ದಾವಣಗೆರೆ: ಸಮಾಜದಲ್ಲಿನ ಜಾತಿ, ಧರ್ಮ, ಮತ-ಪಂಥ ಭೇದಗಳ ಗೋಡೆ ಒಡೆಯುವ ಕಾವ್ಯಗಳನ್ನು ಇಂದಿನ ಯುವ ಪೀಳಿಗೆಯ ಮಕ್ಕಳು ರಚಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ ಕುರ್ಕಿ ಹೇಳಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಮಕ್ಕಳ ಲೋಕದ 9ನೇ ವಾರ್ಷಿಕೋತ್ಸವ ಹಾಗೂ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಾಹಿತ್ಯ ಎಂಬುದು ಸದ್ಗುಣದ ಬೀಜ ಬಿತ್ತುವ, ಸಾಮಾಜಿಕ ಸಂವೇದನೆ, ಭಾವೈಕ್ಯತೆ ಬಿಂಬಿಸುವಂತಿರಬೇಕು. ಅಂತಹ ಸಾಹಿತ್ಯ ಕೃತಿ, ಕಾವ್ಯಗಳು ನಾಡಿನ ಭವಿಷ್ಯ ನಿರ್ಮಾತೃಗಳಾದ ಇಂದಿನ ಮಕ್ಕಳಿಂದ ಹೊರಹೊಮ್ಮಬೇಕು ಎಂದರು.
ಇಂದಿನ ಜಗತ್ತು ಬರೀ ಕಟ್ಟಡ ನಿರ್ಮಾಣ, ಸಾಮ್ರಾಜ್ಯ ವಿಸ್ತರಣೆ ಬಗ್ಗೆಯೇ ಚಿಂತಿಸುತ್ತಿದೆ. ಪ್ರಜ್ಞಾವಂತರನ್ನು ಭೌತಿಕ ಸಂಪತ್ತಿನ ಒಡೆಯರನ್ನಾಗಿಸಿ ಪ್ರಜ್ಞಾರಹಿತ ಬುದ್ಧಿವಂತರನ್ನಾಗಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ಸಂವೇದನಾ-ಸೃಜನ ಶೀಲತೆ, ವ್ಯಕ್ತಿತ್ವ ವಿಕಸನಗೊಳಿಸುವ ಶಕ್ತಿ ಸಾಹಿತ್ಯಕ್ಕಿದೆ. ಮನುಷ್ಯನ ಮನಸ್ಸನ್ನು ಉಲ್ಲಾಸ ಭರಿತವಾಗಿಡುವ ಶಕ್ತಿ ಕನ್ನಡದ ಕಾವ್ಯಗಳಿಗಿದೆ. ಹಾಗಾಗಿ ಖಡ್ಗದಂತಹ ಲೇಖನಿಯಿಂದ ಸಾಮಾಜಿಕ ಅನಿಷ್ಟ, ಪಿಡುಗುಗಳು, ಅಜ್ಞಾನದ ಅಂಧಕಾರ ದೂರ ಮಾಡುವಂತಹ
ಸೃಜನಶೀಲ ಸಂವೇದನೆಯುಳ್ಳ ಕಾವ್ಯಗಳು ಸಮಾಜದಲ್ಲಿ ಸೃಷ್ಟಿ ಆಗಬೇಕು ಎಂದರು.
ತರಳಬಾಳು ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಜೆ. ಜೀವಿತಾಗೆ, ಪ್ರತಿಭಾ ಸಿಂಧುಗೆ ರಜತ ಪದಕ, ಈಶ್ವರಮ್ಮ ಪ್ರೌಢಶಾಲೆಯ ವಿದ್ಯಾರ್ಥಿ ವರುಣ್‌ಗೆ ಸಂಗೀತ ಶರಧಿ ಪ್ರಶಸ್ತಿ ಹಾಗೂ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ಎಸ್. ಶಿವಣ್ಣ ಮತ್ತು ಜಸ್ಟಿನ್ ಡಿಸೋಜಾ ಅವರಿಗೆ ಗುರುವಂದನೆ-ಶಿಕ್ಷಣ ಶಿರೋಮಣಿ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಮಕ್ಕಳಿಂದ ಕವಿಗೋಷ್ಠಿ ನಡೆಯಿತು.
ಕಸಾಪ ತಾಲೂಕು ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕವಿ ಎಸ್. ಓಂಕಾರಯ್ಯ ತವನಿಧಿ, ಎ.ಎಚ್. ಶಿವಮೂರ್ತಿಸ್ವಾಮಿ, ಮಕ್ಕಳ ಲೋಕದ ಸಂಸ್ಥಾಪಕ ಕೆ.ಎನ್. ಸ್ವಾಮಿ, ಶಿವಯೋಗಿ ಹಿರೇಮಠ, ವೀರಭದ್ರಪ್ಪ ತೆಲಗಿ, ಶ್ರೀಮತಿ ಅಡಿಗ, ಟಿ.ರಾಮಯ್ಯ, ಅನುಷಾ, ಕಾರ್ತಿಕ್
ಕುಮಾರ್, ವೀಣಾ, ರುದ್ರಾಕ್ಷಿ ಪುಟ್ಟಾನಾಯ್ಕ ಮತ್ತಿತರಿದ್ದರು.