Advertisement
ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕಾದ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಬ್ಬರು ಬಣ ಸೃಷ್ಟಿಸಿಕೊಂಡು ಟಿಕೆಟ್‌ಗಾಗಿ ಪಕ್ಷದ ಸಂಘಟನೆಯನ್ನೇ ಬುಡಮೇಲಾಗಿಸುತ್ತಿದ್ದು ಪಕ್ಷದ ಇಮೇಜ್‌ಗೆ ಧಕ್ಕೆ ತರುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ.ಒಂದೆಡೆ ಹಿರಿಯ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆಯವರ ಕಟ್ಟಾ ಬೆಂಬಲಿಗ ಚೆನ್ನಾರೆಡ್ಡಿ ಪಾಟೀಲ ತುನ್ನೂರ ತನ್ನ ಬೆಂಬಲಿಗರೊಂದಿಗೆ ತೆರೆಮರೆಯಲ್ಲೇ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದರೆ ಮತ್ತೂಂದೆಡೆ ಖ್ಯಾತವೈದ್ಯ ಡಾ|ಎಸ್.ಬಿ. ಕಾಮರೆಡ್ಡಿ ದಿಢೀರ್ ಎಂದು ಮೇಕೆದಾಟು ಹೋರಾಟದ ಸಮಯದಲ್ಲಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಲ್ಲದೇ ತಮಗೇ ಟಿಕೆಟ್ ಸಿಗುವುದು ಪಕ್ಕಾ ಎನ್ನುತ್ತಾ ಸಂಘಟನೆಯಲ್ಲಿ ತೊಡಗಿದ್ದಾರೆ. ಇವರಿಬ್ಬರ ಟಿಕೆಟ್ ಗುದ್ದಾಟದ ಮಧ್ಯೆ ಹಲವು ದಿನಗಳಿಂದ ಪಕ್ಷ ಸಂಘಟನೆಯಲ್ಲಿದ್ದ ಜಿಲ್ಲಾ ಘಟಕದ ಮುಖಂಡರು ಗೊಂದಲಕ್ಕೀಡಾಗಿದ್ದಾರೆ.
Related Articles
Advertisement
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ನಂಬಿಕೆಯಲ್ಲಿ ಡಾ|ಎಸ್.ಬಿ. ಕಾಮರೆಡ್ಡಿ, ಡಾ|ಭೀಮಣ್ಣ ಮೇಟಿ, ಎ.ಸಿ. ಕಾಡ್ಲೂರು ಸೇರಿದಂತೆ ಹಲವು ನಾಯಕರು ಯಾವುದೇ ಸಮಾರಂಭ ಮಾಡದೇ ಬೆಂಗಳೂರಿನಲ್ಲಿ ತಮ್ಮ ತಮ್ಮ ಜನಬಲದೊಂದಿಗೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆ ನಂತರ ಸೃಷ್ಟಿಯಾದ ಬಣಗಳಿಂದ ಈಗ ಕ್ಷೇತ್ರದಲ್ಲಿ ಸಂಘಟನೆಗೇ ತೊಡಕಾಗಿದ್ದು ಇವರಲ್ಲಿ ಯಾರೊಂದಿಗೆ ಗುರುತಿಸಿಕೊಳ್ಳುವುದು ಎಂದು ಕಾರ್ಯಕರ್ತರು ಗೊಂದಲದಲ್ಲಿರುವುದು ಮಾತ್ರ ಗುಟ್ಟಾಗಿ ಉಳಿದಿಲ್ಲ.
