Advertisement

ಅನಿವಾಸಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಅನಿವಾಸಿ ಕುಂದುಕೊರತೆ ವೇದಿಕೆ ರಚನೆ

12:37 PM Feb 17, 2024 | Team Udayavani |

ಮಸ್ಕತ್‌: ತಮ್ಮ ಮತ್ತು ಕುಟುಂಬದ ಉಜ್ವಲ ಭವಿಷ್ಯಕ್ಕಾಗಿ, ಉತ್ತಮ ಉದ್ಯೋಗ ಅಥವಾ ವ್ಯಾಪಾರಕ್ಕಾಗಿ ವಿದೇಶಕ್ಕೆ ಹೋದ ಲಕ್ಷಾಂತರ ಭಾರತೀಯರು ವಿವಿಧ ದೇಶಗಳಲ್ಲಿ ನೆಲಸಿ, ಅಲ್ಲಿ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವಂತಹ ವಿಷಯ. ಉದ್ಯೋಗ, ವ್ಯವಹಾರ, ಸೇವೆ ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಬೇರೆ ದೇಶಕ್ಕೆ ಆರು ತಿಂಗಳು ಅಥವಾ ಹೆಚ್ಚು ವಲಸೆ ಹೋಗಿರುವ ಒಬ್ಬ ಭಾರತೀಯ ನಾಗರಿಕನನ್ನು ಅನಿವಾಸಿ ಭಾರತೀಯ ಎಂದು ಕರೆಯುತ್ತಾರೆ.

Advertisement

ಅನಿವಾಸಿಗರು ವಿದೇಶದಲ್ಲಿ ಹಣ, ಅಂತಸ್ತು ಗಳಿಸುವುದರ ಜತೆ ಕೆಲ ವೈಯುಕ್ತಿಕ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ, ಒಮ್ಮೊಮ್ಮೆ ತ್ಯಾಗ ಮಾಡಬೇಕಾಗುವ ಸಂದರ್ಭವೂ ಒದಗಿಬರುತ್ತದೆ. ಇಚ್ಚಿಸಿದಾಗ ಊರಿಗೆ ಬಂದು ಹೋಗಲು ಸಾಧ್ಯವಿಲ್ಲ. ಮದುವೆ, ನಾಮಕರಣ ಅಥವಾ ಯಾರಾದರು ತೀರಿ ಹೋದರು ಸಹ ಕೆಲವೊಮ್ಮೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ.

ತಾಯ್ನಾಡು, ಬಂಧುಬಳಗ, ಸ್ನೇಹಿತರು, ಆತ್ಮೀಯರು ನೆನಪಾದೊಡನೆ ಊರಿಗೆ ಭೇಟಿ ನೀಡಲಾಗುವುದಿಲ್ಲ. ಪ್ರತೀ ಬಾರಿ ಊರಿಗೆ ಬಂದು ಹೋಗಲು ಲಕ್ಷಾಂತರ ರೂ. ವಿನಿಯೋಗಿಸಬೇಕಾಗುತ್ತದೆ. ವಾರ್ಷಿಕ ರಜೆಗೆಂದು ಬಂದಾಗ, ಆ ಸೀಮಿತ ಸಮಯದಲ್ಲಿ ಸಾಧ್ಯವಾದಷ್ಟು ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮರಳಿ ವಿದೇಶಕ್ಕೆ ಹೋಗುವುದು ಸಾಮಾನ್ಯ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಹಾಗೆ, ಅನಿವಾಸಿಗಳ ಬದುಕು ಹೊರಗಿನವರಿಗೆ ಸುಂದರವಾಗಿ ಕಾಣಬಹುದು, ಆ ಬದುಕಿನಲ್ಲಿಯೂ ಹಲವು ವಿಧದ ಕಷ್ಟ ನಷ್ಟಗಳಿವೆ.

