ಕೊರಟಗೆರೆ: ಕುಡಿಯುವ ನೀರಿನ ಸರಬರಾಜು ಮತ್ತು ಸ್ವಚ್ಛತೆ ನಿರ್ವಹಣೆಯಲ್ಲಿ ವಿಳಂಬ ಮಾಡಿ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿ ಮಾಡುವ ವಾಟರ್ ಮ್ಯಾನ್ ಮತ್ತು ನೌಕರರ ವಿರುದ್ಧ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಮಾನತಿಗೆ ಆದೇಶ ಮಾಡುತ್ತೇನೆ ಎಂದು ತುಮಕೂರು ನಗರಾಭಿ ವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅನುಪಮಾ ಖಡಕ್ ಎಚ್ಚರಿಕೆ ನೀಡಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆದೇಶದ ಮೇರೆಗೆ ಕೊರಟಗೆರೆ ಪಪಂಗೆ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿದ ಅವರು, ಪಪಂ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಡಿಯುವ ನೀರಿನ ತುರ್ತು ಸಭೆ ನಡೆಸಿದರು.
ಅನಿವಾರ್ಯ: ಈ ವೇಳೆ ವಾಟರ್ ಮ್ಯಾನ್‌ಗಳಿಂದ ಮಾಹಿತಿ ಪಡೆದು ಅಧಿಕಾರಿಗಳ ವಿರುದ್ಧ ಕಿಡಿಕಾರಿ ದರು. ಪಟ್ಟಣದಲ್ಲಿ 15 ಸಾವಿರ ಜನರಿಗೆ ಇನ್ನೆರಡು ವರ್ಷ ಆಗುವಷ್ಟು ಕುಡಿಯುವ ನೀರಿನ ಶೇಖರಣೆ ಆಗಿದೆ. 15 ವಾರ್ಡುಗಳಿಗೆ ಪ್ರತಿದಿನ ಒಂದು ಗಂಟೆ ಕಡ್ಡಾಯವಾಗಿ ಕುಡಿಯುವ ನೀರಿನ ಪೂರೈಕೆ ಮಾಡಿ. ಪ್ರತಿದಿನ ಸಂಜೆ ತನಗೆ ದಾಖಲೆ ಸಮೇತ ವರದಿ ಸಲ್ಲಿಸಬೇಕು. ಇಲ್ಲವಾದರೇ ವಾಟರ್ ಮ್ಯಾನ್‌ಗಳಿಗೆ ಪಾವಗಡ ಮತ್ತು ಮಧುಗಿರಿ ಪಟ್ಟಣಕ್ಕೆ ನೀರಿನ ಪೂರೈಕೆ ಗಾಗಿ ವರ್ಗಾವಣೆ ಮಾಡುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಪತ್ರ ಬರೆಯುವೆ: ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಕೊಡ ನೀರಿಗಾಗಿ 5-6 ಕಿ.ಮೀ ದೂರ ಹೋಗುತ್ತಿದ್ದಾರೆ. ಕಾಡಿನಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳಿಗೆ ನೀರಿಲ್ಲದೇ ನಾಡಿಗೆ ಬರುತ್ತಿವೆ. ಪಾವಗಡ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ತೋಟಗಳು ಒಣಗಿ ಹೋಗಿವೆ. ಕೊರಟಗೆರೆ ಪಟ್ಟಣದ 15 ವಾರ್ಡ್‌ನಲ್ಲಿ ಒಂದು ಹನಿ ಕುಡಿಯುವ ನೀರು ವ್ಯರ್ಥ ಆಗುತ್ತಿರುವ ಮಾಹಿತಿ ಬಂದರೆ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆಂದರು. ಪಟ್ಟಣದ 15 ವಾರ್ಡುಗಳಿಗೆ ಪ್ರತಿದಿನ 1 ಗಂಟೆ ನೀರು ಬಿಡುವಂತಹ ಸಮಯವನ್ನು ನಿಗದಿ ಮಾಡಿ ಪಪಂ ಕಚೇರಿ ಸೂಚನಾ ಫಲಕ ಮತ್ತು ಆಯಾ ವಾರ್ಡುಗಳಿಗೆ ಬಿತ್ತಿಪತ್ರದ ಮೂಲಕ ಪ್ರಚಾರಪಡಿಸಬೇಕು.
