Advertisement

ಖಾಸಗಿ ಶಾಲೆಗಳಿಂದ ನಕಲಿ ವಿದ್ಯಾರ್ಥಿಗಳ ಸೃಷ್ಟಿ!

06:00 AM Dec 23, 2017 | |

ಬೆಂಗಳೂರು: ಶಾಲೆಗಳಲ್ಲಿ ಪರೀಕ್ಷಾ ನಕಲು ಕೇಳಿದ್ದೇವೆ. ಆದರೆ, ನಕಲಿ ವಿದ್ಯಾರ್ಥಿಗಳನ್ನೇ ಹುಟ್ಟುಹಾಕುವ ವ್ಯವಸ್ಥಿತ ಜಾಲವೊಂದು ರಾಜ್ಯದ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕಳೆದ ಅನೇಕ ವರ್ಷಗಳಿಂದ ತನ್ನ “ಕೈಚಳಕ’ ತೋರುತ್ತಿರುವುದು ಇದೀಗ ಬಯಲಾಗಿದೆ.

Advertisement

ಸರ್ಕಾರದ ಅನುದಾನ ಹಾಗೂ ಶಾಲಾ ಮಾನ್ಯತೆ ನವೀಕರಣಕ್ಕಾಗಿ ವಿದ್ಯಾರ್ಥಿಗಳಿಲ್ಲದೇ ಇದ್ದರೂ, ನಾಮಕೆವಾಸ್ಥೆಗೆ “ನಕಲಿ’ ವಿದ್ಯಾರ್ಥಿಗಳನ್ನು ಸೃಷ್ಟಿಸಿ, ಆ ಮಾಹಿತಿಯನ್ನು ಪ್ರತಿ ವರ್ಷ ಚಾಚೂತಪ್ಪದೇ ಶಿಕ್ಷಣ ಇಲಾಖೆ ನೀಡುತ್ತಿರುವುದು ಬಹಿರಂಗಗೊಂಡಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವ ಸಾಧ್ಯತೆಯನ್ನೂ ಅಲ್ಲಗಳಿಯುವಂತಿಲ್ಲ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಸಂಗ್ರಹಿಸುತ್ತಿದೆ. ಹಾಗೆಯೇ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯವ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಿದ್ದರಿಂದ ನಕಲಿ ವಿದ್ಯಾರ್ಥಿಗಳ ಮಾಹಿತಿ ಬೆಳಕಿಗೆ ಬಂದಿದೆ.

ಎಸ್‌ಎಟಿಎಸ್‌ ಮೂಲಕ ಮಾಹಿತಿ:
ವಿದ್ಯಾರ್ಥಿ ಸಾಧನೆ ಮತ್ತು ಟ್ರ್ಯಾಕಿಂಗ್‌ ವ್ಯವಸ್ಥೆ(ಎಸ್‌ಎಟಿಎಸ್‌)ಯಡಿ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಕಡ್ಡಾಯವಾಗಿ ಶಾಲೆಗಳಿಂದಲೇ ಅಪ್‌ಲೋಡ್‌ ಆಗಬೇಕು. ವಿದ್ಯಾರ್ಥಿಯ ಫ‌ಸ್ಟ್‌ನೇಮ್‌, ಮಿಡಲ್‌ ನೇಮ್‌, ಲಾಸ್ಟ್‌ ನೇಮ್‌ ಜತೆಗೆ ಹುಟ್ಟಿದ ದಿನಾಂಕ ಮತ್ತು ತಂದೆಯ ಹೆಸರನ್ನು ನಮೂದಿಸಬೇಕು. ಈ ಐದು ಅಂಶಗಳನ್ನು ಆನ್‌ಲೈನ್‌ನಲ್ಲೇ ಪರಿಶೀಲನೆ ಮಾಡಲಾಗುತ್ತದೆ. ಯಾವುದೇ ಒಂದು ಅಂಶದಲ್ಲಿ ಸಂಶಯ ಎದುರಾದರೂ ಸಾಫ್ಟ್ವೇರ್‌, ಪುನರ್‌ ಪರಿಶೀಲಿಸುತ್ತದೆ. ಎಲ್ಲವೂ ತಪ್ಪಾಗಿದ್ದರೆ ಸ್ವಯಂಚಾಲಿತವಾಗಿ ತಿರಸ್ಕೃತಗೊಳ್ಳುತ್ತದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಖಾಸಗಿ ವಿದ್ಯಾರ್ಥಿಗಳು ಕೂಡ ಯಾವುದಾದರೂ ಒಂದು ಶಾಲೆಯ ಮೂಲಕವೇ ಆನ್‌ಲೈನ್‌ ನೋಂದಣಿ ಮಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಖಾಸಗಿ ವಿದ್ಯಾರ್ಥಿಗಳ ಬಗ್ಗೆಯೂ ತಪ್ಪು ಮಾಹಿತಿ ನೀಡಲು ಸಾಧ್ಯವಿಲ್ಲ. ಇದರಿಂದಲೇ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಾಹಿತಿ ನೀಡಲು ಸಾಧ್ಯವಾಗಿಲ್ಲ.