ನಿವೃತ್ತಿ ಕಾಲದಲ್ಲಿ ಸ್ವಂತದ್ದೊಂದು ಸೂರಿರಲಿ ಎಂದು ಊರಿನಲ್ಲಿ ಸ್ವಂತದ್ದೊಂದು ಮನೆ ಕಟ್ಟಿಸಿಕೊಳ್ಳುತ್ತಾರೆ, ಸೈಟ್‌ ಭೂಮಿ ಖರೀದಿಸುತ್ತಾರೆ. ಕೆಲಸಮಯದ ಅನಂತರ ಈ ಖರೀದಿಸಿದ ಸ್ವತ್ತು ಬೇರೆಯವರ ಪಾಲಾಗಿದ್ದರೆ ಏನು ಮಾಡಬೇಕು? ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿ ಖರೀದಿಸಿದ, ಸೈಟ್‌, ಮನೆ, ಜಮೀನು ಇತ್ಯಾದಿ ಆಸ್ತಿಯನ್ನು ನಕಲಿ ದಾಖಲೆ ತಯಾರಿಸಿ ಬೇರೊಬ್ಬರಿಗೆ ಮಾರಾಟ ಮಾಡಿರುತ್ತಾರೆ. ಕೆಲವು ಬಿಲ್ಡರ್‌ಗಳು, ಕಾಂಟ್ರಾಕ್ಟರ್‌ಗಳು ವಿದೇಶಗಳಿಗೆ ಬಂದು ಅಲ್ಲಿನ ನೂರಾರು ಅನಿವಾಸಿಗರನ್ನು ಮರಳು ಮಾಡಿ ಅಡ್ವಾನ್ಸ್‌ ಪಡೆದು ಮಾಯವಾಗುತ್ತಾರೆ.

ಅದೇ ರೀತಿ ಕೆಲವು ಶಿಕ್ಷಣ ಸಂಸ್ಥೆಗಳ ಏಜೆಂಟ್‌ಗಳೆಂದುಕೊಂಡು ಬರುವವರು ನಿಮ್ಮ ಮಕ್ಕಳಿಗೆ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನೀಯರಿಂಗ್‌ ಸೀಟ್‌ ಕೊಡಿಸುತ್ತೇವೆ, ಮೆಡಿಕಲ್‌ ಸೀಟ್‌ ಕೊಡಿಸುತ್ತೇವೆ ಎಂದು ಲಕ್ಷಾಂತರ ರೂಪಾಯಿಗಳನ್ನ ವಸೂಲಿ ಮಾಡಿ ವಂಚಿಸುವವರು ಇದ್ದಾರೆ. ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಮೂಲಕವೇ ಅನಿವಾಸಿ ಭಾರತೀಯರ ಪ್ಯಾನ್‌ ಕಾರ್ಡ್‌ ದುರ್ಬಳಕೆ ಮಾಡಿಕೊಂಡು ಅವರ ಖಾತೆಗಳಲ್ಲಿನ ಹಣ ದೋಚಿದ ಘಟನೆಗಳು ವರದಿಯಾಗಿವೆ. ಹೀಗೆ ಅನಿವಾಸಿಗಳನ್ನು ವಂಚಿಸಿ ದೋಚುವುದು ಇತ್ತೀಚೆಗೆ ಹೆಚ್ಚಾಗುತ್ತದೆ.

Advertisement

ಇಂತಹ ಸಾವಿರಾರು ಪ್ರಕರಣಗಳು ಪೊಲೀಸ್‌ ಠಾಣೆಯಲ್ಲಿವೆ. ನ್ಯಾಯಕ್ಕಾಗಿ ಬಹಳಷ್ಟು ಜನ ಅನಿವಾಸಿಗಳು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಕೆಲವು ಅಸಹಾಯಕ ಅನಿವಾಸಿಗರು, ಈ ಕೋರ್ಟ್‌, ಕಾನೂನು ಗೊಡವೆ ಬೇಡವೆಂದುಕೊಂಡು ಮಾತುಕತೆಯಲ್ಲಿಯೇ ಬಗೆಹರಿಸಿಕೊಂಡು ಲಕ್ಷಾಂತರ ರೂಪಾಯಿಗಳನ್ನು ನಷ್ಟ ಮಾಡಿಕೊಂಡವರಿದ್ದಾರೆ. ಕೆಲವರು ಲಾಯರ್‌, ಕಾನೂನು, ಕೋರ್ಟ್‌ ಎಂದು ಹಣ ಮತ್ತು ಸಮಯವನ್ನು ವಿನಿಯೋಗಿಸುತಿದ್ದಾರೆ.

ಇಂತಹ ವಂಚಕರ ವಿರುದ್ಧ ಹೋರಾಡಲು ಜಾಗತಿಕವಾಗಿ ಎಲ್ಲ ಅನಿವಾಸಿಗರು ಈಗ ಒಟ್ಟಾಗಿ ಅನಿವಾಸಿಗಳ ಕುಂದುಕೊರತೆ ವೇದಿಕೆ (NRI grievances Forum ಅನ್ನು ರಚಿಸಿಕೊಂಡಿದ್ದಾರೆ. ವಂಚಕರ ವಿರುದ್ದ ಕಠಿನ ಕ್ರಮ ಕೈಗೊಳ್ಳಲು ಮತ್ತು ಕಾನೂನನ್ನು ರೂಪಿಸಿ NRI ಪ್ರೊಟೆಕ್ಷನ್‌ ಬಿಲ್‌ ಅನ್ನು ಜಾರಿಗೊಳಿಸಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ, ಅಮೇರಿಕಾ, ಲಂಡನ್‌, ಸಿಂಗಪುರ, ಒಮಾನ್‌, ದುಬಾೖ, ಹಾಂಗ್‌ಕಾಂಗ್‌, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಮೂಲಕ ಮನವಿ ಸಲ್ಲಿಸಿ ದ್ದಾರೆ.

