Advertisement

ನ‌ದಿಗಳಲ್ಲಿ ಸೃಷ್ಟಿಯಾಗಿದೆ ಮರಳು ದಿಬ್ಬ: ಕಾದಿದೆ ಅಪಾಯ

04:14 PM Sep 19, 2017 | Team Udayavani |

ಕುಂದಾಪುರ:  ಪಶ್ಚಿಮಘಟ್ಟಗಳ ಮೂಲದಿಂದ ಪಶ್ಚಿಮಾಭಿಮುಖವಾಗಿ ಹರಿಯುವ ಪಂಚಗಂಗಾವಳಿ ನದಿ ಸೇರಿದಂತೆ ಇತರ ನದಿಯಲ್ಲಿ   ಮರಳುಗಾರಿಕೆಯ ನಿಷೇಧದಿಂದಾಗಿ  ನದಿಗಳಲ್ಲಿ  ಕಾಲಕಾಲಕ್ಕೆ ಹೂಳು ತೆಗೆಯದೇ  ಮರಳ ದಿಬ್ಬಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗಿ ಪ್ರಸ್ತುತ  ಕಡಲಸೇರುವ ನದಿಗಳು ಅಪಾಯದ ಅಂಚಿನಲ್ಲಿವೆೆ. ನದಿಯಲ್ಲಿ ಈ ಹಿಂದೆ ಎಂದೂ ಕಾಣದ   ಮರಳಿನ ಸಣ್ಣ ಸಣ್ಣ ದಿಬ್ಬಗಳು ಹಾಗೂ ಅದರಲ್ಲಿ  ಬೆಳೆದುನಿಂತ ಸಸ್ಯಗಳು ದಿಬ್ಬಗಳನ್ನು ಇನ್ನಷ್ಟು ವಿಸ್ತಾರಗೊಳಿಸುತ್ತಾ ಇವೆ.

Advertisement

ಮುಚ್ಚಿಹೋಗುವ ಪರಿಸ್ಥಿತಿ
ವಿಸ್ತರಣೆ ಹೆಚ್ಚುತ್ತಾ ಹೋದಂತೆ ಪ್ರಸ್ತುತ  ಇಳಿತದ ಸಮಯದಲ್ಲಿ ಬರೇ ಮರಳಿನ ಕುದುರುಗಳೇ ಕಂಡುಬರುತ್ತಿದೆ. ಇದರಿಂದಾಗಿ ನದಿಯ ನೀರು ಸರಾಗವಾಗಿ  ಹರಿಯಲು ಅವಕಾಶವಿಲ್ಲದೇ ನದಿಯೇ ಮುಚ್ಚಿಹೋಗುವ ಪರಿಸ್ಥಿತಿ ಉಂಟಾಗಿದೆ.

ಅಪಾಯಕಾರಿ ಬೆಳವಣಿಗೆ
ಕುಂದಾಪುರದ ಪಂಚಗಂಗಾವಳಿ ನದಿಯಲ್ಲಿ ರುವ ಬಬ್ಬುಕುದ್ರು ಪ್ರದೇಶಕ್ಕೆ ಹೆಚ್ಚಿನ ಮರಳ ದಿಬ್ಬಗಳು ಸಾಲು ಸಾಲಾಗಿ ಸೇರಿ ಗಂಗೊಳ್ಳಿ  ಮತ್ತು ಕುಂದಾಪುರ ಪ್ರತ್ಯೇಕಿಸುವ ಲಕ್ಷಣಗಳು ಕಂಡು ಬರುತ್ತಿವೆೆ. ಮೀನುಗಾರರಿಗೆ ದೋಣಿ ಸಂಚಾರಕ್ಕೆ  ಅಡಚಣೆ ಉಂಟಾಗಿದೆ. ಭವಿಷ್ಯದ ದೃಷ್ಟಿಯಲ್ಲಿ  ಅಪಾಯಕಾರಿ ಬೆಳವಣಿಗೆ. 