Advertisement

ಎರಡು ಲಕ್ಷ ನಕಲಿ ವಿದ್ಯಾರ್ಥಿಗಳು :
2015, 2016 ಮತ್ತು 2017ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೋಂದಾಯಿತ ವಿದ್ಯಾರ್ಥಿಗಳಲ್ಲಿ 2ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರಲಿಲ್ಲ. ಇಷ್ಟೊಂದು ವಿದ್ಯಾರ್ಥಿಗಳು ಗೈರು ಆಗಿರುವ ಬಗ್ಗೆ ಇಲಾಖೆ ಅಧಿಕಾರಿಗಳು ಕೂಡ ತನಿಖೆ ಮಾಡಿಲ್ಲ. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಆನ್‌ಲೈನ್‌ ನೋಂದಣಿ ಕಡ್ಡಾಯ ಮಾಡಿದ್ದರಿಂದ ಈ ಹಿಂದಿನ ಪರೀಕ್ಷೆಗಳಲ್ಲಿ ಗೈರು ಆಗಿರುವ ವಿದ್ಯಾರ್ಥಿಗಳು ಅಷ್ಟೊಂದು ಪ್ರಮಾಣದಲ್ಲಿ ಇರಲು ಸಾಧ್ಯವಿಲ್ಲ ಹಾಗೂ ವಿದ್ಯಾರ್ಥಿಗಳನ್ನೇ ನಕಲು ಮಾಡಿರುವ ಬಗ್ಗೆ ಬೋರ್ಡ್‌ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಯಾವ ಶಿಕ್ಷಣ ಸಂಸ್ಥೆ ಎಂಬುದು ಇಲಾಖೆಗೆ ಸ್ಪಷ್ಟವಾಗಿಲ್ಲ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಮೂರು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಇದರಲ್ಲಿ ಸೇರಿಕೊಂಡಿದ್ದಾರೆ.

ನಕಲು ಸೃಷ್ಟಿಸಲು ಕಾರಣವೇನು?
ಶಿಕ್ಷಣ ನಿಯಮದ ಪ್ರಕಾರ 25 ವಿದ್ಯಾರ್ಥಿಗಳಿದ್ದ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳನ್ನು ಮಾತ್ರ ನವೀಕರಣ ಮಾಡಲಾಗುತ್ತದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸರ್ಕಾರದ ಅನುದಾನವನ್ನು ಮಕ್ಕಳ ದಾಖಲಾತಿಯ ಆಧಾರದಲ್ಲೇ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿಯಲ್ಲಿ 25 ವಿದ್ಯಾರ್ಥಿಗಳು ಇಲ್ಲದ ಶಾಲೆಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸಿರುವ ಸಾಧ್ಯತೆ ಇದೆ. ಹಾಗೇ ಅನ್ನಭಾಗ್ಯ, ಕ್ಷೀರಭಾಗ್ಯ, ಸಮವಸ್ತ್ರ, ಶೂ, ಸಾಕ್ಸ್‌, ಸೈಕಲ್‌ ಇತ್ಯಾದಿ ಸರ್ಕಾರಿ ಸೌಲಭ್ಯ ಹೆಚ್ಚುವರಿಯಾಗಿ ಪಡೆಯಲು ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸಿರುವ ಸಾಧ್ಯತೆಯೂ ಇದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಆಧಾರ್‌ಗೆ ವಿರೋಧ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಧಾರ್‌ ಕಡ್ಡಾಯ ಎಂದು ಎಸ್ಸೆಸ್ಸೆಲ್ಸಿ ಬೋರ್ಡ್‌ ಆದೇಶ ಹೊರಡಿಸಿತ್ತು. ಇದರಿಂದ ಯಾವುದೇ ರೀತಿಯಲ್ಲೂ ನಕಲು ಸೃಷ್ಟಿಗೆ ಅವಕಾಶವಿಲ್ಲ. ಬಹುತೇಕ ಶಿಕ್ಷಣ ಸಂಸ್ಥೆಗಳು ಇಲಾಖೆ ಈ ಕ್ರಮವನ್ನು ಶ್ಲಾ ಸಿವೆ. ಆದರೆ, ಕೆಲವು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನೇ ಅಸ್ತ್ರವಾಗಿಸಿಕೊಂಡು, ಆಧಾರ್‌ ಕಡ್ಡಾಯ ಮಾಡಿರುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಬೋರ್ಡ್‌ ತನ್ನ ಆದೇಶವನ್ನು ವಾಪಾಸ್‌ ಪಡೆದಿದೆ.

ವಿದ್ಯಾರ್ಥಿಗಳನ್ನೇ ನಕಲು ಮಾಡಿ ಶಿಕ್ಷಣ ಸಂಸ್ಥೆಗಳು ಮಾಹಿತಿ ನೀಡಿರುವುದು  ಮಂಡಳಿ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸಚಿವರ ಗಮನಕ್ಕೂ ತಂದಿದ್ದೇವೆ.
– ವಿ.ಸುಮಂಗಳಾ, ನಿರ್ದೇಶಕಿ, ಎಸ್ಸೆಸ್ಸೆಲ್ಸಿ ಬೋರ್ಡ್‌

ಶಾಲಾ ಮಾನ್ಯತೆ ನವೀಕರಣ ಹಾಗೂ ಅನುದಾನಕ್ಕಾಗಿಯೇ  ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು ಈ ರೀತಿಯ ನಕಲು ಸೃಷ್ಟಿಸಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಆಧಾರ್‌ ಕಡ್ಡಾಯ ಮಾಡಬೇಕು.
– ಡಿ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕ 
ಖಾಸಗಿ ಪ್ರಾಥಮಿಕ, ಪ್ರೌಢಶಾಲಾ ಆಡಳಿತ ಮಂಡಳಿಗಳ ಸಂಘಟನೆ

ಮೂರು ವರ್ಷ ಗೈರಾದ ವಿದ್ಯಾರ್ಥಿಗಳ ಮಾಹಿತಿ
ವರ್ಷ         ನೋಂದಣಿ    ಹಾಜರಾತಿ    ಗೈರು
2015        8,56,438    8,37,357    19,081
2016        8,49,233    7,58,702    90,531
2017        8,77,174    7,64,950    1,12,224
ಒಟ್ಟು        25,82,845    23,61,009    2,21,836

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next