Advertisement

ಕೋವಿಡ್ ಲಸಿಕೆ ವಿತರಣೆಗೆ ಸಮಿತಿ ರಚಿಸಿ: ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

11:59 PM Oct 30, 2020 | mahesh |

ಹೊಸದಿಲ್ಲಿ: ಕೋವಿಡ್ ಲಸಿಕೆ ಅಂತಿಮ ಪ್ರಯೋಗ ಹಂತದಲ್ಲಿರುವಂತೆಯೇ ಅದರ ವಿತರಣೆಗೂ ಕೇಂದ್ರ ಸರಕಾರ ಭರದ ಸಿದ್ಧತೆ ಮಾಡುತ್ತಿದೆ. ವಿತರಣೆ ಸಂಬಂಧ ಸಮನ್ವಯ ಸಮಿತಿಗಳನ್ನು ರಚಿಸುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

Advertisement

ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಪರಿಶೀಲನ ಸಮಿತಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಆರೋಗ್ಯ ಇಲಾಖೆ ಕಾರ್ಯದರ್ಶಿಯ ನೇತೃತ್ವದಲ್ಲಿ ರಾಜ್ಯ ಕಾರ್ಯಪಡೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕಾರ್ಯಪಡೆಗಳನ್ನು ರಚಿಸುವಂತೆ ಸೂಚಿಸಿದೆ. ಈ ಸಂಬಂಧ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಲಾಗಿದೆ.

ಇದರ ಜತೆಗೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಬೇಕು. ಲಸಿಕೆಯ ಬಗ್ಗೆ ತಪ್ಪು ಸಂದೇಶಗಳು ಹರಡುವುದಕ್ಕೆ ಬಿಡಬಾರದು. ಒಂದು ವೇಳೆ ವದಂತಿಗಳು ಹರಡಿದರೆ ಜನರು ಲಸಿಕೆಯಿಂದ ದೂರ ಉಳಿಯಬಹುದು. ಹಾಗಾಗ ದಂತೆ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.

ಭಾರತದಂತಹ ವಿಶಾಲ ದೇಶದಲ್ಲಿ ಎಲ್ಲರಿಗೂ ಲಸಿಕೆ ಒದಗಿಸುವುದು ಸುಲಭವಲ್ಲ. ಲಸಿಕೆ ಲಭ್ಯವಾದ ಬಳಿಕ ಎಲ್ಲರಿಗೂ ವಿತರಣೆ ಮಾಡಲು ವರ್ಷವೇ ಹಿಡಿಯಬಹುದು. ಹೀಗಾಗಿ ಇದನ್ನು ಸಮರ್ಪಕವಾಗಿ ನಿರ್ವಹಿಸುವುದಕ್ಕೆ ಸಮನ್ವಯ ಸಮಿತಿಗಳನ್ನು ರಚಿಸಬೇಕು. ವಿತರಣೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಮತ್ತು ಮೇಲುಸ್ತುವಾರಿ ವಹಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಬೇಕು ಎಂದವರು ಹೇಳಿದ್ದಾರೆ.

ಹಂಚಿಕೆ ಹೇಗೆ?
ಕೊರೊನಾ ಲಸಿಕೆ ಸಿಕ್ಕಿದ ಬಳಿಕ ಎಲ್ಲರಿಗೂ ತಲುಪಿಸುವುದಕ್ಕಾಗಿ ಸಿದ್ಧತೆಗಳು ಆರಂಭವಾಗಿವೆ. ಇಡೀ ವಿತರಣ ವ್ಯವಸ್ಥೆಯಲ್ಲಿ ಗಮನಾರ್ಹ ಪಾತ್ರ ವಹಿಸುವುದು ಶೀತಲ ಸಂಗ್ರಹಾಗಾರಗಳು. ಇಲ್ಲಿಂದಲೇ ಎಲ್ಲರಿಗೂ ಲಸಿಕೆ ತಲುಪಬೇಕಿದೆ.

Advertisement

2 ಹಂತಗಳಲ್ಲಿ ಪೂರೈಕೆ
ಹಂತ 1
– ಲಸಿಕೆ ಉತ್ಪಾದಕರು
– ಕಂಪೆನಿಗಳ ಪ್ರಯೋಗಾಲಯಗಳು
- ವಿತರಕರು
- ಮಾರಾಟಗಾರರು
- ಆಸ್ಪತ್ರೆಗಳು, ಕ್ಲಿನಿಕ್‌ಗಳು
- ಫ‌ಲಾನುಭವಿಗಳು

ಹಂತ 2
– ಸ್ಥಳೀಯ ಏರ್‌ಪೋರ್ಟ್‌ಗಳಿಗೆ ರವಾನೆ
– ಸಾರ್ವಜನಿಕ ಆರೋಗ್ಯ ಲಸಿಕೆ ಪೂರೈಕೆ ವ್ಯವಸ್ಥೆ ಬಳಕೆ
– ರಾಜ್ಯ, ಪ್ರಾದೇಶಿಕ, ವಿಭಾಗೀಯ ಮೆಡಿಕಲ್‌ ಕೇಂದ್ರಗಳು
– ಜಿಲ್ಲಾ ಕೇಂದ್ರಗಳು
– ಸಮುದಾಯ ಆರೋಗ್ಯ ಕೇಂದ್ರಗಳು/ ಪ್ರಾಥಮಿಕ ಆರೋಗ್ಯ ಕೇಂದ್ರಗಳು
– ಫ‌ಲಾನುಭವಿಗಳು

ಕೊರೊನಾ ಲಸಿಕೆ ವಿತರಣೆ ಸಂಬಂಧ ನಾನಾ ಸಮಿತಿಗಳನ್ನು ರಚಿಸುವಂತೆ ಕೇಂದ್ರ ಸರಕಾರದಿಂದ ಸೂಚನೆ ಬಂದಿದ್ದು , ಈ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಟಿ.ಎಂ. ವಿಜಯ ಭಾಸ್ಕರ್‌, ಮುಖ್ಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next