ಮಹಾನಗರ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಘಟಕದ “ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ವಿಭಾಗ’ ದ ವತಿಯಿಂದ ತುರ್ತು ಅಗತ್ಯ ಸೇವಾ ತಂಡದ ರಚನೆ ಮಾಡಲಾಗಿದ್ದು, ಇದು ಜುಲೈನಿಂದ ಅಗಸ್ಟ್ 30ರವರೆಗೆ ಕಾರ್ಯ ನಿರ್ವಹಿಸಲಿದೆ.
ಮಳೆಗಾಲದಲ್ಲಿ ಮರಗಳು ಬಿದ್ದು ಆಗುವ ಅನಾಹುತ, ನೆರೆ ನೀರು ನಿಂತ ಸಂದರ್ಭದಲ್ಲಿ ಹಾಗೂ ಇನ್ನಿತರ ಗಂಭೀರ ಪ್ರಾಕೃತಿಕ ಅನಾಹುತಗಳಾದಾಗ ನಗರದ ನಾಗರಿಕರು ಸಹಾಯ ಮತ್ತು ತುರ್ತು ಸೇವೆಗಾಗಿ ಈ ತಂಡವನ್ನು ಸಂಪರ್ಕಿಸಬಹುದು.
ರೆಡ್‌ಕ್ರಾಸ್‌ನ ಈ ಕಾರ್ಯಕ್ರಮದಲ್ಲಿ ಎನ್‌ಜಿಒ, ರೋಟರಿ, ಜೆಸಿಐ, ಲಯನ್ಸ್ ಸಂಘನೆಗಳ ಸಹಕಾರವೂ ಅಗತ್ಯವಿದೆ ಎಂದು ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಸಿ.ಎ. ಶಾಂತಾರಾಮ್ ಶೆಟ್ಟಿ ತಿಳಿಸಿದ್ದಾರೆ.
ಈ ತಂಡ ಮುಂದಿನ 50 ದಿನಗಳಿಗೆ ಮಂಗಳೂರು ನಗರಕ್ಕೆ ಸೀವಿತವಾಗಿ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ಯುವಕರ ತಂಡವನ್ನು ರಚಿಸಬೇಕಾದ ಅಗತ್ಯವಿದೆ ಎಂದು ರೆಡ್‌ಕ್ರಾಸ್ ಸಂಸ್ಥೆಯ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ವಿಭಾಗದ ಅಧ್ಯಕ್ಷ ವೇಣು ಶರ್ಮಾ ತಿಳಿಸಿದ್ದಾರೆ. ಯುವಕರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತರು ಎನ್ನೆಸ್ಸೆಸ್, ಎನ್‌ಸಿಸಿ ವೈಆರ್‌ಸಿ ಸದಸ್ಯರು, ಕಾಲೇಜು ವಿದ್ಯಾರ್ಥಿ ಮುಖಂಡರು ಹಾಗೂ ಸಾರ್ವಜನಿಕರು ಈ ವಿಭಾಗಕ್ಕೆ ಸೇರಿ ಸಹಕರಿಸಬಹುದು ಎಂದು ಅವರು ತಿಳಿಸಿದ್ದಾರೆ. ಆಸಕ್ತರು ತಮ್ಮ ವಿವರ
ಗಳನ್ನು spdsouza79@gmail.comಗೆ ಇಮೇಲ್ ಕಳುಹಿಸಬಹುದಾಗಿದೆ. ಈ ಪ್ರಾಯೋಗಿಕ ಕಾರ್ಯಕ್ರಮ ಸರಕಾರದ ವಿವಿಧ ಇಲಾಖೆಗಳೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸಲಿದೆ.ಜತೆಗೆ ಸ್ಥಳೀಯ ಚುನಾಯಿತ ಕಾರ್ಪೊರೇಟರ್‌ಗಳ ಸಹಕಾರವನ್ನು ಕೂಡ ಕೋರಲಾಗುವುದು ಎಂದು ರೆಡ್‌ಕ್ರಾಸ್‌ನ ಸಂಘಟಕ ಸಂತೋಷ ಪೀಟರ್ ಡಿ’ ಸೋಜಾ ತಿಳಿಸಿದ್ದಾರೆ. ಇದಲ್ಲದೆ ಬೇಸಿಕ್’ಡಿಸಾಸ್ಟಾರ್ ಮ್ಯಾನೇಜ್‌ಮೆಂಟ್ ಬಗ್ಗೆ ಶಾಲಾ ಕಾಲೇಜು ಹಾಗೂ ಇನ್ನಿತರ ಸಾರ್ವಜನಿಕರಿಗೆ ತರಬೇತಿ ನೀಡಲಾಗುವುದು ಎಂದರು.