ಕಡೂರು: ಕಡೂರು ಪಟ್ಟಣದಲ್ಲಿ ಖಾಸಗಿ ಬಸ್ಸುಗಳಿಗೆ ಒಂದು ಸುಸಜ್ಜಿತ ನಿಲ್ದಾಣವೇ ಇಲ್ಲದೆ ಪ್ರಯಾಣಿಕರ ಪಡಿಪಾಟಲು ಹೆಚ್ಚಾಗಿದೆ. ಇತ್ತ ಕೃತಕ ಸಂಚಾರ ಸಮಸ್ಯೆಯೇ ಉದ್ಭವವಾಗಿದೆ. 40 ವರ್ಷದ ಹಿಂದೆ ಈಗಿರುವ ಪುರಸಭಾ ಕಚೇರಿಯೇ ಸರಕಾರಿ ಬಸ್ಸುಗಳ ನಿಲ್ದಾಣವಾಗಿತ್ತು. ಅಲ್ಲೇ ಮತ್ತೊಂದು ಬದಿಯಲ್ಲಿ ಖಾಸಗಿ ಬಸ್ಸುಗಳ ನಿಲ್ದಾಣವೂ ಇತ್ತು. ಆಗ ಇಷ್ಟೊಂದು ಬಸ್ಸುಗಳಾಗಲಿ, ಪ್ರಯಾಣಿಕರ ದಟ್ಟಣೆಯಾಗಲಿ ಇರಲಿಲ್ಲ. ಈಗ ಅದರ ಮೂರ್‍ನಾಲ್ಕು ಪಟ್ಟು ಹೆಚ್ಚಾಗಿದೆ.
ಬದಲಾದ ಕಾಲಘಟ್ಟದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯು ಯು.ಬಿ. ರಸ್ತೆಯಲ್ಲಿತನ್ನದೇ ಆದ ದೊಡ್ಡ ನಿಲ್ದಾಣವನ್ನು ಹೊಂದಿತು. ಆದರೆ ಖಾಸಗಿ ಬಸ್ಸುಗಳು ಮಾತ್ರ ಹಳೆಯ ಜಾಗದಲ್ಲಿಯೇ ಅಂದರೆ ಪುರಸಭೆ ಕಚೇರಿ ಎದುರು ನಿಲುಗಡೆ ಮಾಡುತ್ತಿದ್ದುದರಿಂದ ಅದೇ ಸ್ಥಳ ಖಾಸಗಿ ಬಸ್ಸುಗಳ ನಿಲ್ದಾಣವಾಗಿ ಮುಂದುವರಿಯಿತು. ಇದರಿಂದಾಗಿ ಸುತ್ತ-ಮುತ್ತಲ ಅಂಗಡಿ-ಮುಂಗಟ್ಟುಗಳ ವ್ಯಾಪಾರ ವಹಿವಾಟು ಹೆಚ್ಚಾಗಿ ಬಹಳಷ್ಟು ಕುಟುಂಬಗಳು ಬದುಕನ್ನು ಕಟ್ಟಿಕೊಂಡವು.
ಲಾಕ್‌ಡೌನ್ ಎಲ್ಲೆಡೆ ನಡೆದಂತೆ ಇಲ್ಲಿಯೂ ನಡೆದು ಬಸ್ಸುಗಳ ಸಂಚಾರ ಸ್ಥಗಿತವಾಗಿ ಇದೀಗ ಮತ್ತೆ ಹಂತ-ಹಂತವಾಗಿ ಆರಂಭವಾಗಿದೆ. ಆದರೆ ಖಾಸಗಿ ಬಸ್ ಮಾಲೀಕರ ಧೋರಣೆಯಿಂದ ಹೊಸ ಸಂಚಾರ ಸಮಸ್ಯೆ ಉದ್ಬವವಾಗಿದೆ. ನಿತ್ಯ ಸುಮಾರು 35 ಖಾಸಗಿ ಬಸ್‌ಗಳು ಓಡಾಡುತ್ತಿದ್ದು, ವಿಪರ್ಯಾಸವೆಂದರೆ ಈ ಎಲ್ಲಾ ಬಸ್ಸುಗಳು ಪುರಸಭೆ ಎದುರು ಇದ್ದ ಜಾಗದಲ್ಲಿ ನಿಲ್ಲಿಸದೆ ಯು.ಬಿ. ರಸ್ತೆಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಒಂದು ಗೇಟ್‌ನ ಮುಂದೆ ನಿಲ್ಲಿಸುತ್ತಿದ್ದು, ಕೃತಕ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ.
ಇದನ್ನೂ ಓದಿ:ದೇವದಾಸಿಯರ ಮಾಸಾಶನ ಹೆಚಳಕ್ಕೆ ಆಗ್ರಹ
ಇಲ್ಲಿಂದ ಹೊಸದುರ್ಗ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಅಜ್ಜಂಪುರ, ಹುಳಿಯಾರು, ಚಿಕ್ಕನಾಯಕನಹಳ್ಳಿ, ತಿಪಟೂರು, ತುಮಕೂರು ಮುಂತಾದ ಪ್ರಮುಖ ಊರುಗಳಲ್ಲದೆ ಅನೇಕ ಗ್ರಾಮಾಂತರ ಭಾಗಗಳಿಗೂ ಖಾಸಗಿ ಬಸ್‌ಗಳು ತೆರಳುತ್ತಿವೆ. ಇದರಿಂದ ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ತಿರುಗಾಡುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಹಾಲಿ ಇದ್ದ ಜಾಗದಲ್ಲಿಯೇ ಖಾಸಗಿ ಬಸ್ ನಿಲ್ದಾಣ ಮುಂದುವರಿದಿದ್ದರೆ ಈ ಸಂಚಾರ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಕೆಲವು ಬಸ್ ಮಾಲೀಕರ ಧೋರಣೆಯಿಂದ ಬಸ್ಸುಗಳನ್ನು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಎದುರು ನೂತನವಾಗಿ ನಿರ್ಮಾಣವಾಗಿರುವ ಜೋಡಿಮಾರ್ಗದ ಬದಿಯಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ಳುತ್ತಿರವುದರಿಂದ ಇಡೀ ಸ್ಥಳವೇ ಜನಜಂಗುಳಿಯಿಂದ ಕೂಡಿ ಸಂಚಾರ ಸಮಸ್ಯೆ ಉದ್ಭವವಾಗಿದೆ.
ಎ.ಜೆ. ಪ್ರಕಾಶ್‌ಮೂರ್ತಿ