ಯಾದಗಿರಿ: ಕೌಶಲ ಆಧಾರಿತ ತರಬೇತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಜಿಲ್ಲೆಯ ಕೈಗಾರಿಕಾ ಕ್ಷೇತ್ರದಲ್ಲಿ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕೆಂದು ಜಿಲ್ಲಾಧಿ ಕಾರಿ ಡಾ| ರಾಗಪ್ರಿಯಾ ಆರ್. ಹೇಳಿದರು.
ನಗರದ ಜಿಲ್ಲಾ ಧಿಕಾರಿ ಕಚೇಯಲ್ಲಿ ಎನ್‌ಎಪಿಎಸ್ ಯೋಜನೆಯಡಿ ಶಿಶಿಕ್ಷು ತರಬೇತಿ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೈಗಾರಿಕೆ ಪ್ರಧಾನವಾಗಿದೆ. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಬೇಕಾದರೆ ವೃತ್ತಿ ಕೌಶಲಕ್ಕೆ ಪ್ರಥಮ ಆದ್ಯತೆ ನೀಡಬೇಕು. ಅಲ್ಲದೆ ಕೈಗಾರಿಕಾ ಉದ್ಯಮ ಸ್ಥಾಪನೆಯಿಂದ ದೇಶದ ಆರ್ಥಿಕತೆ ಹೆಚ್ಚಳಕ್ಕೆ ಸಹಕಾರಿಯಾಗಲಿದ್ದು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಕೌಶಲ ತರಬೇತಿ ಪಡೆಯಬೇಕು ಎಂದರು.
ಇಂದಿನ ದಿನಗಳಲ್ಲಿ ಉದ್ಯೋಗಾವಕಾಶದ ಕೊರತೆ ಇಲ್ಲ. ಬದಲಾಗಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹಾಗೂ ಉದ್ದಿಮೆಗಳಿಗೆ ಪೂರಕವಾದ ವಿದ್ಯಾಭ್ಯಾಸದ ಕೊರತೆ ಕಾಡುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಅಗತ್ಯ ತರಬೇತಿ ಪಡೆದುಕೊಂಡರೆ ಉದ್ಯೋಗ ಸಿಗುತ್ತದೆ ಎಂದು ಹೇಳಿದರು. ಜಿಲ್ಲೆಗೆ 80ಕ್ಕೂ ಹೆಚ್ಚು ಕಂಪನಿಯ ವಿವಿಧ ಉದ್ಯೋಗಿಗಳು ಭಾಗವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ 3000ಕ್ಕೂ ಹೆಚ್ಚು ಯುವ ಜನರಿಗೆ ಅಪ್ರಂಟಿಸ್‌ಶಿಪ್ ತರಬೇತಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಪಂ ಸಿಇಒ ಶಿಲ್ಪಾ ಶರ್ಮಾ ಮಾತನಾಡಿ, ವಿದ್ಯಾರ್ಥಿ ಸಮೂಹವು ಶಿಕ್ಷಣದ ಜೊತೆ-ಜೊತೆಗೆ ಕೌಶಲ ತರಬೇತಿ ಪಡೆದು ತಮ್ಮ ಉನ್ನತ ಮಟ್ಟದ ಗುರಿಯನ್ನು ಸಾ ಧಿಸಬೇಕೆಂದು ಸಲಹೆ ನೀಡಿದರು. ಕೈಗಾರಿಕೋದ್ಯಮಗಳಿಗೆ ಬ್ಯಾಂಕ್ ಗಳು ಸಾಲ ಸೌಲಭ್ಯ ನೀಡುತ್ತಿವೆ. ಅಪ್ರಂಟಿಶಿಪ್ ಕಾಯ್ದೆ-1961ರ ಪ್ರಕಾರ ನಾಲ್ಕು ಮಂದಿಗಿತಲೂ ಹೆಚ್ಚು ಉದ್ಯೋಗಿಗಳಿರುವ ಕಾರ್ಖಾನೆಗಳು ಅಪ್ರಂಟಿಸ್ ತರಬೇತಿ ನೀಡಲು ಅರ್ಹತೆ ಪಡೆದಿವೆ. 8 ಮಂದಿಗಿಂತಲೂ ಹೆಚ್ಚು ಕೆಲಸ ಮಾಡುವ ಕೈಗಾರಿಕಾ ಸಂಸ್ಥೆಗಳು ಕಡ್ಡಾಯವಾಗಿ ಅಪ್ರಂಟಿಸ್ ತರಬೇತಿ ನೀಡಬೇಕಿದೆ ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ. ಅದರಂತೆ ಜಿಲ್ಲೆಯ ಕೈಗಾರಿಕಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅಪ್ರಂಟಿಸ್ ತರಬೇತಿ ನೀಡಬೇಕು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್ ಅವರು ಜಿಲ್ಲೆಯಲ್ಲಿ ವೃತ್ತಿ ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಿದ್ದಾರೆ ಎಂದರು.
ಅಪರ ಜಿಲ್ಲಾ ಧಿಕಾರಿ ಪ್ರಕಾಶ್ ಜಿ.ರಜಪೂತ್, ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ, ಕಲಬುರಗಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ ಸಡ್ಡು, ಎಸ್‌ಡಿಜಿಸಿಸಿ, ಯುಎನ್‌ಡಿಪಿ ಯೋಜನಾ ಮುಖ್ಯಸ್ಥ ಡಾ| ಮುಕುಂದರಾಜ, ರೈಸ್ ಮಿಲ್ ಅಸೋಸಿಯೇಶನ್ ಜಿಲ್ಲಾ ಗೌರವಧ್ಯಕ್ಷ ಮೌಲಾಲಿ ಅನಪೂರ, ಕಲಿಕಾ ಟಾಟಾ ಟ್ರಸ್ಟ್ ಸಹಾಯಕ ಕಾರ್ಯಕ್ರಮ ಅಧಿಕಾರಿ ಸಾಯಿಬಾಬಾ, ಜಿಲ್ಲಾ ಕೌಶಲಾಭಿವೃದ್ಧಿ ಅಧಿ ಕಾರಿ ರೇಖಾ ಎನ್. ಮ್ಯಾಗೇರಿ, ಜಿಲ್ಲಾ ಕಾರ್ಮಿಕ ಅಧಿ ಕಾರಿ ಶ್ವೇತಾ, ಜಿಲ್ಲಾ ಕೌಶಲ ಮಿಷನ್ ಅಭಿಯಾನ ವ್ಯವಸ್ಥಾಪಕ ವಿಜಯ ಕುಮಾರ್ ಪಾಟೀಲ್ ಇದ್ದರು.