Advertisement
ಸತ್ತ ವ್ಯಕ್ತಿಯ ಹೆಸರು, ಗೋತ್ರ (ಬಳಿ) ಹೇಳಿ ಪಿಂಡವನ್ನು (ಅನ್ನ)ಕೊಟ್ಟರೆ ಆತನಿಗೆ ತೃಪ್ತಿಯಾಗುತ್ತದೆ. ಇದಕ್ಕೆ ಪೂರಕವಾಗಿ ಪ್ರಕೃತಿಯಲ್ಲಿರುವ ಮೂರು ವಿಷಯಗಳನ್ನು ವೇದವ್ಯಾಸರು ಉದಾಹರಿಸುತ್ತಾರೆ. ತಾಯಿ ಮೀನು ಮರಿ ಮೀನಿಗೆ ಯಾವೊಂದು ಆಹಾರವನ್ನೂ ಉಣಿಸುವುದಿಲ್ಲ. ಕೇವಲ ನೊಟದಿಂದಲೇ (ದರ್ಶನ) ಮರಿ ಬೆಳೆಯುತ್ತದೆ. ಆಮೆ ಮೊಟ್ಟೆ ಇಟ್ಟ ಬಳಿಕ ಅದು ಇನ್ನೆಲ್ಲೋ ಇರುತ್ತದೆ. ಅದು ಕೇವಲ ಮರಿಯನ್ನು ಯೋಚಿಸುತ್ತಲೇ (ಧ್ಯಾನ) ಇರುತ್ತದೆ. ಯೋಚಿಸುವುದರಿಂದಲೇ ಮರಿ ಬೆಳೆಯುತ್ತದೆ. ಪಕ್ಷಿಗಳು ಸಂಸ್ಪರ್ಶದಿಂದ (ಸ್ಪರ್ಶನ) ಬೆಳೆಯುತ್ತವೆ. ಹೀಗೆ ದೇವರು ಒಂದು ವ್ಯವಸ್ಥೆ ಮಾಡಿಟ್ಟಿದ್ದು ಅದರ ಪ್ರಕಾರ ಜಗತ್ತು ನಡೆಯುತ್ತದೆ. ಇವುಗಳಿಗೆ ಮನುಷ್ಯ ಪ್ರಪಂಚ ಅಥವಾ ಇತರ ಪ್ರಾಣಿ ಪ್ರಪಂಚದಲ್ಲಿರುವಂತಹ ತಾಯಿ ಶುಶ್ರೂಷೆ ವ್ಯವಸ್ಥೆ ಇಲ್ಲದಿದ್ದರೂ ಮರಿಗಳು ಬೆಳೆಯುತ್ತವೋ ಹಾಗೆ ಸತ್ತ ವ್ಯಕ್ತಿಗೆ ಪಿಂಡದಿಂದಲೇ ತೃಪ್ತಿ ದೊರಕುತ್ತದೆ ಎಂಬುದು ದೈವವ್ಯವಸ್ಥೆ ಎಂದು ವೇದವ್ಯಾಸರು ಉತ್ತರಿಸುತ್ತಾರೆ. ನಾವೀಗ ಇದನ್ನು ದೈವವ್ಯವಸ್ಥೆ ಎನ್ನುವುದಕ್ಕಿಂತ ಪ್ರಕೃತಿ, ನಿಸರ್ಗದ ವ್ಯವಸ್ಥೆ ಎಂದರೆ ಹೆಚ್ಚು ಜನರಿಗೆ ಪ್ರಿಯವಾಗಬಹುದು. ಬಹುಜನರಿಗೆ ದೈವ ಎನ್ನುವುದಕ್ಕಿಂತ ನಿಸರ್ಗ, ಪ್ರಕೃತಿ ಹೆಚ್ಚು ಆಪ್ಯಾಯಮಾನ, ಒಂದರ್ಥದಲ್ಲಿ ಒಂದೇ ಆದರೂ… ವೇದವ್ಯಾಸರು ಹೇಳಿದ ಪಿಂಡಪ್ರದಾನದ ತೃಪ್ತಿಗಿಂತ ಮೀನು, ಆಮೆ, ಪಕ್ಷಿ ಪ್ರಪಂಚ ಜೀವನದ ಬಗ್ಗೆ ವೈಜ್ಞಾನಿಕ ದೃಷ್ಟಿಕೋನ ಮುಖ್ಯವೆನಿಸುತ್ತದೆ.
