Advertisement

ಕೃಷಿ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿ

01:04 PM Mar 05, 2017 | Team Udayavani |

ದಾವಣಗೆರೆ: ಈ ಬಾರಿಯ ಬಜೆಟ್‌ನಲ್ಲಿಯೇ ರಾಜ್ಯ ಸರ್ಕಾರ ಕೂಲಿ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆ ಘೋಷಿಸಿ, ಅದಕ್ಕೆ ಅನುದಾನ ಮೀಸಲಿಡಲು ರಾಜ್ಯ ಸರ್ಕಾರ ಕ್ರಮ ವಹಿಸಲಿ ಎಂದು ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ ಆಗ್ರಹಿಸಿದರು. 

Advertisement

ಶನಿವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಕೃಷಿ ಕೂಲಿ ಕಾರ್ಮಿಕರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಮಂಡಿಸಲಿರುವ ಬಜೆಟ್‌ನಲ್ಲಿ ಕೃಷಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಕಲ್ಯಾಣ ಮಂಡಳಿ ರಚನೆ ಕುರಿತು ಘೋಷಿಸಬೇಕು ಎಂದರು. 

ನಮ್ಮ ಸಮಸ್ಯೆಗಳನ್ನು ತೋಡಿಕೊಂಡು ಕಣೀ¡ರು ಸುರಿಸಿದರೆ ಅವುಗಳಿಗೆ ಪರಿಹಾರ ಸಿಗುವುದಿಲ್ಲ. ಬದಲಿಗೆ ಹೋರಾಟದ ಹಾದಿ ಹಿಡಿದು ಪರಿಹಾರ ಕಂಡುಕೊಳ್ಳಬೇಕು. ಈ ಹಿಂದೆ ಕಟ್ಟಡ ಕಾರ್ಮಿಕರಿಗೂ ಅನೇಕ ಸಮಸ್ಯೆಗಳು ಎದುರಾದಾಗ ಪರಿಹಾರ ಕಂಡುಕೊಳ್ಳಲು ಹಳ್ಳಿಯಿಂದ ದಿಲ್ಲಿಯವರೆಗೆ ಹೋರಾಟ ನಡೆಸಿದ್ದರಿಂದ ಕಲ್ಯಾಣ ಮಂಡಳಿ ರಚನೆಯಾಗುವಂತಾಯಿತು.

ಇದೇ ಮಾರ್ಗದಲ್ಲಿ ಕೂಲಿ ಕಾರ್ಮಿಕರು ಸಾಗಬೇಕಿದೆ ಎಂದು ಅವರು ಹೇಳಿದರು. ಕೃಷಿ ಕೂಲಿ ಕಾರ್ಮಿಕರು ಮೊದಲು ಸಂಘಟಿತರಾಗಬೇಕು. ಅಂಬೇಡ್ಕರ್‌ ಆಶಯದಂತೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಎಲ್ಲರೂ ಪ್ರಜ್ಞಾವಂತರಾಗಿ ಬೀದಿಗಿಳಿದು ನಿದ್ರೆಯಲ್ಲಿರುವ ಸರ್ಕಾರ ಬಡಿದೆಬ್ಬಿಸಬೇಕು ಎಂದು ಹೇಳಿದರು. 

ಕೃಷಿ ಕೂಲಿ ಕಾರ್ಮಿಕರ ಸಂಘದ ರಾಜ್ಯ  ಪ್ರಧಾನ ಕಾರ್ಯದರ್ಶಿ ಡಾ| ಕೆ.ಎಸ್‌. ಜನಾರ್ದನ್‌ ಮಾತನಾಡಿ, ದೊಡ್ಡ ದೊಡ್ಡ ವಿದೇಶಿ ಕಂಪನಿಗಳಿಗೆ ಎಲ್ಲ ಸರ್ಕಾರಗಳು ಮಣೆ ಹಾಕುತ್ತಿವೆ. ರತ್ನಗಂಬಳಿ ಹಾಸಿ ಅವರನ್ನು ಬರಮಾಡಿಕೊಳ್ಳಲಾಗುತ್ತದೆ. ಆದರೆ, ರಾಜ್ಯದಲ್ಲಿ  72 ಲಕ್ಷ ಭೂರಹಿತ ಕೃಷಿ ಕಾರ್ಮಿಕರು, 68 ಲಕ್ಷ ಬಗರ್‌ ಹುಕುಂ ಸಾಗುವಳಿದಾರರು ಇಂದು ತಮ್ಮ ಹಕ್ಕಿಗಾಗಿ ಅರಚುತ್ತಿದ್ದರೂ ಅವರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