ನೀರಿನ ಸರಬರಾಜು ಆಗದಿರುವ ವಾರ್ಡುಗಳಿಗೆ ಪ್ರತಿದಿನ ನೀರಿನ ಟ್ಯಾಂಕರ್‌ಗಳ ಮೂಲಕ ಸರಬ ರಾಜು ಮಾಡಬೇಕು. ದಿನಪತ್ರಿಕೆಗಳಿಗೆ ಮಾಹಿತಿ ನೀಡಿ ಕುಡಿಯುವ ನೀರಿನ ಅರಿವು ಮೂಡಿಸಿ ಪ್ರಯತ್ನ ಮಾಡಿ ಎಂದು ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು.
ಮುಲಾಜಿಲ್ಲದೇ ಕ್ರಮ: ಪಪಂ ಮುಖ್ಯಾಧಿಕಾರಿ ರುಕ್ಮಿಣಿ ಪ್ರತಿಕ್ರಿಯಿಸಿ, ಪಟ್ಟಣಕ್ಕೆ ಆಗುವಷ್ಟು ಹೇಮಾವತಿ ನೀರು ಜೆಟ್ಟಿಅಗ್ರಹಾರ ಕೆರೆಯಲ್ಲಿ ಶೇಖರಣೆ ಆಗಿದೆ. ನಿರ್ವಹಣೆ ಕೊರತೆಯಿಂದ ನೀರಿನ ಅಭಾವ ಸೃಷ್ಟಿಯಾಗಿದೆ. ಸ್ವಚ್ಛತೆ ನಿರ್ವಹಣೆ ಮತ್ತು ಕುಡಿಯುವ ನೀರಿನ ಪೂರೈಕೆ ಬಗ್ಗೆ ತಾನೇ ಖುದ್ದಾಗಿ ಪಟ್ಟಣದ ವಾರ್ಡುಗಳಿಗೆ ಭೇಟಿ ನೀಡಿ ಸಾರ್ವ ಜನಿಕರಿಂದ ಮಾಹಿತಿ ಕಲೆ ಹಾಕುತ್ತೇನೆ. ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೇ ಕ್ರಮಕ್ಕೆ ಸೂಚಿಸುತ್ತೇನೆಂದರು.
ಪಪಂ ಎಂಜಿನಿಯರ್ ತ್ಯಾಗರಾಜು ಮಾತನಾಡಿ, ಕೊರಟಗೆರೆ ಪಟ್ಟಣಕ್ಕೆ ಪ್ರತಿದಿನ 28 ಲಕ್ಷ ಲೀಟರ್ ಕುಡಿಯುವ ನೀರಿನ ಸರಬರಾಜು ಆಗುತ್ತಿದೆ. 15 ವಾರ್ಡುಗಳ 144 ಲೈನ್‌ಗಳಿಗೆ ನೀರು ಸರಬರಾಜು ಮಾಡಲು ಗಿರಿನಗರ, ತಾಪಂ ಕಚೇರಿ, ಕೋಟೆ ಬೀದಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ನೀರಿನ ಶೇಖರಣೆ ಘಟಕವಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರುಕ್ಮಿಣಿ, ಆರೋಗ್ಯ ಅಧಿಕಾರಿ ರೈಸ್‌ಅಹಮ್ಮದ್, ಸಿಬ್ಬಂದಿಗಳಾದ ವೆಂಕಟಾಪತಿ, ನಾಗರತ್ನಮ್ಮ, ಸಾವಿತ್ರಮ್ಮ ಮತ್ತಿತರರಿದ್ದರು.