Advertisement

ಸಮಾಜ ಜೋಡಿಸುವ ಸಾಹಿತ್ಯ ರಚಿಸಿ

10:19 AM Feb 03, 2018 | Team Udayavani |

ಕಲಬುರಗಿ: ಗೊಂದಲ ಹಾಗೂ ಕಲುಷಿತ ವಾತಾವರಣದಲ್ಲಿ ಸಮಾಜ ಸಂಕಿರಣಗೊಳಿಸುವ ಹಾಗೂ ಸಮಾಜ ಜೋಡಿಸುವ ಸಾಹಿತ್ಯ ರಚನೆ ಬಹಳ ಅಗತ್ಯವಾಗಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನ ಸಮೂಹ ಸಂಸ್ಥೆ ಆಯೋಜಿಸಿದ್ದ ಸಂಸ್ಥೆಯ 41ನೇ ವಾರ್ಷಿಕೋತ್ಸವ ಹಾಗೂ 75 ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಆಶೀರ್ವಚನ ನೀಡಿದರು.

ಹಣ ಮಹತ್ವದ್ದಲ್ಲ, ಜ್ಞಾನ ಮುಖ್ಯ. ಸಾಹಿತ್ಯವನ್ನು ಜನತೆಗೆ ಮುಟ್ಟಿಸುವುದು ಅದ್ಭುತ ಕೆಲಸ. ಕೃತಿ ಪುಷ್ಪದ ಸುವಾಸನೆ ಓದುಗರಿಗೆ ತಲುಪಿಸುವ ಗಾಳಿಯ ಹಾಗೆ ಬಸವರಾಜ ಕೊನೆಕ್‌ ಮಾಡಿದ್ದಾರೆ ಎಂದು ಶ್ಲಾಘಿಸಿದ ಪೂಜ್ಯರು, ಸಾಹಿತ್ಯ ಓದಿದರೆ ಮನಸ್ಸಿಗೆ ಆನಂದವಾಗಬೇಕು. ಆ ರೀತಿಯ ಪುಸ್ತಕಗಳು ಹೆಚ್ಚೆಚ್ಚು ಪ್ರಕಟವಾಗಬೇಕು. ಓದಿದರೆ ತಾಪ, ಮನಸ್ತಾಪಕ್ಕೆ ಕಾರಣವಾಗುವ ಸಾಹಿತ್ಯ ರಚಿಸುವ ಕೆಟ್ಟ ಸಂಸ್ಕೃತಿ ಬೆಳೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ| ಮ.ಗು. ಬಿರಾದಾರ ಮಾತನಾಡಿ, ಶುದ್ಧ ಸಾಹಿತ್ಯ ಇಂದು ಹೊರಬರುತ್ತಿಲ್ಲ. ಒಬ್ಬರನ್ನೊಬ್ಬರು ನಿಂದಿಸುವ ಸಾಹಿತ್ಯ ಕೃತಿಗಳು ಹೆಚ್ಚು ಮುದ್ರಣವಾಗುತ್ತಿವೆ ಹಾಗೂ ಹೆಚ್ಚು ಪ್ರಚಾರ ಪಡೆಯುತ್ತಿವೆ. ಇದು ಸಾಹಿತ್ಯ ಲೋಕಕ್ಕೆ ಕಪ್ಪು ಚುಕ್ಕೆ ಇದ್ದಂತೆ ಎಂದು ಹೇಳಿದರು. 

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಪುಸ್ತಕಗಳನ್ನು ಬಿಡುಗಡೆಗೊಳಿಸಿ, ಹಿರಿ ತಲೆಮಾರಿನವರು ಮಾತ್ರ ಮುದ್ರಣ ಮಾಧ್ಯಮ ಅವಲಂಬಿಸಿದ್ದು, ಯುವ ಜನತೆ ಡಿಜಿಟಲೀಕರಣದ ಮೊರೆ ಹೋಗಿದ್ದಾರೆ. ಸಿದ್ದಲಿಂಗೇಶ್ವರ ಪ್ರಕಾಶನ ಈ ಭಾಗದ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

Advertisement

ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಬಸವರಾಜ ಕೊನೇಕ್‌, ಸಿದ್ದಲಿಂಗ ಕೊನೇಕ್‌, ಶರಣಬಸವ ಕೊನೇಕ್‌, ಹಿರಿಯ ಸಾಹಿತಿಗಳಾದ ಡಾ| ಗೀತಾ ನಾಗಭೂಷಣ, ಡಾ| ವಸಂತ ಕುಷ್ಟಗಿ, ಡಾ|ಸ್ವಾಮಿರಾವ್‌ ಕುಲಕರ್ಣಿ, ಎ.ಕೆ. ರಾಮೇಶ್ವರ, ಚಿ.ಸಿ. ನಿಂಗಣ್ಣ, ಕಾವ್ಯಶ್ರೀ ಮಹಾಗಾಂವಕರ್‌, ಉಮೇಶ ಶೆಟ್ಟಿ ಹಾಗೂ ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ 75 ಪುಸ್ತಕಗಳ ಲೇಖಕರನ್ನು ಸನ್ಮಾನಿಸಲಾಯಿತು. ಪ್ರೊ| ಶಿವರಾಜ ಪಾಟೀಲ ನಿರೂಪಿಸಿದರು.

ಪುಸ್ತಕೋದ್ಯಮ ಮಾರುಕಟ್ಟೆಯಲ್ಲಿ ಭಾರತಕ್ಕೆ ಆರನೇ ಸ್ಥಾನ
ಪುಸ್ತಕೋದ್ಯಮದ ಮಾರುಕಟ್ಟೆಯಲ್ಲಿ ವಿಶ್ವದ ಮಾರುಕಟ್ಟೆಗೆ ಹೋಲಿಸಿದರೆ ಭಾರತಕ್ಕೆ 6ನೇ ಸ್ಥಾನದಲ್ಲಿದ್ದರೆ ಇಂಗ್ಲಿಷ ಪುಸ್ತಕಕ್ಕೆ ಹೋಲಿಸಿದರೆ ಎರಡನೇ ಸ್ಥಾನದಲ್ಲಿದೆ. ಭಾರತ ಪುಸ್ತಕ ಮಾರುಕಟ್ಟೆಯಲ್ಲಿ ವಿದೇಶಿ ಮಾರುಕಟ್ಟೆ ಪ್ರವೇಶ ಮಾಡಿದ್ದು, ವಿವಿಧ ಪ್ರಕಾಶನ ಸಂಸ್ಥೆಗಳು ಅನನ್ಯ ಸೇವೆ ಸಲ್ಲಿಸುತ್ತಿವೆ. ಹೀಗಾಗಿ ದೇಶದ 75 ಲಕ್ಷ ಗ್ರಂಥಗಳು ಡಿಜಿಟಲೈಸ್‌ ಆಗಿವೆ. ಶೇ.75ರಷ್ಟು ಪುಸ್ತಕಗಳು ಆನ್‌ಲೈನ್‌ನಲ್ಲಿ ಲಭ್ಯ ಇವೆ. 
 ಪ್ರೊ| ಎಚ್‌.ಎಂ. ಮಹೇಶ್ವರಯ್ಯ, ಕುಲಪತಿಗಳು, ಕರ್ನಾಟಕ ಕೇಂದ್ರೀಯ ವಿವಿ

Advertisement

Udayavani is now on Telegram. Click here to join our channel and stay updated with the latest news.

Next