Related Articles
Advertisement
ಮೊಟ್ಟೆ ಕಾವಿನಿಂದಲೇ ಪಕ್ಷಿ ಸಂತಾನವೃದ್ಧಿ: ಪಕ್ಷಿಗಳು ಸ್ಪರ್ಶದಿಂದ ಮೊಟ್ಟೆಗೆ ಶಾಖ ಕೊಟ್ಟು ಬೆಳೆಸುತ್ತವೆ. ಕೋಳಿಗಳಿಗೆ ಸುಮಾರು 21 ದಿನದ ಕಾವಿನಲ್ಲಿ ಮರಿ ಹುಟ್ಟಿದರೆ ನವಿಲು ಸುಮಾರು 15 ದಿನಗಳಲ್ಲಿ ಹುಟ್ಟುತ್ತವೆ. ಹೀಗೆ ವಿವಿಧ ಪಕ್ಷಿಗಳು ಬೇರೆ ಬೇರೆ ಕಾಲಾವಧಿಯಲ್ಲಿ ಮೊಟ್ಟೆ ಇಡುತ್ತವೆ. ಎಲ್ಲ ಪಕ್ಷಿಗಳೂ ಮೊಟ್ಟೆ ಮೂಲಕವೇ ಸಂತಾನೋತ್ಪತ್ತಿ ಮಾಡುತ್ತವೆ. ಹಾವುಗಳಲ್ಲಿಯಾದರೂ ಇದಕ್ಕೆ ಅಪವಾದವಿದೆ. ಉದಾಹರಣೆಗೆ ಕನ್ನಡಿ ಹಾವು ಮೊಟ್ಟೆ ಮೂಲಕ ಹುಟ್ಟುವುದಲ್ಲ, ಬದಲಾಗಿ ಮರಿಗಳನ್ನು ಇಡುತ್ತವೆ. ಅಂಟಾರ್ಟಿಕಾ ಪ್ರದೇಶದಲ್ಲಿ -15, -20 ಡಿಗ್ರಿ ಉಷ್ಣಾಂಶವಿದ್ದರೂ ಅಲ್ಲಿ ಪೆಂಗ್ವಿನ್ ಪಕ್ಷಿ ಮೊಟ್ಟೆಗೆ ಕಾವು ಕೊಟ್ಟೇ ಮರಿಗಳನ್ನು ಹುಟ್ಟಿಸುತ್ತದೆ. ಇದು ಹೇಗೆಂದರೆ ಗಂಡು ಪಕ್ಷಿಯ ಕಾಲಿನಡಿ ಸ್ಥಳಾವಕಾಶ ಮಾಡಿಕೊಂಡು ಉಷ್ಣವನ್ನು ಸೃಷ್ಟಿಸಿ ಮೊಟ್ಟೆಯಿಂದ ಮರಿ ಹಾಕುವಂತೆ ಮಾಡುತ್ತವೆ ಎಂದು ಪಕ್ಷಿಶಾಸ್ತ್ರಜ್ಞ ಉಡುಪಿಯ ಡಾ|ಎನ್.ಎ.ಮಧ್ಯಸ್ಥ ಅವರು ಉಲ್ಲೇಖೀಸುತ್ತಾರೆ.
