Advertisement
ಹೊಸ ಯೋಚನೆ-ಯೋಜನೆ ಪ್ರತಿ ವಿದ್ಯಾರ್ಥಿಗಳದ್ದಾಗಿದ್ದರೆ ಮಾತ್ರ ಇಂದಿನ ಪೈಪೋಟಿ ಯುಗದಲ್ಲಿ ಜೀವನ ಸಾಗಿಸಲು ಸಾಧ್ಯ. ಶೈಕ್ಷಣಿಕ ಪಠ್ಯದಲ್ಲಿ ಕಲಿತದ್ದಕ್ಕಿಂತ ಹೆಚ್ಚಾಗಿ ಅಲ್ಲಿ ತೋರಿಸಿದ ಸೃಜನಶೀಲ ಚಟುವಟಿಕೆಗಳು ವೃತ್ತಿ ಕ್ಷೇತ್ರದಲ್ಲಿ ಪ್ರಯೋಜನಕ್ಕೆ ಬರುವುದೇ ಹೆಚ್ಚು. ಕಲೆ ಮತ್ತು ವಿಜ್ಞಾನ ಕ್ಷೇತ್ರಗಳನ್ನು ಆಯ್ದುಕೊಂಡರೆ ಈ ಸೃಜನಶೀಲತೆ ಎನ್ನುವುದು ಅತ್ಯಗತ್ಯವಾಗಿ ಬೇಕಾಗುತ್ತದೆ. ಕಲಿಕಾ ಹಂತದಲ್ಲಿಯೇ ಹೊಸತನದ ಯೋಚನೆ, ಹೊಸ ಪರಿಕಲ್ಪನೆಗಳ ಪ್ರಯೋಗಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಅದು ಯಶಸ್ವಿಯೂ ಆಗಬಹುದು; ವೈಫಲ್ಯವೂ ಆಗಬಹುದು. ಮರಳಿ ಯತ್ನವ ಮಾಡುತ್ತಲೇ ಸೃಜನಶೀಲತೆಯನ್ನು ಒರೆಗೆ ಹಚ್ಚುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಒಂದಿಲ್ಲೊಂದು ರಂಗದಲ್ಲಿ ಛಾಪು ಮೂಡಿಸಲು ಸಾಧ್ಯವಾಗುತ್ತದೆ.
ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಪ್ರೌಢ ಹಂತದಿಂದಲೇ ಕಲಿಕೆಯೊಂದಿಗೆ ಪ್ರಾಯೋಗಿಕ ಚಟುವಟಿಕೆಗಳನ್ನು ಸ್ಪರ್ಧಾ ರೂಪದಲ್ಲಿ ಹಮ್ಮಿಕೊಳ್ಳುವುದನ್ನು ಕಾಣಬಹುದು. ವಿಜ್ಞಾನ ಮಾದರಿ ತಯಾರಿ, ಯುವ ವಿಜ್ಞಾನಿ ಸ್ಪರ್ಧೆ ಇಂತಹ ಪಠ್ಯಪೂರಕ ಸೃಜನಶೀಲ ಚಟುವಟಿಕೆಗಳು ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಸರ್ವ ರೀತಿಯಲ್ಲಿಯೂ ಹೆಚ್ಚಿಸಲು ಸಹಕಾರಿ. ಇದು ಮಕ್ಕಳನ್ನು ಯೋಚನೆಗೆ ಹಚ್ಚುವುದರೊಂದಿಗೆ ಸ್ಪರ್ಧಾ ಮನೋಭಾವವನ್ನು ಬೆಳೆಸಿ ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಯುವ ವಿದ್ಯಾರ್ಥಿಗಳಿಗೆ ವಿಮಾನ ಮಾದರಿ ತಯಾರಿ, ರಾಕೆಟ್ ಉಡ್ಡಯನದಂತಹ ಸೃಜನಶೀಲ ಚಟುವಟಿಕೆಗಳನ್ನು ಸ್ಪರ್ಧಾರೂಪದಲ್ಲಿ ಹಮ್ಮಿಕೊಳ್ಳುವುದರಿಂದ ವೈಜ್ಞಾನಿಕ ಜಗತ್ತು ಪ್ರವೇಶಿಸಲು ಮತ್ತು ಅದರಲ್ಲೊಂದು ಕುತೂಹಲ ಹುಟ್ಟಿಸಲು ನೆರವಾಗುತ್ತದೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಮುಂದೊಂದು ದಿನ ಆ ವಿದ್ಯಾರ್ಥಿ ಮಹಾನ್ ವಿಜ್ಞಾನಿಯಾಗಿಯೋ, ಖಗೋಳ ಶಾಸ್ತ್ರಜ್ಞನಾಗಿಯೋ ಉತ್ತುಂಗಕ್ಕೇರಬಲ್ಲ. ಹಾಗಂತ ಇವೆಲ್ಲ ಕೇವಲ ವಿಜ್ಞಾನ ವಿದ್ಯಾರ್ಥಿಗಳಿಗೆ ಮಾತ್ರವಲ್ಲ; ಯಾವುದೇ ವೈಜ್ಞಾನಿಕ ಕ್ಷೇತ್ರದ ಆಸಕ್ತಿ ಹೊಂದಿರುವ ಯುವ ಜನತೆಗೂ ಇಂತಹ ಚಟುವಟಿಕೆಗಳನ್ನು ಕಲಿಯಲು ಮುಕ್ತ ಅವಕಾಶಗಳಿವೆ. ಭವಿಷ್ಯಕ್ಕೆ ಅತೀ ಅಗತ್ಯ
ಚಿತ್ರಕಲೆ, ಕರಕುಶಲ ಕಲೆ, ಸಮೂಹಗಾನ, ನೃತ್ಯ, ಯೋಗ ಚಟುವಟಿಕೆಯಂತಹ ಪಠ್ಯಪೂರಕ ಚಟುವಟಿಕೆಗಳು ಕೂಡಾ ಸೃಜನಶೀಲತೆ ಉದ್ದೀಪನಕ್ಕೆ ಪರ್ಯಾಯ ದಾರಿಗಳು. ಕಾಲೇಜು ಹಂತದಲ್ಲಿ ಇವನ್ನೆಲ್ಲ ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರೆ, ಶೈಕ್ಷಣಿಕವಾಗಿ ಆತ ಹಿಂದುಳಿದಿದ್ದರೂ, ಯಾವುದಾದರೊಂದು ಸುಪ್ತ ಕಲೆಯಲ್ಲಿ ಮುಂದುವರಿಯಬಲ್ಲ. ಅದಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಈ ರೀತಿಯ ಪಠ್ಯೇತರ ಸೃಜನಶೀಲ ಅಧ್ಯಯನ ಹಮ್ಮಿಕೊಳ್ಳುವುದು ವಿದ್ಯಾರ್ಥಿ ಯುವಜನರ ಭವಿಷ್ಯದ ದೃಷ್ಟಿಯಿಂದ ಸೂಕ್ತ ಕಲಿಕಾ ವಿಧಾನ ಎಂದರೂ ತಪ್ಪಿಲ್ಲ.