ಮರಳುಗಾರಿಕೆ ನಿಷೇಧವೇ ಕಾರಣ
ಜಿಲ್ಲೆಯ  ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೆಧ ಹೇರಿ ಹಲವಾರು ತಿಂಗಳುಗಳು ಕಳೆದಿವೆ.  ಕುಂದಾಪುರ – ಗಂಗೊಳ್ಳಿ ನಡುವಿನ ಪಂಚಗಂಗಾವಳಿ ಹೊಳೆಯಲ್ಲಿರುವ ಮರಳು ನೇರವಾಗಿ ಗಂಗೊಳ್ಳಿ ಅಳಿವೆ ಬಾಗಿಲನ್ನು ಸೇರಿಕೊಳ್ಳುವುದರ ಜೊತೆಗೆ  ನದಿಯಲ್ಲಿ ಅಲ್ಲಲ್ಲಿ ಶೇಖರಣೆಯಾಗುತ್ತಾ ದಿಬ್ಬಗಳಾಗುತ್ತಿವೆೆ. ಇಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿದ್ದಲ್ಲಿ   ಈ ಮರಳು ದಿಬ್ಬಗಳ ನಿರ್ಮೂಲನೆ ಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.   ನದಿಯಲ್ಲಿ  ಅಲ್ಲಲ್ಲಿ  ಮರಳದಿಬ್ಬ  ಸೃಷ್ಟಿಯಾಗುತ್ತಾ ಹೋಗಿ  ನದಿ ಪಾತ್ರವನ್ನೇ ಬದಲಿಸಿ ಬಿಟ್ಟಿದೆ. ದಿಬ್ಬಗಳಲ್ಲಿ ಗಿಡಗಳು ಬೆಳೆದು ಕಾಡಾಗುತ್ತಿದೆ.

ನಿಯಮಾವಳಿ ತಡೆಯಾಗದು
ಸಿ.ಆರ್‌.ಝಡ್‌ ನಿಯಮಾವಳಿಗಳ ನೆಪ ಮುಂದಿಟ್ಟು  ಅಧಿಕಾರಿಗಳು ಹಲವೆಡೆ ಮರಳುಗಾರಿಕೆಗೆ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದರೂ, ಪ್ರಾಕೃತಿಕ ದುರಂತ ತಪ್ಪಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲು ಯಾವುದೇ ನಿಯಮಾವಳಿಗಳು ಅಡ್ಡ ಬರುವುದಿಲ್ಲ ಎಂದು ತಿಳಿಯಬೇಕಾಗಿದೆ.

Advertisement

ಅಧ್ಯಯನ ಅಗತ್ಯ
ಪಂಚ ಮಹಾನದಿಗಳು  ಕುಂದಾಪುರ ಕಡೆ ಹರಿದು ನದಿ ಸೇರುವ ಈ ಹಾದಿಯಲ್ಲಿ  ಮರಳಿನಿಂದ ತುಂಬಿ ಹೋಗಿರುವುದರಿಂದ ನದಿ ಉತ್ತರಕ್ಕೆ ತಿರುಗಿ ಸೌರ್ಪರ್ಣಿಕಾ ನದಿಯೊಂದಿಗೆ ಸೇರಿ ಸಮುದ್ರ ಸೇರುವ ಹಂತದಲ್ಲಿದೆ.  ಹೀಗಾಗಿ ಈ ಐದು ನದಿಗಳು ಹರಿಯುವ ನದಿಯ ನಡುವಿನಲ್ಲಿರುವ  ಬಬ್ಬುಕುದ್ರು ಪ್ರದೇಶದ ಎಡಗಡೆಯಲ್ಲಿ ನದಿಯ ನೀರು  ಹರಿಯದಂತಾಗಿ ನದಿ ನೀರು ಕವಲಾಗಿ ಸಾಗಿ  ಗಂಗೊಳ್ಳಿ ಕಡೆ ಹರಿಯುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಒಟ್ಟಾರೆ  ನದಿಯಲ್ಲಿ ಅಲ್ಲಲ್ಲಿ  ತಲೆ ಎತ್ತಿರುವ ದಿಬ್ಬಗಳನ್ನು ತೆರವಿನ ಅಗತ್ಯ ಇದೆ.

ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಲಾಗಿದೆ. ಈ ಭಾಗದ ನದಿಗಳಲ್ಲಿ ಮೀನುಗಾರಿಕಾ ದೋಣಿಗಳು ಸಂಚಾರಕ್ಕೆ  ಅಡ್ಡಿಯಾಗಿರುವ  ಮರಳು ದಿಬ್ಬಗಳನ್ನು  ಮಾತ್ರ ತೆಗೆಯಲು ಹಸುರು ಪೀಠ ಅವಕಾಶ ನೀಡಿದ್ದು, ಅದರಂತೆ ಮರಳು ದಿಬ್ಬಗಳ ತೆರವು ಕಾರ್ಯ ನಡೆಸಲಾಗುತ್ತದೆ. ದೋಣಿಗಳು ಸಂಚರಿಸಲು ಅಡ್ಡಿಯಾಗಿರುವ ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು ಈ ವರದಿಯಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ
ಪ್ರಮೋದ್‌ ಮಧ್ವರಾಜ್‌, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ

ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next