ಇಂದು ಕಂಪ್ಯೂಟರ್ ಅಥವಾ ಮೊಬೈಲ್ ಕೀ ಬೋರ್ಡ್ ನಲ್ಲಿ ಅತೀ ಹೆಚ್ಚು ಬಳಕೆಯಾಗುವ ಕೀ ಎಂದರೇ ಕಟ್, ಕಾಪಿ, ಪೇಸ್ಟ್. ಒಂದು ಕ್ಷಣ ಈ ಆಯ್ಕೆಗಳು ಇರದಿದ್ದರೇ ಹೇಗೆ ಎಂಬುದನ್ನು ಊಹಿಸಿಕೊಳ್ಳಿ ! ಈ ಫೀಚರ್ ಇಲ್ಲದಿದ್ದರೇ ಯಾವುದೇ ಫೈಲ್ (ಚಿತ್ರ,ವಿಡಿಯೋ, ಇತ್ಯಾದಿ) ಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಡೌನ್ ಲೋಡ್ ಆಯ್ಕೆಯನ್ನು ಹೆಚ್ಚಾಗಿ ಅವಲಂಬಿಸಬೇಕಾಗಿತ್ತು. ಇಂತಹ ಕಟ್, ಕಾಪಿ, ಪೇಸ್ಟ್ ಆಯ್ಕೆಗೆ ನಾಂದಿ ಹಾಡಿದ ಹಾಗೂ ಬ್ರೌಸರ್ ಎಂಬ ಪದ ಹುಟ್ಟು ಹಾಕಿದ ಮಾಂತ್ರಿಕ ವಿಜ್ಞಾನಿ ಎಂದರೇ ಲ್ಯಾರಿ ಟೆಸ್ಲರ್.
ಕಂಪ್ಯೂಟರ್ ಪ್ರೋಗ್ರಾಂನಲ್ಲಿ ಕಟ್, ಕಾಪಿ, ಪೇ್ಸ್ಟ್ ಎಂಬ ಪರಿಕಲ್ಪನೆ ಗಣಕಯಂತ್ರ ಜಗತ್ತಿಗೆ ಪರಿಚಯಿಸಿದ ನಂತರ ಅದು ಪ್ರಪಂಚದಾದ್ಯಂತ ಬಹುಪಯೋಗಿ ಸೌಲಭ್ಯವಾಗಿ ಮಹತ್ವ ಪಡೆದುಕೊಂಡಿತು. ಕಟ್, ಕಾಪಿ, ಪೇಸ್ಟ್ ಸೇರಿದಂತೆ ವ್ಯೆಯಕ್ತಿಕ ಕಂಪ್ಯೂಟರಿಂಗ್ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಪರಿಚಯಿಸಿದ ಚಾಣಾಕ್ಷ ಈ ಲ್ಯಾರಿ ಟೆಸ್ಲರ್. ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್ ರಷ್ಟೇ ಖ್ಯಾತರಾದ ಟೆಸ್ಲರ್, ಕಂಪ್ಯೂಟರ್ ಯಂತ್ರಗಳನ್ನು ಇಂಜಿನಿಯರಿಂಗ್ ಮಾಡದೇ ಇರುವವರೂ ಸಹ ಬಳಸಬಲ್ಲದಷ್ಟು ಸರಳೀಕರಣಗೊಳಿಸಿದ್ದರು.
