ದಾವಣಗೆರೆ: ಪಿಂಜಾರ್, ನದಾಫ್ ಸಮಾಜದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಆರಂಭ, ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಪಿಂಜಾರ್, ನದಾಫ್ ಸಮಾಜ ಬಾಂಧವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
1994 ಸೆ. 17 ರಂದು ಸರ್ಕಾರಿ ಆದೇಶ ಸಂಖ್ಯೆ ಸ.ಕ.ಇ. 150 ಬಿ.ಸಿ.ಎ. 94ರ ಪ್ರಕಾರ ನದಾಫ್,ಪಿಂಜಾರ್ ಸಮಾಜವನ್ನು ಪ್ರವರ್ಗ-1ಕ್ಕೆ ಸೇರಿಸಲಾಗಿದೆ. ಈವರೆಗೂ ಅತಿ ಹಿಂದುಳಿದಿರುವ ಸಮಾಜದ ಸಮಗ್ರ ಅಭಿವೃದ್ಧಿಗೆ ತೀರಾ ಅತ್ಯಗತ್ಯವಾದ ಮೂಲ ಸೌಲಭ್ಯ ಒದಗಿಸಲಾಗುತ್ತಿಲ್ಲ.
ಎಲ್ಲ ಸಮಾಜದ ಅಭಿವೃದ್ಧಿಗಾಗಿ ಆರಂಭಿಸಿರುವಂತೆ ನದಾಫ್ /ಪಿಂಜಾರ್ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನದಾಫ್/ಪಿಂಜಾರ್ ಸಮಾಜದ ಮನೆಗೆ ತೆರಳಿ, ಸ್ಥಳ ಮಹಜರು ನಡೆಸಿ, ಪ್ರವರ್ಗ-1 ಪ್ರಮಾಣ ಪತ್ರ ನೀಡಬೇಕು ಎಂದು ಸರ್ಕಾರದ ಸ್ಪಷ್ಟ ಆದೇಶ ಇದ್ದರೂ ಅನೇಕ ಕಡೆ ಪ್ರಮಾಣಪತ್ರ ವಿತರಿಸುವಲ್ಲಿ ತುಂಬಾ ತೊಂದರೆ ಮಾಡಲಾಗುತ್ತಿದೆ.
ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರ್ಕಾರದ ಸ್ಪಷ್ಟ ಆದೇಶದಂತೆ ಸ್ಥಳ ಪರಿಶೀಲನೆ, ಮಹಜರು ನಡೆಸಿ, ಅರ್ಹರಿಗೆ ಪ್ರವರ್ಗ-1 ಎ ಪ್ರಮಾಣಪತ್ರ ನೀಡಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದುಒತ್ತಾಯಿಸಿದರು. ರಾಜ್ಯದಲ್ಲಿ 30-40 ಲಕ್ಷದಷ್ಟಿರುವ ಸಮಾಜ ಬಾಂಧವರು ಹಾಸಿಗೆ, ದಿಂಬು ತಯಾರಿಕೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ. ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸುವ ಮೂಲಕ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು.
ಸ್ವಯಂ ಉದ್ಯೋಗ ಕೈಗೊಳ್ಳುವರಿಗೆ ಸಬ್ಸಿಡಿ ಸಹಿತ ಸಾಲ ಸೌಲಭ್ಯ, ಉಚಿತವಾಗಿ ತಾಂತ್ರಿಕ ಇತರೆ ಸಾಮಾನ್ಯ ಶಿಕ್ಷಣದ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಸಂಘದ ವಿಭಾಗೀಯ ಅಧ್ಯಕ್ಷ ಡಿ.ಬಿ. ಹಸನ್‌ಪೀರ್, ಜಿಲ್ಲಾಧ್ಯಕ್ಷ ಎ.ಆರ್. ಅಯಾಜ್ ಹುಸೇನ್, ಅನ್ವರ್ ಹುಸೇನ್, ರಷೀದ್ ದಿಬ್ದಳ್ಳಿ, ರಷೀದ್ ಹುಲಿಕುಂಟೆ, ಶೌಕತ್ ಅಲಿ, ಮೇಸ್ತ್ರಿ ರಹಮಾನ್, ಇಮಾಂ ಇತರರು ಇದ್ದರು.