Advertisement

ಪ್ರಭುತ್ವದ ವಿರುದ್ಧ ಬರೆಯಬೇಕು 

06:00 AM Jun 27, 2018 | |

ಚನ್ನರಾಯಪಟ್ಟಣ: ಇಂದಿನ ಪ್ರಗತಿಪರ ಬರವಣಿಗೆಕಾರರು ಪ್ರಭುತ್ವದ ವಿರುದ್ಧ ಬರೆಯುವುದನ್ನು ಹಳಗನ್ನಡದ ಕವಿಗಳಿಂದ ಕಲಿಯಬೇಕು. ಅಂದು ರಾಜಪ್ರಭುತ್ವದಲ್ಲಿದ್ದರೂ ಕೂಡ ಪ್ರಭುತ್ವದ ವಿರುದ್ಧವಾಗಿ ಅವರು ಸಾಹಿತ್ಯ ರಚಿಸಿದ್ದಾರೆ. ಸೃಜನಶೀಲ
ಸಾಹಿತ್ಯ ಹುಟ್ಟಿದ್ದೇ ಆದಿ ಕವಿ ಪಂಪನಿಂದ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದ್ದಾರೆ.

Advertisement

ಕಳೆದ 3 ದಿನಗಳಿಂದ ಜೈನಕಾಶಿ ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಗಳವಾರ ತೆರೆಬಿತ್ತು. ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಡಾ.ಬರಗೂರು ರಾಮಚಂದ್ರಪ್ಪ, ಪಂಪ
ಕವಿ ಅರಿ ಕೇಸರಿಯ ಆಸ್ಥಾನದಲ್ಲಿದ್ದರೂ ಕೂಡ ತನ್ನ ಕಾವ್ಯದಲ್ಲಿ ಪ್ರತಿ ನಾಯಕನನ್ನು ಸೃಷ್ಠಿ ಮಾಡಿದ್ದಾನೆ. ಆಧುನಿಕ ಬರಹಗಾರರಾದ ನಾವು ಅನೇಕ ವೈರುಧ್ಯಗಳನ್ನು ಎದುರಿಸುತ್ತಿದ್ದೇವೆ. ಯಾವುದೇ ವ್ಯಕ್ತಿಗೆ ಒಂದು ಪಕ್ಷ, ಪಂಥ ಮುಖ್ಯವಾಗಿರಬಹುದು.ಆದರೆ, ಅದರೊಳಗಿದ್ದುಕೊಂಡೆ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಇಂದು ಎಲ್ಲ ಕಡೆ ಧಾರ್ಮಿಕ ಮೂಲಭೂತವಾದ ವಿಜೃಂಭಿಸುತ್ತಿದೆ. ಆದರೆ, ಮನುಷ್ಯ ಜಾತಿ, ಧರ್ಮವನ್ನೂ ಮೀರಿ ಬೆಳೆಯಬೇಕು. ಹಳಗನ್ನಡದ ಕವಿಗಳು ಪ್ರಭುತ್ವ ಹಾಗೂ ಧರ್ಮ ಇವೆರಡನ್ನೂ ಏಕಕಾಲಕ್ಕೆ ಎದುರಿಸಿದ್ದಾರೆ. ಜೈನ ಕೃತಿಗಳಲ್ಲಿ ಭೋಗ ಹಾಗೂ ಗರ್ವ ಎರಡೂ ಭಂಗವಾಗುತ್ತದೆ. ಉದಾಹರಣೆಗೆ, ಭರತ- ಬಾಹುಬಲಿ ಯುದ್ಧದಲ್ಲಿ ನೇರವಾಗಿ ಯುದ್ಧಗಳು ನಡೆಯುವುದಿಲ್ಲ. ಹಾಗಾಗಿ, ಸಾವು-ನೋವು ಸಂಭವಿಸುವುದಿಲ್ಲ. ಅಂತಿಮವಾಗಿ ಅಹಿಂಸೆಯೇ ಗೆಲ್ಲುತ್ತದೆ. ರನ್ನನ ಗದಾಯುದ್ಧದಲ್ಲೂ ಕೂಡ ಕಡೆಯದಾಗಿ ದುರ್ಯೋಧನ ಯುದ್ಧದ ಸಾಧನಗಳನ್ನು ಶಾಂತಿಯ ಸಂದೇಶ ಸಾರಲು ಬಳಸುತ್ತಾನೆ. ಯುದ್ಧದಿಂದ ಆತನಿಗೆ ಜಿಗುಪ್ಸೆ ಹುಟ್ಟಿರುತ್ತದೆ, ಅಧಿಕಾರದ ಗರ್ವಭಂಗವಾಗಿರುತ್ತದೆ. ಈಗಿನ ಕಾಲದ ರಾಜಕಾರಣಿಗಳು ಇದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಭುತ್ವದ ವಿರುದ್ಧ ಅಂದಿನ ಕವಿಗಳು ಈ ರೀತಿಯ ಸೃಜನಶೀಲವಾಗಿ ಸಾಹಿತ್ಯ ರಚಿಸಿದ್ದಾರೆ. ಗೀತ ಮುಕ್ತವಾಗಿ ಜಾತಿ ಮುಕ್ತವಾದ “ಮನುಷ್ಯ ಜಾತಿ ತಾನೊಂದೇವಲಂ’ ಎಂಬುದನ್ನು ಆ ಕಾಲದಲ್ಲಿಯೇ ಪಂಪ ಸಾರಿದ್ದಾರೆ. ಆದರೆ, ಇಂದು ಸ್ವಾತಂತ್ರ್ಯ ಹರಣವಾಗುತ್ತಿದೆ.ಪುಸ್ತಕವನ್ನು ನಿಷೇಧ ಮಾಡುತ್ತಾರೆ. ಭಾಷಿಕ ಹಿಂಸಾಚಾರ ನಡೆಯುತ್ತಿರುವುದನ್ನೂ ಕಾಣಬಹುದು.
ಇಂದು ಭಾರತದಲ್ಲಿ ಬೀದಿ ಸ್ವಚ್ಛವಾದರೆ ಸಾಲದು, ಬಾಯಿಯೂ ಸ್ವಚ್ಛವಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next