ಉದ್ಯಾವರ(ಕಟಪಾಡಿ): ಕಲಾ ಪ್ರಕಾರಗಳಲ್ಲಿ ತೊಡಗಿಕೊಳ್ಳುವುದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಸೃಜನಶೀಲತೆ ಮೊಳಕೆಯೊಡೆಯುತ್ತದೆ ಎಂದು ಖ್ಯಾತ ಭರತನಾಟ್ಯ ತಜ್ಞೆ, ಮಣಿಪಾಲ ಹೆಜ್ಜೆಗೆಜ್ಜೆ ಪ್ರತಿಷ್ಠಾನದ ನಿರ್ದೇಶಕಿ ಯಶಾ ರಾಮಕೃಷ್ಣ ಹೇಳಿದರು.
ಉದ್ಯಾವರ ಶ್ರೀ ವಿಠೊಬ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಹತ್ತನೇ ವರ್ಷದ ಯು.ಎಫ್.ಸಿ. ಮಕ್ಕಳ ಹಬ್ಬ 2019 ಸಮಾರೋಪ ಭಾಷಣದಲ್ಲಿ ಅವರು ಮಾತನಾಡಿದರು.
ಕಲಾ ಪ್ರಕಾರಗಳಲ್ಲಿ ತೊಡಗಿಕೊಳ್ಳುವುದರಿಂದ ಜೀವನದಲ್ಲಿ ಆತ್ಮವಿಶ್ವಾಸ, ಸಾಧನೆಯ ಛಲ ಹುಟ್ಟಿ ವ್ಯಕ್ತಿತ್ವ ವಿಕಸನಗೊಂಡು ಜೀವನ ರೂಪುಗೊಳ್ಳುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದರು.
ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ| ಸುಕನ್ಯಾ ಮೇರಿ ಜೆ. ಮಾತನಾಡಿ, ಪಾಠೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳ ಶಿಕ್ಷಣದ ಮೇಲೂ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ ಎಂದರು.
ಉದ್ಯಾವರ ಗ್ರಾ.ಪಂ.ಉಪಾಧ್ಯಕ್ಷ ರಿಯಾಜ್ ಪಳ್ಳಿ, ಸಂಸ್ಥೆ ಕಳೆದ 10 ವರ್ಷಗಳ ಹಿಂದೆ ಈ ಕಾರ್ಯಕ್ರಮವನ್ನು ಹುಟ್ಟುಹಾಕಿದ ಸಂಸ್ಥೆಯ ಗೌರವಾಧ್ಯಕ್ಷ ದಿ|ಮಂಜುನಾಥ ಉದ್ಯಾವರ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ. ಈ ಕಾರ್ಯಕ್ರಮ ಮುಂದುವರಿದು ಅನೇಕ ವಿದ್ಯಾರ್ಥಿ ಪ್ರತಿಭೆಗಳು ಹೊರಹೊಮ್ಮಲಿ ಎಂದರು.
ಅಧ್ಯಕ್ಷತೆಯನ್ನು ನ್ಯಾಯವಾದಿ ಬಿ. ನಾಗರಾಜ್ ವಹಿಸಿದ್ದರು.ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ತಿಲಕ್‌ರಾಜ್ ಸಾಲ್ಯಾನ್, ಪ್ರ|ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷೆ ಸುಗಂಧಿಶೇಖರ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ವಿಜೇತರನ್ನು ಪರಿಚಯಿಸಿದರು. ಹಿರಿಯ ಸದಸ್ಯೆ ಮೇರೀ ಡಿ’ಸೋಜಾ ವಂದಿಸಿದರು. ಮಾಜಿ ಅಧ್ಯಕ್ಷ ಆಬಿದ್ ಆಲಿ ನಿರೂಪಿಸಿದರು.