ತಾಯಿ ಆರೈಕೆ: ಸಂತಾನಪ್ರಮಾಣದಲ್ಲಿ ಏರಿಳಿತ: “ಮೀನು, ಆಮೆಗಳಂತಹ ಸ್ವತಂತ್ರವಾಗಿ ಬೆಳೆಯುವ ಪ್ರಾಣಿಗಳು ತಮ್ಮ ಸಂತತಿ ಅಳಿಯಬಾರದೆಂದು ದೊಡ್ಡ ಪ್ರಮಾಣದಲ್ಲಿ ಮರಿಗಳನ್ನು ಇಡುತ್ತವೆ. ಆಮೆ ಸುಮಾರು 200 ಮರಿಗಳನ್ನು ಹುಟ್ಟಿಸಿದರೆ, ಮೀನುಗಳು ಲಕ್ಷಾಂತರ ಮೊಟ್ಟೆ ಇಡುತ್ತವೆ. ತಾಯಿ ಸಂಪರ್ಕವಿಲ್ಲದ ಕಾರಣ ಪ್ರಕೃತಿ ಈ ವೈಶಿಷ್ಟéವನ್ನು ಕಾಪಾಡಿಕೊಂಡು ಬಂದಿವೆ. ಆದರೆ ಮನುಷ್ಯರು, ಹುಲಿ, ಸಿಂಹಗಳಂತಹ ತಾಯಿ ಆರೈಕೆ ಇರುವೆಡೆ ಸಂತತಿ ಸಂಖ್ಯೆ ಕಡಿಮೆ ಇರುತ್ತವೆ. ಇದು ಡಾರ್ವಿನ್ ಮೊದಲಾದ ವಿಜ್ಞಾನಿಗಳಿಂದ ವೈಜ್ಞಾನಿಕವಾಗಿ ದೃಢಪಟ್ಟಿವೆ’ ಎಂದು ಐಎಫ್ಎಸ್ ಅಧಿಕಾರಿಯಾದ ದ.ಕ. ಮತ್ತು ಉಡುಪಿ ಜಿಲ್ಲೆಯ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಪ್ರಾದೇಶಿಕ ನಿರ್ದೇಶಕ ಡಾ| ದಿನೇಶಕುಮಾರ್ ಅಭಿಪ್ರಾಯಪಡುತ್ತಾರೆ.
ಅಲ್ಲಗಳೆಯಲಾಗದ ತಾಯಿ ನೋಟ, ಯೋಚನೆ: ಪಕ್ಷಿಗಳು ಸ್ಪರ್ಶನದಿಂದ ಮರಿಗಳನ್ನು ಸೃಷ್ಟಿಸುತ್ತವೆ ಎನ್ನುವುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವ ಅಗತ್ಯವಿಲ್ಲ. ಏಕೆಂದರೆ ಇದು ಗೋಚರದಿಂದಲೇ ತಿಳಿಯುತ್ತವೆ. ಆದರೆ ತಾಯಿ ಮೀನು ಗೋಚರದಿಂದಲೇ ಮರಿ ಮೀನುಗಳನ್ನು ಮತ್ತು ಆಮೆ ಯೋಚನೆಯಿಂದಲೇ ಮರಿಗಳನ್ನು ಬೆಳೆಸುತ್ತವೆ ಎನ್ನುವುದನ್ನು ಶ್ರುತಪಡಿಸುವುದು ಕಷ್ಟ. ಇದೇ ವೇಳೆ ಇದನ್ನು ಅಲ್ಲಗಳೆಯುವಂತಿಲ್ಲ ಎಂಬ ಅಭಿಮತ ಮೀನುಗಾರಿಕಾ ವಿಜ್ಞಾನಿ ಡಾ|ಶ್ರೀನಿವಾಸ ಹುಲಿಕೋಟಿಯವರದು.
ಒಟ್ಟಭಿಪ್ರಾಯದಲ್ಲಿ ವೇದವ್ಯಾಸರು ಆ ಕಾಲದಲ್ಲಿ ಮೀನು, ಆಮೆ, ಪಕ್ಷಿಗಳ ಸೃಷ್ಟಿ ಕ್ರಮವನ್ನು ಅರಿತುಕೊಂಡಿದ್ದರು ಎನ್ನಬಹುದು. ಆದರೆ ಇದು ಕೆಲವರಿಗೆ ಹಿಡಿಸುವುದು ಕಷ್ಟ. ಆದರೆ ವೇದವ್ಯಾಸರ ಬದಲು ಯಾರೋ ಒಬ್ಬ ವ್ಯಕ್ತಿ ಬರೆದಿದ್ದಾರೆಂದುಕೊಂಡರೂ ಬಹಳ ಪ್ರಾಚೀನ ಗ್ರಂಥದಲ್ಲಿ ಇದರ ಉಲ್ಲೇಖವಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ” x’ ಎಂಬ ಈ ಗ್ರಂಥಕರ್ತ ಪ್ರಕೃತಿಯಿಂದ ಬಹಳಷ್ಟು ತಿಳಿದುಕೊಂಡಿದ್ದಾನೆಂದರೆ ಅತಿಶಯೋಕ್ತಿಯಾಗದು.