ಇದನ್ನೂ ಓದಿ:
ಪ್ರತ್ಯೇಕ ಬ್ಯಾನರ್-ಕಟೌಟ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಯಾದಗಿರಿ ಭೇಟಿ ಸಂದರ್ಭ ಸ್ವಾಗತಕ್ಕೆ ಸಜ್ಜಾಗಿದ್ದ ಕಾಂಗ್ರೆಸ್ ಮುಖಂಡರಾದ ಚೆನ್ನಾರೆಡ್ಡಿ ತುನ್ನೂರು ಮತ್ತು ಡಾ|ಎಸ್.ಬಿ. ಕಾಮರೆಡ್ಡಿ ಪ್ರತ್ಯೇಕ ಬ್ಯಾನರ್ ಮತ್ತು ಕಟೌಟ್ ಹಾಕಿದ್ದರು. ಎರಡೂ ಬ್ಯಾನರ್‌ಗಳಲ್ಲೂ ಸ್ಥಳೀಯ ಮುಖಂಡರ ಭಾವಚಿತ್ರ ಇತ್ತು. ಈ ಬ್ಯಾನರ್‌ನಲ್ಲಿರುವ ಮುಖಂಡರು ಯಾರ ಪರವಾಗಿದ್ದಾರೆ ಎನ್ನುವುದು ಕಾರ್ಯಕರ್ತರನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿತ್ತು.
ಇತ್ತೀಚೆಗೆ ನಡೆದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಹಿರಂಗವಾಗಿಯೇ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದು, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಿದ್ದಾರೆ. ಆದರೆ ಟಿಕೆಟ್ ಗಿಟ್ಟಿಸುವುದನ್ನೇ ರೆಡ್ಡಿ ಪಡೆಗಳು ಪ್ರತಿಷ್ಠೆಯ ವಿಷಯವನ್ನಾಗಿಸಿಕೊಂಡಿದ್ದು ದಿನೇ ದಿನೇ ಬಣ ರಾಜಕೀಯ ಜೋರಾಗುತ್ತಲೇ ಇದೆ.
ಖರ್ಚು-ವೆಚ್ಚದ ಲೆಕ್ಕಾಚಾರ
ಪಕ್ಷದ ಹಿರಿಯ ನಾಯಕರು ಜಿಲ್ಲೆಗೆ ಆಗಮಿಸುವ ಸಂದರ್ಭ ಯಾರು ಖರ್ಚು ಮಾಡಬೇಕು ಎನ್ನುವ ಗೊಂದಲದೊಂದಿಗೆ ಕಾರ್ಯಕ್ರಮ ನಡೆಯುತ್ತದೆ. ಕೊನೆಗೆ ಯಾವುದೇ ಆಡಂಬರವಿಲ್ಲದೆ ಇದ್ದುದರಲ್ಲಿಯೇ ಮುಗಿಸುವ ಲೆಕ್ಕಾಚಾರಕ್ಕೆ ಜಿಲ್ಲಾ ಮುಖಂಡರು ಮುಂದಾಗುತ್ತಿದ್ದು ಬಣ ರಾಜಕೀಯದ ಮೇಲಾಟ ಸ್ಥಳೀಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಯಾದಗಿರಿ ಕ್ಷೇತ್ರದಲ್ಲಿ ಡಾ|ಮಾಲಕರೆಡ್ಡಿ ಬಿಜೆಪಿ ಸೇರ್ಪಡೆ ಆದಾಗಿನಿಂದ ಕಾಂಗ್ರೆಸ್ ಸಂಘಟನೆ ನಶಿಸುತ್ತಿದೆ. ಈ ಹಂತದಲ್ಲಿ ಟಿಕೆಟ್ ಫೈಟ್ ಶುರುವಾಗಿರುವುದು ಕಾಂಗ್ರೆಸ್‌ಗೆ ಮತ್ತಷ್ಟು ಹಿನ್ನಡೆಯಾಗಿದೆ. ಈ ಬಣ ರಾಜಕಾರಣ, ಗೊಂದಲ ಹೀಗೆ ಮುಂದುವರಿದರೆ ಕ್ಷೇತ್ರ ಕೈ ತಪ್ಪುವ ಸಾಧ್ಯತೆ ಹೆಚ್ಚು ಎಂಬ ಮಾತು ಕೇಳಿಬರುತ್ತಿದೆ.
-ಮಹೇಶ ಕಲಾಲ