ಬೀದರ: ಮುಂಗಾರು ಹಂಗಾಮು ಆರಂಭವಾಗುವ ಹಿನ್ನೆಲೆ ಕೃಷಿ ಅಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಬೀದರ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಚಿಟ್ಟವಾಡಿ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ, ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ, ನೂತನ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.
ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಜಮೀನುಗಳಲ್ಲಿ ಪ್ರಾತ್ಯಕ್ಷಿಕೆ ಮಾಡಿ ತೋರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ರೈತರಲ್ಲಿ ಉಂಟಾಗುವ ಗೊಂದಲಗಳನ್ನು ಪರಿಹರಿಸಬೇಕು ಎಂದು ಹೇಳಿದರು.
ಈ ವೇಳೆ ಮಾತನಾಡಿದ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಸ್, ರೈತರು ಬೀಜೋಪಚಾರ ಕೈಗೊಂಡು ಬಿತ್ತನೆ ಮಾಡಬೇಕು. ಏಕ ಬೆಳೆ ಬೆಳೆಯುವ ಬದಲು ಮಿಶ್ರ ಬೆಳೆ, ಅಂತರ್ ಬೆಳೆ ಪದ್ಧತಿಯಲ್ಲಿ ಬಿತ್ತನೆ ಮಾಡಬೇಕು. ವಿವಿಧ ತಾಂತ್ರಿಕತೆಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಇಳುವರಿ ಪಡೆಯಬೇಕು. ಮೌಲ್ಯವ ರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಕೆಲಸ ಮಾಡಬೇಕು. ಹೂ ಬಿತ್ತನೆ, ಹೈನುಗಾರಿಕೆ, ಜೇನು ಸಾಕಾಣಿಕೆ ಕಡೆಗೂ ಕೂಡ ರೈತರು ಗಮನ ಹರಿಸಬೇಕು ಎಂದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.50ರಷ್ಟು ಸೋಯಾಬಿನ್ ಬೆಳೆಯನ್ನು ಬೆಳೆಯಲಾಗುತ್ತಿದೆ. ಸೋಯಾಬಿನ್ ಗೆ ಹೆಚ್ಚಿನ ಬೇಡಿಕೆ ಕೂಡ ಇದೆ. ಈ ಮೊದಲು ಉದ್ದು ಬೆಳೆಯುತ್ತಿದ್ದ ಏರಿಯಾಗಳಲ್ಲಿ ಇತ್ತೀಚೆಗೆ ಸೋಯಾ ಬಿತ್ತನೆ ಮಾಡಲಾಗುತ್ತಿದೆ. ಉದ್ದು, ಹೆಸರು, ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಸುನೀಲ ಕುಲಕರ್ಣಿ, ಕೃಷಿ ಅ ಕಾರಿ ಗಿರೀಶ ಎಸ್, ಸಹಾಯಕ ಕೃಷಿ ಅ ಕಾರಿ ಪಾಂಡುರಂಗ, ಚಿಟ್ಟಾ ಗ್ರಾಪಂ ಅಧ್ಯಕ್ಷ ರಮೇಶ, ಬೊಮ್ಮಗೊಂಡ ಚಿಟ್ಟವಾಡಿ, ಜಾಕೀರ್, ನಾರಾಯಣ ಚಿಟ್ಟಾ, ಸಂತೋಷ, ಪ್ರಭು, ಹರೀಶ, ಪಾಷಾಮಿಯಾ, ಮುಲ್ತಾನ್ ಸಾಬ್, ಚಂದ್ರಕಾಂತ, ಪ್ರಕಾಶ ಗೋರನಳ್ಳಿ ಇದ್ದರು.