1945 ಏಪ್ರಿಲ್ 24ರಂದು ನ್ಯೂಯಾರ್ಕ್ ನಲ್ಲಿ ಲಾರೆನ್ಸ್ ಗೋರ್ಡನ್ ಟೆಸ್ಲರ್ ಜನಿಸಿದ. ಈತನ ತಂದೆ ಅರವಳಿಕೆ ತಜ್ಞರಾಗಿದ್ದರು. ಪ್ರೌಢ ಶಾಲೆಯಲ್ಲಿರುವಾಗಲೇ ಟೆಸ್ಲರ್ ಗೆ ಕಂಪ್ಯೂಟರ್ ತಂತ್ರಾಂಶದ ಕಡೆ ಒಲವು ಹೆಚ್ಚಿದ್ದನ್ನು ಗಮನಿಸಿದ ಶಿಕ್ಷಕರು ಅದರ ಕುರಿತೇ ಹೆಚ್ಚಿನ ತರಬೇತಿ ನೀಡಿದ್ದರು. ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸೇರಿದಾಗ ಪ್ರತಿವಾರ ಅರ್ಧಗಂಟೆ ಸಮಯ ಕಂಪ್ಯೂಟರ್ ಮುಂದೆ ಕಳೆಯಲು ಅವಕಾಶ ಸಿಕ್ಕಿತ್ತು. ಇದನ್ನು ಸದುಪಯೋಗ ಪಡಿಸಿಕೊಂಡ ಟೆಸ್ಲರ್ ಪ್ರೋಗ್ರಾಂ ಡಿಸೈನ್ ನತ್ತ ಹೆಚ್ಚಿನ ಗಮನ ಹರಿಸಿದ. ತದನಂತರದಲ್ಲಿ ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವ್ಯಾಸಂಗ ಮಾಡಿದ್ದನು. ಅದೇ ವೇಳೆಗೆ(1960) ಸ್ಟ್ಯಾನ್ ಫೋರ್ಢ್ ಕೃತಕ ಬುದ್ದಿಮತ್ತೆ ಪ್ರಯೋಗಾಲಯದಲ್ಲಿ (ಎಸ್ ಎಐಎಲ್) ವೃತ್ತಿ ಜೀವನ ಆರಂಭಿಸುವ ಅವಕಾಶ ದೊರಕಿತು. 10 ವರ್ಷಗಳ ನಂತರ ಕೃತಕ ಬುದ್ದಿಮತ್ತೆ ಎಂಬುದು ಹಲವು ವರ್ಷಗಳ ಕಾಲ ಬಳಸಬಹುದಾದ ತಂತ್ರಜ್ಞಾನವಲ್ಲ ಎಂದು ಅಭಿಪ್ರಾಯಪಟ್ಟು ರಾಜಿನಾಮೆ ನೀಡಿದನು. ಈ ವೇಳೆಗೆ ತನ್ನ ಕಾಲೇಜು ಗೆಳತಿಯನ್ನು ವಿವಾಹವಾಗಿ ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆದನು.
1973ರಲ್ಲಿ ಜೆರಾಕ್ಸ್ ಪಾಲೋ ಅಲ್ಟೋ ಸಂಶೋಧನಾ ಕೇಂದ್ರದಲ್ಲಿ(PARC) ಕೆಲಸ ಮಾಡುವಾಗ ಕಾಪಿ, ಕಟ್. ಪೇಸ್ಟ್ ಕ್ರಿಯೆಯನ್ನು ಮೊದಲಿಗೆ ಕಂಡು ಹಿಡಿದ ಟೆಸ್ಲರ್, ಆ್ಯಪಲ್ ಕಂಪ್ಯೂಟರ್ ಅಭಿವೃದ್ಧಿ ಹಂತದಲ್ಲಿ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಸುಮಾರು 20 ವರ್ಷಗಳ ಕಾಲ ಆ್ಯಪಲ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. 1983ರಲ್ಲಿ ಆ್ಯಪಲ್ ಕಂಪೆನಿಯು ಈ ತಂತ್ರಗಾರಿಕೆಯನ್ನು ತನ್ನ ಸಾಫ್ಟ್ ವೇರ್ ಗಳಲ್ಲಿ ಆಳವಡಿಸುವ ಮೂಲಕ ಅದನ್ನು ಇನ್ನಷ್ಟು ವ್ಯಾಪಕಗೊಳಿಸಿತು.