Advertisement

ಇನ್ನು ಕೃಷಿಕರ ಸಮಸ್ಯೆಯಂತೂ ಸರ್ಕಾರಗಳಿಗೆ ಸಮಸ್ಯೆಯೇ ಅಲ್ಲವಾಗಿವೆ.ದೇಶದ 3 ಲಕ್ಷ ರೈತರು ತಮ್ಮ ಸಮಸ್ಯೆಗೆ ಉತ್ತರ ಕಂಡುಕೊಳ್ಳಲಾರದೆ ಇಹಲೋಕ ತ್ಯಜಿಸಿದ್ದಾರೆ. ಅವರ ದಾರಿಯಲ್ಲೇ ಇನ್ನೂ ಅನೇಕ ರೈತರು ಸಾಗುತ್ತಲೇ ಇದ್ದಾರೆ. ಆದರೆ, ಅವರನ್ನು ಉಳಿಸಿಕೊಳ್ಳಬೇಕು ಎಂಬ ಆಶಯ ಮಾತ್ರ ಸರ್ಕಾರಕ್ಕೆ ಇಲ್ಲವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ 15 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿರುವ ಕುರಿತು ವರದಿಯಾಗಿದ್ದರೂ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಶೇ. 48 ಜನರಿಗೆ ಭೂಮಿಯೇ ಇಲ್ಲ. ಹೀಗಿದ್ದರೂ ಆಳುವ ಸರ್ಕಾರಗಳು ಬಡವರ ಬಗ್ಗೆ ಕುರಿತು ಮೊಸಳೆ ಕಣ್ಣೀರು ಸುರಿಸುವ ನಾಟಕವಾಡುತ್ತಿವೆ ಎಂದರು. 

ಕೃಷಿ ಕಾರ್ಮಿಕರು ಕೆಲಸ ಮಾಡುವಾಗ ಸಾವಿಗೀಡಾದರೆ 5 ಲಕ್ಷ ರೂ. ಪರಿಹಾರ, 50 ವರ್ಷ ದಾಟಿದವರಿಗೆ ಮಾಸಿಕ ಭತ್ಯೆ, ಮನೆ ಕಟ್ಟಲು 3 ಲಕ್ಷದವರೆಗೆ ಸಾಲ, ಕೃಷಿ ಮಹಿಳೆಗೆ 20 ಸಾವಿರ ಹೆರಿಗೆ ಭತ್ಯೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ 250 ದಿನಗಳ ಕೆಲಸ ಹಾಗೂ ದಿನವೊಂದಕ್ಕೆ 400 ಕೂಲಿ ಮತ್ತಿತರ ಬೇಡಿಕೆಗಳ ಈಡೇರಿಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಸಂಚಾಲಕ ಹೊನ್ನಪ್ಪ ಮರೆಮ್ಮನವರ, ಸಿಪಿಐ ರಾಜ್ಯ ಸಮಿತಿ ಸದಸ್ಯ ಆನಂದರಾಜ್‌, ಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌, ಎಐಟಿಯುಸಿ ತಾಲೂಕು ಸಮಿತಿ ಅಧ್ಯಕ್ಷ ಟಿ.ಎಸ್‌.  ನಾಗರಾಜ್‌, ಎನ್‌.ಟಿ. ಬಸವರಾಜ್‌ ಇತರರು ವೇದಿಕೆಯಲ್ಲಿದ್ದರು. ಐರಣಿ ಚಂದ್ರು ಮತ್ತು ತಂಡ ಕ್ರಾಂತಿಗೀತೆ ಹಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next