ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಮಾನದಂಡಗಳಿಲ್ಲದೆ 550ಕ್ಕೂ ಹೆಚ್ಚು ಪುರಸ್ಕೃತರನ್ನು ಆಯ್ಕೆ ಮಾಡಿದ ಬಿಬಿಎಂಪಿ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಕ್ತವಾದ ಟೀಕೆಗಳನ್ನು ಗಂಭಿರವಾಗಿ ಪರಿಗಣಿಸಿರುವ ಪಾಲಿಕೆಯ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಮುಂದಿನ ವರ್ಷ ಕೆಂಪೇಗೌಡ ಪ್ರಶಸ್ತಿ ನೀಡುವ ವೇಳೆ ಸಾಧಕರನ್ನು ಗುರುತಿಸಲು ಮಾನದಂಡ ಹಾಗೂ ಸಮಿತಿಯನ್ನು ರಚಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೆಂಪೇಗೌಡ ಪ್ರಶಸ್ತಿಗೆ ಮೊದಲು 275 ಮಂದಿಯನ್ನು ಗುರುತಿಸಲಾಗಿತ್ತು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭದ ದಿನವೇ ಪುರಸ್ಕೃತರ ಪಟ್ಟಿಗೆ 200ಕ್ಕೂ ಹೆಚ್ಚು ಹೆಸರು ಸೇರ್ಪಡೆಗೊಂಡ ಪರಿಣಾಮ ಪ್ರಶಸ್ತಿ ಪಡೆಯಲು ನೂಕು-ನುಗ್ಗಲು ಉಂಟಾಗಿ, ಪುರಸ್ಕೃತರು ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ ವ್ಯಕ್ತವಾಗಿತ್ತು.
ಪತ್ರದ ಸಾರಾಂಶ ಹೀಗಿದೆ: ಪಾಲಿಕೆಯಿಂದ ಕೆಂಪೇಗೌಡ ಜಯಂತಿ ಆಚರಣೆ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪುರಸ್ಕೃತರ ಸಂಖ್ಯೆ ಮಿತಿ ಇಲ್ಲದಂತಾಗಿದ್ದು, ಪಾಲಿಕೆ ಹಾಗೂ ಪ್ರಶಸ್ತಿಯ ಗೌರವಕ್ಕೆ ಕಳಂಕ ಬಂದಿದೆ. ಹೀಗಾಗಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಮಾನದಂಡ ಹಾಗೂ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿ ರಚಿಸುವಂತೆ ಶಿವರಾಜು ಕೋರಿದ್ದಾರೆ.
ಕೆಂಪೇಗೌಡ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಮಾರ್ಗಸೂಚಿ ಮತ್ತು ತಜ್ಞರ ಸಮಿತಿ ರಚಿಸುವ ಮನವಿಗೆ ಡಿಸಿಎಂ ಸಹಮತ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಪ್ರಶಸ್ತಿಗಳ ಸಂಖ್ಯೆಯನ್ನು 100ಕ್ಕೆ ಸೀಮಿತಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ.
-ಎಂ.ಶಿವರಾಜು, ಪಾಲಿಕೆ ಆಡಳಿತ ಪಕ್ಷ ನಾಯಕ
ಪ್ರಶಸ್ತಿ ಮೊತ್ತಕ್ಕಾಗಿ ಪುರಸ್ಕೃತರ ದುಂಬಾಲು: ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ಮರುದಿನದಿಂದಲೇ ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ನೀಡುವಂತೆ ಪಾಲಿಕೆ ಅಧಿಕಾರಿಗಳ ದುಂಬಾಲು ಬಿದ್ದಿದ್ದ ಪ್ರಶಸ್ತಿ ಪುರಸ್ಕೃತರು ಈಗ, ಪ್ರಶಸ್ತಿ ಮೊತ್ತ ನೀಡುವಂತೆ ಅಧಿಕಾರಿಗಳ ಹಿಂದೆ ಬಿದ್ದಿದ್ದಾರೆ.
ನಿತ್ಯ ಪಾಲಿಕೆಗೆ ಭೇಟಿ ನೀಡುತ್ತಿರುವ ಪ್ರಶಸ್ತಿ ಪುರಸ್ಕೃತರು, ಪ್ರಶಸ್ತಿ ಮೊತ್ತವೆಲ್ಲಿ ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಈ ಬಾರಿ ಪ್ರಶಸ್ತಿ ಮೊತ್ತವನ್ನು ಪ್ರಶಸ್ತಿ ಪುರಸ್ಕೃತರೇ ಪಡೆಯವಬೇಕೆಂಬ ನಿಯಮ ಮಾಡಿರುವುದರಿಂದ ನಿತ್ಯ ಹತ್ತಾರು ಪುರಸ್ಕೃತರು ಬಂದು ಹೋಗುತ್ತಿದ್ದಾರೆ.