ಪಾಂಡಿ: ಶಿಕ್ಷಣ ಎನ್ನುವುದು ಕೇವಲ ಓದುವಿಕೆಗೆ ಮಾತ್ರ ಸೀಮಿತವಲ್ಲ. ಹಾಡು, ನಾಟಕ, ಆಟ, ಚಿತ್ರಕಲೆ ಇತ್ಯಾದಿ ಗಳೆಲ್ಲವನ್ನೂ ಅರ್ಜಿಸಿಕೊಂಡು ನಾವು ನಮ್ಮ ಜ್ಞಾನ ಸಂಪತ್ತನ್ನು ವೃದ್ಧಿಗೊಳಿಸಬೇಕು. ತಾಂತ್ರಿಕತೆಯ ನಾಗಾಲೋಟದಲ್ಲಿ ಮಾಯ ವಾಗುತ್ತಿರುವ ನಮ್ಮ ಕಲೆ, ಸಂಸ್ಕೃತಿ, ಆಚಾರ, ವಿಚಾರ ಗಳು, ಕಲಾರೂಪಗಳು ಇತ್ಯಾದಿಗಳನ್ನು ಉಳಿಸಿ ಬೆಳೆಸಲು, ಅವುಗಳ ಮಹತ್ವವನ್ನು ಪುಟಾಣಿಗಳಿಗೆ ತಿಳಿಸಲು ಇಂತಹ ಶಿಬಿರಗಳು ಉತ್ತಮ ವೇದಿಕೆಗಳಾಗಿವೆ. ಇವು ಸೃಜನಶೀಲತೆಯನ್ನು ಬೆಳೆಸುತ್ತವೆ ಎಂದು ದೇಲಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಮುಸ್ತಫ ಹಾಜಿಯವರು ಅಭಿಪ್ರಾಯಪಟ್ಟರು.
ಪಾಂಡಿ ಜಿ.ಎಚ್.ಎಸ್.ಎಸ್.ನಲ್ಲಿ ಆಯೋಜಿಸಿದ ಕುಂಬಳೆ ಉಪಜಿಲ್ಲಾ ಮಟ್ಟದ ದ್ವಿದಿನ ನಾಟಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ದೇಲಂಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಉಷಾ ಕುಮಾರಿ ಅವರು ಮೌಲ್ಯಯುತ ಶಿಕ್ಷಣದ ಬೆಳವಣಿಗೆಗೆ ಸಹಾಯಕವಾಗುವ ಇಂತಹ ಶಿಬಿರಗಳು ಮಕ್ಕಳಿಗೆ ನಿರಂತರವಾಗಿ ಸಿಗುತ್ತಿರಬೇಕು ಎಂದರು.ದೇಲಂಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷ ರತನ್ ಕುಮಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಕುಂಬಳೆ ಉಪಜಿಲ್ಲಾ ಸಮೂಹ ಸಂಪನ್ಮೂಲ ಕೇಂದ್ರದ ಸಂಯೋಜಕರಾದ ಎನ್.ವಿ. ಕುಂಞಿ ಕೃಷ್ಣನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಅಗತ್ಯ ಮತ್ತು ಉದ್ದೇಶಗಳನ್ನು ತಿಳಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದಿವಾಕರನ್ ಬಿ. ಮತ್ತು ಎಸ್.ಎಂ.ಸಿ. ಅಧ್ಯಕ್ಷ ತೋಟ್ಟಂ ಅಬ್ದುಲ್ಲ ಅವರು ಶುಭಹಾರೈಸಿದರು.
ಎರಡು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ನಾಟಕಕಾರ ಉದಯ್ ಸಾರಂಗ್ ಪೆರ್ಲ, ಶರತ್ ಕುಮಾರ್, ವಿಜಯನ್ ಶಂಕರಪ್ಪಾಡಿ, ರಂಜಿತ್ ಪೆರ್ಲ, ರೋಹಿತ್ ಮಾಟೆಬಯಲು ಹಾಗು ಶಾಲಾ ಅಧ್ಯಾಪಕ ವೃಂದದವರು ಸಹಕರಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ದ್ವಿದಿನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಅವರು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ದೇಲಂಪಾಡಿ ವಂದಿಸಿದರು. ಶಾಲಾ ಶಿಕ್ಷಕ ಸುಭಾಷ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.