ಮನವಿಯಲ್ಲಿನ ಪ್ರಮುಖ ಅಂಶಗಳು
1. ಆಸ್ತಿ ವಿವಾದಗಳಿಗೆ ಕಾನೂನು ರಕ್ಷಣೆ
1.1. ಚರ ಮತ್ತು ಸ್ಥಿರಾಸ್ತಿಗಳ ವಿವಾದಗಳಿಗೆ ಸ್ನೇಹಿತರು ಮತ್ತು ಸಂಬಂಧಿಕರನ್ನೊಳಗೊಂಡು ಪರಿಹಾರ ಸೂಚಿಸುವಿಕೆ.
1.2. ಕುಟುಂಬದ ಸ್ವಾಧೀನದಲ್ಲಿರುವ ಆಸ್ತಿಗಳ ಸುರಕ್ಷತೆ ಮತ್ತು ಭದ್ರತೆಯತ್ತ ಗಮನ.
1.3. ಆಸ್ತಿಗಳ ವಿವಾದ, ಸ್ಥಿರಾಸ್ತಿ, ಸ್ವಾಧೀನ ಹಸ್ತಾಂತರಿಸದಿರುವುದು, ಬಿಲ್ಡರ್‌ಗಳು ಮತ್ತು ಸರಕಾರಿ ಅಧಿಕಾರಿಗಳಿಂದ ವಂಚನೆ.
1.4 ಬ್ಯಾಂಕಿಂಗ್‌ ವ್ಯವಹಾರಕ್ಕೆ ಸಂಬಂಧಿತ ವಂಚನೆ ಇತ್ಯಾದಿ.
2. NRI ತನಿಖಾ ಸಂಸ್ಥೆ ನಿಬಂಧನೆಗಳು
2.1. ಆನ್‌ಲೈನ್‌ ಮುಖಾಂತರ ಎಫ್ಐಆರ್‌ ದಾಖಲಿಸಲು ಅನುಕೂಲ ಮಾಡಿಕೊಡುವುದರ ಬಗ್ಗೆ.
2.2 ಆನ್‌ಲೈನ್‌ ವಿಚಾರಣೆ ಮತ್ತು ದಾಖಲಾತಿ
2.3 ತನಿಖಾ ಅವಧಿಯ ಮಿತಿ ಗರಿಷ್ಠ 90 ದಿನಗಳಿಗೆ.
2.4 ಎನ್‌ಆರ್‌ಐ ಕೋರ್ಟ್‌ಗೆ 90 ದಿನಗಳೊಳಗೆ ನಿರ್ಣಯವನ್ನು ಒದಗಿಸಲು ಆದೇಶ.
3. ಆರೋಪಿಗಳಿಗೆ ಜಾಮೀನು ರಹಿತ ವಾರಂಟ್‌ಗಳು
4. ಅನಿವಾಸಿ ಭಾರತೀಯರ ರಕ್ಷಣೆ
ನಯವಂಚಕರನ್ನು ಕಾನೂನಿನ ಕುಣಿಕೆಗೆ ಸುಲಭವಾಗಿ ತಳ್ಳಲು, ಈ ಎಲ್ಲ ಅಂಶಗಳು ಜಾರಿಗೆ ಬರುವ ಅವಶ್ಯಕತೆ ಇದೆ. ಕಷ್ಟಪಟ್ಟು ಬೆವರು ಸುರಿಸಿ ಗಳಿಸಿದ ಆಸ್ತಿ, ಹಣ ಪರರ ಪಾಲಾಗಬಾರದು. ಪ್ರಧಾನಮಂತ್ರಿಗಳು ಈ ಸಮಸ್ಯೆಗಳ ಕುರಿತು ಯೋಚಿಸಿ ಸೂಕ್ತ ಕಾನೂನು ತರುವ ಆವಶ್ಯಕತೆಯಿದೆ.

*ಪಿ.ಎಸ್‌. ರಂಗನಾಥ, ಮಸ್ಕತ್‌, ಒಮಾನ್‌

Advertisement

Udayavani is now on Telegram. Click here to join our channel and stay updated with the latest news.

Next