Related Articles
ಬಹುಶಃ ಪ್ರೌಢಶಾಲಾ ಹಂತದಲ್ಲಿಯೇ ಶಾಲಾ-ಕಾಲೇಜುಗಳಲ್ಲಿ ಕೆಲವು ಕ್ಲಬ್‌ಗಳು, ಸಂಘಗಳು ಸೃಜನಾತ್ಮಕ ಚಟುವಟಿಕೆಗಾಗಿಯೇ ರೂಪು ತಳೆಯುತ್ತವೆ. ಆರ್ಟ್ಸ್ ಕ್ಲಬ್, ವಿಜ್ಞಾನ ಕ್ಲಬ್, ವಾಣಿಜ್ಯ ಕ್ಲಬ್, ಕರಕುಶಲ ಸಂಘ, ಸಾಂಸ್ಕೃತಿಕ ಅಧ್ಯಯನ ಸಂಘಗಳು..ಹೀಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸೃಜನಶೀಲ ಚಟುವಟಿಕೆಗಳನ್ನು ಒರೆಗೆ ಹಚ್ಚುವ ಭಾಗವಾಗಿ ಇವನ್ನು ಆರಂಭಿಸಲಾಗುತ್ತದೆ ಮತ್ತು ಕಡ್ಡಾಯ ಭಾಗವಹಿಸುವಿಕೆಯನ್ನೂ ಮಾಡಲಾಗುತ್ತದೆ. ಇದರಿಂದ ಕಲಾ ವಿಭಾಗದ ವಿದ್ಯಾರ್ಥಿಯೋರ್ವ ವಿಜ್ಞಾನದ ಬಗ್ಗೆಯೂ, ವಿಜ್ಞಾನದ ವಿದ್ಯಾರ್ಥಿಯೋವ ಕರಕುಶಲ ವಸ್ತು ತಯಾರಿಕೆಯ ಬಗ್ಗೆಯೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
Advertisement
ರಂಗ ಚಟುವಟಿಕೆಬಹುತೇಕ ಪದವಿ ಕಾಲೇಜುಗಳು ರಂಗ ಚಟುವಟಿಕೆಯನ್ನು ತಮ್ಮ ಪಠ್ಯೇತರ ಚಟುವಟಿಕೆಗಳ ಭಾಗವಾಗಿಸಿಕೊಂಡಿವೆ. ರಂಗ ಚಟುವಟಿಕೆಗಾಗಿಯೇ ರಂಗ ಶಿಕ್ಷಕರನ್ನೂ ನೇಮಿಸಿ ವಿದ್ಯಾರ್ಥಿಗಳಿಗೆ ರಂಗಕಲೆ ಅಧ್ಯಯನಕ್ಕೆ ಸ್ಫೂರ್ತಿದಾತವಾಗಿವೆ. ಇದರಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾಲೇಜು ರಂಗ ತಾಲೀಮಿನಲ್ಲಿ ಹೆಸರು ಗಳಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಕಾಲೇಜು ರಂಗ ಅಧ್ಯಯನದ ಮೂಲಕವೇ ನೀನಾಸಂನಂತಹ ಉತ್ಕೃಷ್ಟ ಮಟ್ಟದ ರಂಗ ತರಬೇತಿ ಕೇಂದ್ರದಲ್ಲಿ ಸೇರ್ಪಡೆಯಾಗಿರುವುದು, ಧಾರವಾಹಿ, ಚಲನಚಿತ್ರಗಳಲ್ಲಿ ಮಿಂಚಿರುವುದನ್ನು ಕಾಣಬಹುದು. ಪಠ್ಯದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡದಿದ್ದರೂ, ರಂಗ ಕಲೆಯಲ್ಲಿ ಹೆಸರು ಪಡೆಯಲು ಇದು ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತದೆ. ಧನ್ಯಾ ಬಾಳೆಕಜೆ