Advertisement

ಕ್ರೆಡಿಟ್‌ ಕಾರ್ಡ್‌: ಗ್ರಾಹಕನಿಗೆ 48,695 ರೂ. ಖೋತಾ !

10:18 AM Mar 09, 2018 | Team Udayavani |

ವಿಟ್ಲ : ರಾಷ್ಟ್ರೀಕೃತ ಬ್ಯಾಂಕಿನ ಕ್ರೆಡಿಟ್‌ ಕಾರ್ಡ್‌ ಬಳಸಿ, ಕ್ಯಾಶ್‌ಲೆಸ್‌ ವ್ಯವಹಾರ ನಡೆಸಿದ ಗ್ರಾಹಕರೋರ್ವರ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಗ್ರಾಹಕರನ್ನು ಸತಾಯಿಸಿಯೂ ಜವಾಬ್ದಾರಿಯುತವಾದ ಯಾವುದೇ ಉತ್ತರ ನೀಡದೇ ನುಣುಚಿಕೊಳ್ಳುವ ಮೂಲಕ ಬ್ಯಾಂಕ್‌ ಗ್ರಾಹಕ ಸೇವಾ ಕೇಂದ್ರ ಮತ್ತು ಒಂಬುಡ್ಸ್‌ ಮನ್‌ ವ್ಯಾವಹಾರಿಕ ಚಿಂತನೆಯನ್ನೂ ಬಿಟ್ಟು ಹಣವನ್ನೂ ಹಿಂದಿರುಗಿಸದೇ ಗ್ರಾಹಕನ ವಿಶ್ವಾಸಕ್ಕೆ ಧಕ್ಕೆ ತಂದಿದೆ.

Advertisement

ನಗದು ರಹಿತ ವ್ಯವಹಾರ ವ್ಯವಸ್ಥೆಗೆ ಸ್ಪಂದಿಸಿದ ವಿಟ್ಲಪಟ್ನೂರು ಗ್ರಾಮದ ಉದಯ ಕಾನ ಅವರು ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಮೂಲಕ ವ್ಯವಹಾರ ನಡೆಸುತ್ತಿದ್ದರು. ಉಪನ್ಯಾಸಕರೂ ಕೃಷಿಕರೂ ಆಗಿರುವ ವ್ಯವಹಾರದಲ್ಲಿ ಅನನುಭವಿಯೂ ಅಲ್ಲ. ನಾಲ್ಕು ತಿಂಗಳ ಹಿಂದೆ ವಿಟ್ಲದ ಶ್ರೀನಿವಾಸ್‌ ಟ್ರೇಡರ್ನಿಂದ ಸಾಮಗ್ರಿ ಖರೀದಿಸಿದ ಅವರು ಕ್ರೆಡಿಟ್‌ ಕಾರ್ಡ್‌ ಮೂಲಕ 48,695 ರೂ. ಪಾವತಿಸಿದ್ದರು. ಆ ದಿನ ಅವರ ಖಾತೆಯಿಂದ ಹಣ ತೆಗೆದ ಸಂದೇಶ ಬಂದಿತ್ತು. ಆದರೆ ಅದು ಶ್ರೀನಿವಾಸ್‌ ಟ್ರೇಡರ್ ಖಾತೆಗೆ ಜಮಾ ಆಗಲಿಲ್ಲ. ಇಬ್ಬರೂ ಒಂದೆರಡು ದಿವಸಗಳಲ್ಲಿ ಪಾವತಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. 

ಹಣ ಜಮೆಯಾಗದ ಕಾರಣ ಉದಯ ಅವರು ಖಾತೆಯಲ್ಲಿ ಹಣ ಇರಬಹುದು ಎಂದುಕೊಂಡಿದ್ದರು. 15 ದಿವಸಗಳ ಬಳಿಕ ಅವರ ಖಾತೆಯಿಂದ 48,695 ರೂ. ಕಡಿತಗೊಳಿಸಲಾಯಿತು. ತತ್‌ಕ್ಷಣ ಅವರು ಶ್ರೀನಿವಾಸ್‌ ಟ್ರೇಡರ್ ಮಾಲಕರನ್ನು ಸಂಪರ್ಕಿಸಿದರು. ಆದರೆ ಅವರ ಖಾತೆಗೆ ಜಮಾ ಆಗಲಿಲ್ಲ. ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿದ ಅವರಿಗೆ ದೂರು ದಾಖಲಿಸಲು ಸೂಚನೆ ನೀಡಲಾಯಿತು. ಅವರ ಸೂಚನೆಯನ್ನೆಲ್ಲ ಪಾಲಿಸಿಯೂ ಸಮಸ್ಯೆ ಪರಿಹಾರದ ನಿರೀಕ್ಷೆಯಲ್ಲಿದ್ದ ಉದಯ ಅವರು ಮತ್ತೆ ಸಮಸ್ಯೆಯ ಸುಳಿಯಲ್ಲಿ ಸಿಗುವಂತಾಯಿತು. ಅವರು ಒಂಬುಡ್ಸ್‌ಮನ್‌ಗೆ ದೂರು ನೀಡಿದರು. ಅವರೂ ಸಮಸ್ಯೆಯನ್ನು ಪರಿಹರಿಸುವ ಬದಲಾಗಿ ಇದು ನಮಗೆ ಸಂಬಂಧಪಟ್ಟಿರುವುದಿಲ್ಲ ಎಂದು ತನಿಖೆ ಪ್ರಕ್ರಿಯೆಯಿಂದ ತಪ್ಪಿಸಿಕೊಂಡರು.

ಕಸ್ಟಮರ್‌ ಕೇರ್‌ನವರು ಪ್ರಕರಣವನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ. ಗ್ರಾಹಕರ ಸಮಸ್ಯೆಯನ್ನು 75 ದಿನಗಳ ಒಳಗೆ ಮುಗಿಸಬೇಕೆಂಬ ಕಾನೂನಿದೆ. ಆದುದರಿಂದ ನಾವು ನಿಮ್ಮ ಈ ಪ್ರಕರಣವನ್ನು ಮುಕ್ತಾಯಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಗ್ರಾಹಕರಾದ ಉದಯ ಕಾನ ಅವರು ತನ್ನ ಖಾತೆಯಿಂದ ಹಣವನ್ನು ತೆಗೆದು ಸಂಬಂಧಪಟ್ಟವರಿಗೆ ಹಸ್ತಾಂತರಿಸದೇ ನನಗೂ ಹಿಂದಿರುಗಿಸದೇ ಈ ಪ್ರಕರಣವನ್ನು ಮುಚ್ಚಿದರೆ ನ್ಯಾಯ ಸಿಕ್ಕಂತಾಗುತ್ತದೆಯೇ ? ನನಗೆ ನ್ಯಾಯ ಬೇಕು ಮತ್ತು ನನ್ನ ಹಣವನ್ನು ಹಿಂದಿರುಗಿಸಬೇಕು ಹಾಗೂ ಕಳೆದ ನಾಲ್ಕು ತಿಂಗಳ ಕಾಲ ಬ್ಯಾಂಕ್‌ ನೀಡಿದ ಸಂಕಷ್ಟಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಉದಯಶಂಕರ್‌ ನೀರ್ಪಾಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next