ಚಿಕ್ಕಬಳ್ಳಾಪುರ: ವರದಕ್ಷಿಣೆಯು ಒಂದು ಸಾಮಾಜಿಕ ಪಿಡುಗಾಗಿದ್ದು, ಪ್ರಸ್ತುತ ಕೆಲವರು ಈ ಪಿಡುಗಿಗೆ ಬಲಿಪಶು ಆಗುತ್ತಿದ್ದಾರೆ. ಈ ಪಿಡುಗನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿಯ ಎಚ್.ಎನ್. ನರಸಿಂಹಯ್ಯ ಸಭಾಂಗಣದಲ್ಲಿ ನಡೆದ ವರದಕ್ಷಿಣೆ ನಿಷೇಧ ಕಾಯ್ದೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳಲ್ಲಿ ಆಪ್ತ ಸಮಾಲೋಚನೆ, ವೈದ್ಯಕೀಯ ಚಿಕಿತ್ಸೆ, ಕಾನೂನು ಸಲಹೆ ಹಾಗೂ ರಕ್ಷಣಾ ನೆರವನ್ನು ನೀಡಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಆದ್ದರಿಂದ ಈ ಕೇಂದ್ರಗಳು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಿ, ನೊಂದವರಿಗೆ ನ್ಯಾಯ ಒದಗಿಸಬೇಕು. ಅಂತವರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡುವ ಮೂಲಕ ಅವರನ್ನು ಆರ್ಥಿಕ ಸಬಲರನ್ನಾಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಸ್ವಾಧಾರ ಕೇಂದ್ರವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಸಾಂತ್ವನ ಕೇಂದ್ರ ಪರಿಶೀಲಿಸಿ: ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿತ ಮಹಿಳೆಯರು ಸಾಂತ್ವನ ಕೇಂದ್ರಕ್ಕೆ ಆಶ್ರಯ ಕೇಳಿ ಬಂದರೆ, ಸಂಬಂಧಿಸಿದವರನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಜಿಲ್ಲಾ ಸ್ವಾಧಾರ ಕೇಂದ್ರಕ್ಕೆ ದಾಖಲಿಸಿ, ಆಶ್ರಯ ಕಲ್ಪಿಸಲು ಸಾಂತ್ವನ ಕೇಂದ್ರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಾಂತ್ವನ ಕೇಂದ್ರಗಳಿಗೆ ವಾರಕ್ಕೊಮ್ಮೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ: ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ಆಪ್ತ ಸಮಾಲೋಚನೆಯ ಹಂತದಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಳ್ಳಬೇಕು. ವರದಕ್ಷಿಣೆ ನೀಡುವುದು, ಪಡೆದುಕೊಳ್ಳುವುದು ಕಾನೂನು ಬಾಹಿರವಾಗಿದೆ. ಅಂತಹ ಘಟನೆಗಳು ಕಂಡು ಬಂದಲ್ಲಿ ಹಾಗೂ ಜಿಲ್ಲೆಯ ಯಾವುದೇ ಭಾಗದಲ್ಲಿ ಬಾಲ್ಯ ವಿವಾಹ ನಡೆಯುವುದು, ಪ್ರೇರಣೆ ನೀಡುವುದು ಕಂಡು ಬಂದಲ್ಲಿ ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ತುರ್ತು ಮಾಹಿತಿ ನೀಡಬೇಕು. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ವಹಿಸಲಾಗುವುದು. ಇಂತಹ ಘಟನೆಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ 1098 ಹಾಗೂ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ, ಮಾಹಿತಿ ನೀಡುವ ಮೂಲಕ ಸಾರ್ವ ಜನಿಕರು ಸಹ ಜಿಲ್ಲಾಡಳಿತದೊಂದಿಗೆ ಕೈಜೋಡಿಸ ಬೇಕು. ಯಾವುದೇ ವ್ಯಕ್ತಿ ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳಗಾಗಬಾರದು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಬಾಲ್ಯ ವಿವಾಹ ಹಾಗೂ ವರದಕ್ಷಿಣೆ ನಿಷೇಧ ಕುರಿತು ಹೆಚ್ಚು ಅರಿವು ಮೂಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿ ಹೇಮಾವತಿ, ಸಹಾಯಕ ಯೋಜನಾಧಿಕಾರಿ ಡಾ.ಮೈತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಅಶ್ವತ್ಥಮ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಮತ್ತು ಸಾಂತ್ವನ ಕೇಂದ್ರಗಳ ಮುಖ್ಯಸ್ಥರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ರಿಗೆ ಸಾಂತ್ವನ ಕೇಂದ್ರಗಳಲ್ಲಿ ಆಪ್ತ ಸಮಾಲೋಚನೆ, ವೈದ್ಯಕೀಯ ಚಿಕಿತ್ಸೆ, ಕಾನೂನು ಸಲಹೆ ಹಾಗೂ ರಕ್ಷಣಾ ನೆರ ವನ್ನು ನೀಡಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸ ಲಾಗುತ್ತಿದೆ. ಆದ್ದರಿಂದ ಈ ಕೇಂದ್ರಗಳು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಿ, ನೊಂದವರಿಗೆ ನ್ಯಾಯ ಒದಗಿಸಬೇಕು.
-ಶಿವಕುಮಾರ್, ಜಿಪಂ ಉಪ ಕಾರ್ಯದರ್ಶಿ