ಬೆಂಗಳೂರು: ಖಾಲಿ ನಿವೇಶನ ಮಾಲೀಕರೇ ಆಗಾಗ್ಗೆ ನಿಮ್ಮ ನಿವೇಶನಗಳ ಬಳಿ ಹೋಗಿ, ಜತೆಗೆ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ. ಇಲ್ಲವಾದರೆ ನಕಲಿ ದಾಖಲೆ ಸೃಷ್ಟಿಸಿ ನಿಮ್ಮ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡುವ ಜಾಲಗಳು ನಗರದಲ್ಲಿ ಸಕ್ರಿಯವಾಗಿವೆ.
ನಕಲಿ ದಾಖಲೆ ಸೃಷ್ಟಿಸಿ ಖಾಲಿ ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಮಹಿಳೆ ಸೇರಿ ಐವರು ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದಾಸರಹಳ್ಳಿ ಅಗ್ರಹಾರ ನಿವಾಸಿ ರೇಣುಗೋಪಾಲ್ (49), ಗೌರಮ್ಮ (48), ಶಂಕರ್(44), ರಾಜಾಜಿನಗರ ನಿವಾಸಿ ಎಂ.ಪ್ರಕಾಶ್(50) ಮತ್ತು ವಿದ್ಯಾರಣ್ಯಪುರ ನಿವಾಸಿ ಆರ್.ಶಾಂತರಾಜು (44) ಬಂಧಿತರು. ಆರೋಪಿಗಳಿಂದ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪತ್ರಗಳಿಗೆ ನೋಂದಾಯಿತ ಕಾಗದ ಪತ್ರಗಳ ನಕಲಿ ಪ್ರತಿಗಳು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ರೇಣುಗೋಪಾಲ್-ವೇಣುಗೋಪಾಲ್, ಗೌರಮ್ಮ -ಜಯಲಕ್ಷ್ಮೀ, ಶಂಕರ್- ನಾಗರಾಜ್ ಎಂದು ಹೆಸರು ಬದಲಿಸಿಕೊಂಡು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪ್ರಕಾಶ್ ಆಟೋ ಕನ್ಸಲ್‌ಟೆಂಟ್ ಕೆಲಸ ಮಾಡಿಕೊಂಡಿದ್ದಾನೆ. ಈ ವೇಳೆ ಪರಿಚಯವಾದ ರೇಣುಗೋಪಾಲ್ ಮತ್ತು ಶಾಂತರಾಜು ಜತೆ ಸೇರಿ ಅಕ್ರಮ ವ್ಯವಹಾರ ನಡೆಸಿದ್ದಾರೆ.
ಯಲಹಂಕದ ಚಿಕ್ಕಬೆಟ್ಟ ಹಳ್ಳಿ ಗ್ರಾಮದ ಶ್ರೀಸಾಯಿ ಲೇಔಟ್‌ನಲ್ಲಿನ ಖಾಲಿ ನಿವೇಶನವು 2015ನೇ ಸಾಲಿನಲ್ಲಿ ಡಾ ಎನ್.ಗಿರಿ ಮತ್ತು ಅವರ ಪತ್ನಿಯಿಂದ ಬಿ.ಎಸ್.ಕಾರ್ತಿಕ್ ಎಂಬುವವರ ಹೆಸರಿಗೆ ಕ್ರಯ ಪತ್ರವಾಗಿತ್ತು. ಆದರೆ, ಆರೋಪಿ ಪ್ರಕಾಶ್, ರೇಣುಗೋಪಾಲ್, ಶಾಂತರಾಜು, 2016ರಲ್ಲಿ ಜಯಲಕ್ಷ್ಮೀ ಮತ್ತು ನಾಗರಾಜ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ವೇಣುಗೋಪಾಲ್ ಹೆಸರಿಗೆ ದಾನಪತ್ರ ಮಾಡಿದ್ದರು. ಈತ 2019ರಲ್ಲಿ ಭಾಸ್ಕರ್‌ಗೆ ಕ್ರಯ ಪತ್ರ ಮಾಡಿಕೊಟ್ಟಿದ್ದ. ಭಾಸ್ಕರ್, 2020ರಲ್ಲಿ ಮುನಿಲಕ್ಷ್ಮಮ್ಮ ಮತ್ತು ಕುಶಾಲ್ ಎಂಬುವವರಿಗೆ ಮಾರಾಟ ಮಾಡಿದ್ದರು. ಈ ವಿಚಾರ ತಿಳಿದ ಕಾರ್ತಿಕ್ ಸಂಬಂಧಿ ಪೊಲೀಸರಿಗೆ ದೂರು ನೀಡಿದ್ದರು.
ಖಾಲಿ ನಿವೇಶನಗಳ ಶೋಧಿಸುತ್ತಿದ್ದರು
ಆರೋಪಿಗಳಾದ ಶಾಂತರಾಜು ಮತ್ತು ಪ್ರಕಾಶ್ ಖಾಲಿ ನಿವೇಶನಗಳ ಬಗ್ಗೆ ನಗರದಲ್ಲಿ ಶೋಧಿಸುತ್ತಿದ್ದು, ಸಮೀಪದ ನಿವಾಸಿಗಳ ಬಳಿ ನಿವೇಶನ ಮಾಲೀಕರು ಎಷ್ಟು ವರ್ಷಗಳಿಂದ ಸ್ಥಳಕ್ಕೆ ಬರುತ್ತಿಲ್ಲ ಎಂಬ ಮಾಹಿತಿ ಪಡೆದುಕೊಳ್ಳುತ್ತಿದ್ದರು. ನಂತರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪತ್ರಗಳನ್ನು ಪಡೆದುಕೊಂಡು, ಮಾಲೀಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಈರೋಪಿಗಳ ಪೈಕಿ ರೇಣುಗೋಪಾಲ್ ವಿರುದ್ಧ ಈಗಾಗಲೇ ಕೆಂಗೇರಿ ವಿರುದ್ಧ ಇದೇ ಮಾದರಿಯಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.