ಆ ಬಳಿಕ ಟೈಪಿಂಗ್ ನಲ್ಲಿ ಕಾಪಿ, ಕಟ್ ಪೇಸ್ಟ್ ಸೌಲಭ್ಯ ಬಹಳ ಸಹಕಾರಿಯಾಯಿತು. ಟೈಪಿಂಗ್ ನಲ್ಲಿ ತಪ್ಪುಗಳು ಸಂಭವಿಸಿದಾಗ ಅದನ್ನು ಸರಿಪಡಿಸುವುದು ಬಹಳ ಸುಲಭವಾಯಿತು. ಒಂದೇ ಪದ, ವಾಕ್ಯ, ಹಲವು ಕಡೆ ಬಳಸುವಾಗ ಪದೇ ಪದೇ ಟೈಪ್ ಮಾಡುವ ಪ್ರಮೇಯವೂ ತಪ್ಪಿತು. 1976ರಲ್ಲಿ ಟೆಸ್ಲರ್ ‘ಬ್ರೌಸರ್’ ಎಂಬ ಶಬ್ದವನ್ನು ಹುಟ್ಟು ಹಾಕಿದ್ದರು. ಟೆಕ್ಸ್ ಎಡಿಟರ್ಸ್ ಮತ್ತು ಆರಂಭಿಕ ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ ಗಳ ಅಭಿವೃದ್ದಿಯಲ್ಲಿ ಈ ಸಂಶೋಧನೆಯೇ ಪ್ರಮುಖ ಪಾತ್ರವಹಿಸಿತ್ತು.
ಲೀಸಾ, ಮ್ಯಾಸಿಂತೋಸ್, ನ್ಯೂಟನ್ ಕಂಪ್ಯೂರ್ ನ ಇಂಟರ್ ಫೇಸ್ ಡಿಸೈನ್ ಮಾಡುವಲ್ಲಿ ಇವರ ಕೊಡುಗೆ ದೊಡ್ಡದಿದೆ. 1997ರಲ್ಲಿ ಆ್ಯಪಲ್ ಸಂಸ್ಥೆಯನ್ನು ತೊರೆದು ಲ್ಯಾರಿ ಟೆಸ್ಲರ್ 2001ರಿಂದ 2005ರವರೆಗೂ ಅಮೆಜಾನ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅದಾದ ನಂತರ ಯಾಹೂದಲ್ಲಿಯೂ ಕೂಡ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು 2008ರಲ್ಲಿ ವೃತ್ತಿಜೀವನದಿಂದ ದೂರ ಸರಿದಿದ್ದರು. 2009ರಿಂದ ಸ್ವತಂತ್ರ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಟೆಸ್ಲರ್ 74ನೇ ವಯಸ್ಸಿನಲ್ಲಿ ಫೆಬ್ರವರಿ 16, 2020ರಂದು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಇವರ ಅಗಲಿಕೆಗೆ ಟೆಕ್ ಲೋಕದ ದಿಗ್ಗಜ ಸಂಸ್ಥೆಗಳಾದ ಜೆರಾಕ್ಸ್, ಆ್ಯಪಲ್, ಸೇರಿದಂತೆ ಅನೇಕ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ. 70ರ ದಶಕದಲ್ಲಿ ಕಂಪ್ಯೂಟರ್ ಅಭಿವೃದ್ಧಿ ಮಾಡಲು ಟೆಸ್ಲರ್ ಸಾಕಷ್ಟು ಕೊಡುಗೆ ನೀಡಿದ್ದರು. ಇಂದು ನಿಮ್ಮ ಕೆಲಸ ಸರಳವಾಗಲು ಟೆಸ್ಲರ್ ಅವರ ಕ್ರಾಂತಿಕಾರೀ ಅನ್ವೇಷಣೆಗಳೇ ಕಾರಣ ಎಂದು ಜೆರಾಕ್ಸ್ ಸಂಸ್ಥೆಯು ಅಭಿಪ್ರಾಯಪಟ್ಟಿತ್ತು.
-ಮಿಥುನ್ ಮೊಗೇರ