ಬೆಂಗಳೂರು: ದೇಶವನ್ನು ಕಾಡುತ್ತಿರುವ ಕೋಮವಾದ, ಜಾತಿವಾದ, ಭ್ರಷ್ಟಾಚಾರ ಸಮಸ್ಯೆಗಳನ್ನು ಕೊನೆಗಾಣಿಸದಿದ್ದರೆ ಅರಾಜಕತೆ ಸೃಷ್ಟಿಯಾಗಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.
ದಲಿತ ಸಂಘಟನೆಗಳ ವತಿಯಿಂದ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ “ಸಂವಿಧಾನವನ್ನು ಸುಟ್ಟ ಬೆಂಕಿ-ದೇಶವನ್ನು ಸುಡಲಿದೆ’ ವಿಷಯದ ಬಗ್ಗೆ ಮಾತನಾಡಿದರು.
ದೇಶದಲ್ಲಿ ಆರ್ಥಿಕ, ಕೋಮು, ಸಾಮಾಜಿಕ ಭಯೋತ್ಪಾದನೆಗಳಿಂದ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳನ್ನು ಕಿತ್ತೂಗೆಯದಿದ್ದರೆ ಸಂವಿಧಾನವೂ ಉಳಿಯುವುದಿಲ್ಲ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿದ್ದು, ನ್ಯಾಯಾಧೀಶರು ಕೂಡ ಬಂಧನಕ್ಕೆ ಒಳಗಾಗುವ ಸ್ಥಿತಿ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಲವು ಪಟ್ಟಭದ್ರರು ದೇಶದಲ್ಲಿ ವ್ಯವಸ್ಥಿತವಾಗಿ ತಪ್ಪು ಚಿಂತನೆಗಳನ್ನು ಹರಡುತ್ತಿದ್ದಾರೆ. ಸಂವಿಧಾನ ತಿದ್ದುಪಡಿ ಆಗಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಸಂವಿಧಾನಕ್ಕೆ ಪರ್ಯಾಯವಾದದನ್ನು ಇವರಿಂದ ಕೊಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಜಗತ್ತಿನ ಶ್ರೇಷ್ಠ ನ್ಯಾಯಶಾಸ್ತ್ರಜ್ಞರು ಕೂಡ ಭಾರತದದ್ದು ಶ್ರೇಷ್ಠ ಸಂವಿಧಾನ ಎಂದಿದ್ದಾರೆ. ಆದರೆ, ಸಂವಿಧಾನ ಓದದೇ, ಅದರ ಆಶಯಗಳನ್ನು ಅರ್ಥ ಮಾಡಿಕೊಳ್ಳದವರು ಅದನ್ನು ಬದಲಿಸುವ ಮಾತನಾಡುತ್ತಾರೆ. ಸಂವಿಧಾನ ಉಳಿಸಿಕೊಳ್ಳಲು ಎಲ್ಲರೂ ಬದ್ಧರಾಗಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ವ್ಯವಸ್ಥೆಯನ್ನು ಪ್ರಶ್ನಿಸುವವರಿಗೆ “ದೇಶದ್ರೋಹಿ’ ಪಟ್ಟ ಕಟ್ಟಲಾಗುತ್ತಿದೆ. ಗೋರಕ್ಷಣೆ, ದೇಶದ್ರೋಹ ಎಂಬ ಎರಡು ಅಸ್ತ್ರಗಳನ್ನು ಮುಂದಿಟ್ಟುಕೊಂಡು ಪ್ರತಿರೋಧದ ದನಿಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಹಿತಿ ಕೆ.ಷರೀಫಾ, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಆರ್.ಮೋಹನ್ ರಾಜ್, ಮುಖಂಡರಾದ ಬಸವರಾಜ್ ಕೌತಾಲ್, ಡಿ.ಶಿವಶಂಕರ್, ಡಾ.ಮನೋಹರ ಚಂದ್ರಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.