇ. ನಾನು ಡಿಕೆಶಿಯ ಅಪ್ಪಟ ಅಭಿಮಾನಿ. ಸಾಯುವವರೆಗೂ ನಿಮ್ಮ ಜೊತೆಯಲ್ಲೇ ಅಭಿಮಾನಿಯಾಗಿ ಇರುತ್ತೇನೆ. ಇದು ನನ್ನ ಸಣ್ಣ ಕಾಣಿಕೆ’ ಎನ್ನುತ್ತಾ ಬ್ಲೇಡಿನಿಂದ ತಮ್ಮ ಕೈ ಮೇಲೆ “ನನ್ನ ನಾಯಕ ಡಿಕೆಎಸ್‌’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next