ಬೇರ್ಪಡುತ್ತಿದ್ದಾನಾ ಮನುಷ್ಯ?ಸಂತತಿ ಪ್ರೀತಿ ಎಷ್ಟೊಂದು ಆಳವಾಗಿದೆ ಎಂದರೆ ಅದು ಪ್ರಕೃತಿ ಸಹಜವಾಗಿದೆ. ಇದು ತಾಯಿ ಆರೈಕೆ ಇಲ್ಲದ ಮೀನು, ಆಮೆಯಂತಹ ಪ್ರಾಣಿ ವರ್ಗದಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ಇದಕ್ಕಾಗಿಯೇ ಇವುಗಳು ದೊಡ್ಡ ಸಂಖ್ಯೆಯಲ್ಲಿ ಮೊಟ್ಟೆ ಇಡುತ್ತವೆ. ಇಟ್ಟ ಎಲ್ಲ ಮೊಟ್ಟೆ ಫಸಲಿಗೆ ಬರುತ್ತದೆ ಎಂದು ಖಾತ್ರಿ ಇರುವುದಿಲ್ಲ. ಏಕೆಂದರೆ ತಾಯಿ ಆರೈಕೆ ಇರುವುದಿಲ್ಲ. ಕನಿಷ್ಠ ಶೇ.50 ಆದರೂ ತನ್ನ ಸಂತತಿ ಬದುಕಿದರೆ ಎಂದೆಂದೂ ನಿಸ್ಸಂತತಿ ಆಗದು ಎಂಬ ದೃಢ ನಂಬಿಕೆ ಕಾಣುತ್ತದೆ. ಪ್ರಾಯಃ ಆಮೆ ತನ್ನ ಮರಿ ಕುರಿತು ಯೋಚಿಸುತ್ತದೆ ಎಂದು ಪ್ರಾಚೀನರು ಉಲ್ಲೇಖೀಸಿದ್ದು ಇದೇ ಕಾರಣಕ್ಕಾಗಿ ಇರಬಹುದು. ಸಂತತಿ ಸೃಷ್ಟಿಗೆ ಕಾಮದ ತೃಷೆ ಒಂದು ಪೂರಕ ಅಂಶವಷ್ಟೆ. ಸಾವಂತೂ ನಿಶ್ಚಿತ, ತನ್ನ ಕಾಲದ ಬಳಿಕ ತನ್ನದೇ ಪ್ರತಿನಿಧಿ ಭೂಮಿಯನ್ನು ಆಳಬೇಕೆಂಬ ಇಚ್ಛೆಯೂ ಸಂತಾನೋತ್ಪತ್ತಿ ಹಿಂದಿನ ಪ್ರಜ್ಞಾಪೂರ್ವಕ (ಮನುಷ್ಯರಿಗೆ) ಅಥವಾ ಅಪ್ರಜ್ಞಾಪೂರ್ವಕ (ಪ್ರಾಣಿಸಂಕುಲಗಳಿಗೆ) ಗುರಿಯಾಗಿರಬ ಹುದು. ಒಂದೇ ವ್ಯತ್ಯಾಸವೆಂದರೆ ಪ್ರಾಣಿಗಳು ಮರಿಗಳಿಂದ ಏನನ್ನೂ ನಿರೀಕ್ಷಿಸುವುದಿಲ್ಲ, ಮನುಷ್ಯ ಹಾಗಲ್ಲ… ಈಗ ಮನುಷ್ಯನೂ ಪ್ರಾಣಿಗಳಂತೆ ತಂದೆತಾಯಿಗಳಿಂದ ಬೇರ್ಪಡುತ್ತಿದ್ದಾನೆನ್ನಬಹುದೆ? ಮಟಪಾಡಿ ಕುಮಾರಸ್ವಾಮಿ