ಹರಿಹರ: ಮಾತು ಹಾಗೂ ಭಾಷೆಯಲ್ಲಿ ಸಂವೇದನಾಶೀಲತೆ ಇದ್ದಾಗ ಮಾತ್ರ ಕಾವ್ಯ ಸೃಜನಶೀಲವಾಗುತ್ತದೆ ಎಂದು ಪ್ರೊ| ಎಚ್.ಎ.ಭಿಕ್ಷಾವರ್ತಿಮಠ ಅಭಿಪ್ರಾಯಪಟ್ಟರು. ಪರಸ್ಪರ ಬಳಗದಿಂದ ನಗರದ ಗಿರಿಯಮ್ಮ ಪಪೂ ಕಾಲೇಜಿನಲ್ಲಿ ಏರ್ಪಡಿಸಿದ್ದ ಯಗಾದಿ ವಿಶೇಷ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡುವ ಮಾತಿನಲ್ಲಿ, ಬಳಸುವ ಭಾಷೆಯಲ್ಲಿ ಸಂವೇನಾಶೀಲತೆ ಬೆಳೆಸಿಕೊಂಡರೆ ಅಂಥವರು ಬರೆದ ಕಾವ್ಯ ಸೃಜನಶೀಲವಾಗುತ್ತದೆ ಎಂಬುದನ್ನು ಕವಿಯಾಗಬಯಸುವವರು ಸದಾ ಗಮನದಲ್ಲಿಟ್ಟುಕೊಂಡಿರಬೇಕು ಎಂದರು. ಕವಿಗಳು ಬರಹಗಾರನು ಪರಂಪರೆಯ ಪ್ರಜ್ಞೆ ಬೆಳೆಸಿಕೊಂಡರೆ, ಅವನ ಅಭಿವ್ಯಕ್ತಿಗೆ ಶಕ್ತಿ ಬರುತ್ತದೆ.
ಮಾತಿಗೆ ಅಂಜದಿದ್ದರೆ ಸಂತೆ, ಮಾತಿಗೆ ನಾಚಿದರೆ ಕವಿತೆ ಎಂಬ ಸಿಪಿಕೆಯವರ ಮಾತನ್ನು ಉಲ್ಲೇಖೀಸಿದ ಅವರು, ಕವಿತೆ ಬರೆಯುವವರು ಪದಗಳನ್ನು ದುಂದು ಮಾಡದೆ, ಅಳೆದು, ತೂಗಿ ಬರೆಯಬೇಕು. ಶ್ರೇಷ್ಠ ಕವಿಗಳು ಬರೆದ ಕವಿತೆಗಳನ್ನು ಓದುವುದರಿಂದಈ ಕಲೆ ಸಿದ್ದಿಸುತ್ತದೆ ಎಂದರು.
ಕವಿಗೋಷ್ಠಿಯಲ್ಲಿ ಹೂಗಾರ್ ಎಸ್.ಎಚ್., ಡಿ.ಡಿ.ಸಿಂದಗಿ, ಅಬ್ದುಲ್ ಸಲಾಂ, ಕೆ.ಬಸವರಾಜ ಉಕ್ಕಡಗಾತ್ರಿ, ಕೆ.ಪಂಚಾಕ್ಷರಿ ಕಮಲಾಪುರ, ಸಿ.ಎಚ್.ಕೊಟ್ರೇಶ್, ಬಿ.ಮಗು ರತ್ನವ್ವ ಸಾಲಿಮಠ, ಪ್ರೊ| ಸಿ.ವಿ.ಪಾಟೀಲ್, ಶಾಂತ.ಎನ್.ಎಸ್., ಡಿ.ಫ್ರಾನ್ಸಿಸ್, ಚಂದನಾ ವೈ.ನೀಲಪ್ಪ, ಸಲ್ಮಾಬಾನು, ಜೆ.ಕಲೀಂಭಾಷಾ, ಲಲಿತಮ್ಮ ಡಾ| ಚಂದ್ರಶೇಖರ, ಶಬಾನ ಮತ್ತಿತರರು ಸ್ವರಚಿತ ಕವಿತೆ ವಾಚಿಸಿದರು.
ಜೆ.ಕಲಿಬಾಷಾ ಅವರ ಗಝಲ್, ಸಿ.ವಿ.ಪಾಟೀಲರ ಯಾವ ಚಂದ್ರ ದರ್ಶನ, ಎಸ್. ಎಚ್.ಹೂಗಾರ್ ಅವರ ಯಾರಿಗೆ ತೋರಿಸಲಿ ಚಂದ್ರನನು, ಕೆ.ಪಂಚಾಕ್ಷರಿ ಅವರ ಅದೆಷ್ಟು ಯುಗಾದಿಗಳು ನಮ್ಮನ್ನೆಚ್ಚರಿಸಿವೆ ಎಂಬ ಕವಿತೆಗಳು ಸಭಿಕರ ಮನಸೂರೆಗೊಂಡವು. ಡಿ. ಎಂ. ಮಂಜುನಾಥಯ್ಯ ಸ್ವಾಗತಿಸಿದರು. ಸಲ್ಮಾಬಾನು ನಿರೂಪಿಸಿದರು. ಬಿ.ರೇವಣನಾಯ್ಕ ವಂದಿಸಿದರು.