Advertisement

ಭಾರತದಲ್ಲೇ ಸಂಶೋಧನೆಗೆ ಅವಕಾಶ ಸೃಷ್ಟಿಸಿ: ರಾಷ್ಟ್ರಪತಿ ಕರೆ

03:45 AM Jul 06, 2017 | Team Udayavani |

ಬೆಂಗಳೂರು : ಪ್ರತಿಭಾವಂತರು ಮೂಲ ವಿಜ್ಞಾನ ಹಾಗೂ ಇತರೆ ವಿಷಯಗಳ ಮೂಲಭೂತ ಸಂಶೋಧನೆಯನ್ನು ವಿದೇಶಗಳ ಬದಲು ಭಾರತದಲ್ಲೇ ಕೈಗೊಳ್ಳಲು ಅಗತ್ಯವಾದ ವಾತಾವರಣವನ್ನು ಸರ್ಕಾರದ ನೀತಿ ನಿರೂಪಕರು ಸೃಷ್ಟಿಸಬೇಕು ಎಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕರೆ ನೀಡಿದರು.

Advertisement

ಬುಧವಾರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವ ಭಾಷಣ ಮಾಡಿದ ಅವರು, ಭಾರತೀಯ ಪ್ರತಿಭಾವಂತರು ವಿದೇಶದಲ್ಲಿ ಸಂಶೋಧನೆ ಮಾಡಿ ಅಲ್ಲಿಯೇ ಅಲ್ಲಿಯೇ ಪ್ರಸಿದ್ಧರಾಗಿ ನೋಬೆಲ್‌ ನಂತಹ ಪ್ರತಿಷ್ಟಿತ ಪಾರಿತೋಷಕ ಪಡೆಯುತ್ತಾರೆ ಇದು ಭಾರತದ ಜನಪ್ರಿಯತೆಗೆ ಅಪಾಯಕಾರಿ ಎಂದು ರಾಷ್ಟ್ರಪತಿಗಳು ಅಭಿಪ್ರಾಯಪಟ್ಟರು.

ಪ್ರತಿಭಾವಂತರು ದೇಶದ ಒಳಗೆ ಸಂಶೋಧನೆ ಮಾಡಲು ಪೂರಕವಾಗುವ ವಾತಾವರಣವನ್ನು ಸೃಷ್ಟಿಸಬೇಕು. ದೇಶದಲ್ಲಿ ಶೈಕ್ಷಣಿಕ ಹಾಗೂ ಕೈಗಾರಿಕಾ ವಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿéಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಭಾರತದ ಒಳಗೆ ಉಳಿಸಿಕೊಳ್ಳುವುದೇ ಇಂದಿನ ದೊಡ್ಡ ಸವಾಲಾಗಿದೆ ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಸಹ ಹೆಚ್ಚು ಕಾರ್ಯೋನ್ಮುಖರಾಗಬೇಕು ಎಂಬ ಸಲಹೆ ನೀಡಿದರು.

1930ರಲ್ಲಿ ಸರ್‌.ಸಿ.ವಿ. ರಾಮನ್‌ ಅವರು ನೋಬೆಲ್‌ ಪಾರಿತೋಷಕ ಪಡೆದಿದ್ದರು. ಸ್ವಾತಂತ್ರ್ಯನಂತರದ ನೋಬೆಲ್‌ ಪಾರಿತೋಷಕ ಪಡೆದ ಭಾರತಿಯರಾದ ಅಮಾರ್ತ್ಯಸೇನ್‌, ಸುಬ್ರಹ್ಮಣ್ಯನ್‌ ಚಂದ್ರಶೇಖರ್‌ ಮೊದಲಾದವರು ವಿದೇಶದಲ್ಲೇ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್‌ ಭಾರತದಲ್ಲಿ ಸಕಲ ಸೌಲಭ್ಯ ಇಲ್ಲದೇ ಇದ್ದರೂ, ಸಿ.ವಿ.ರಾಮನ್‌ ಅವರು ತಮ್ಮ ಬದ್ಧತೆ ಹಾಗೂ ಸಮರ್ಪಣಾ ಮನೋಭಾವದ ಮೂಲಕ ನೋಬೆಲ್‌ ಪಡೆದುಕೊಂಡರು. ಮೂಲಭೂತ ಸೌಕರ್ಯದ ಜತೆಗೆ ಬದ್ಧತೆಯ ಹಾಗೂ ಕಾರ್ಯನಿಷ್ಠೆ ಕೂಡ ಪ್ರಮುಖವಾಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಐಐಟಿ, ಐಐಎಸ್ಸಿಯಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ದೇಶ ವಿದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಬಹುತೇಕರು ವಿದೇಶದಲ್ಲೇ ನೆಲೆಸುತ್ತಾರೆ. ಅವರ ವೈಯಕ್ತಿಕ ಹಾಗೂ ಕೌಟುಂಬಿಕ ಬದುಕು ತುಂಬಾ ಚೆನ್ನಾಗಿರುತ್ತದೆ. ಹಾಗೆಯೇ ದೇಶಕ್ಕಾಗಿಯೂ ಏನಾದರೂ ಮಾಡುವಂತಾಗಬೇಕು ಎಂದು ಹೇಳಿದರು.

Advertisement

ಕಳೆದ ಐದು ವರ್ಷದಲ್ಲಿ ನೂರಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಇತ್ತೀಚಿನ ಕೆಲವು ವರ್ಷದಲ್ಲಿ ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಕರ್ಯವನ್ನು ಚೆನ್ನಾಗಿ ಒದಗಿಸುತ್ತಿವೆ. ದೇಶದಲ್ಲಿ 760 ವಿಶ್ವವಿದ್ಯಾಲಯಗಳು, ಸುಮಾರು 38,600 ಪದವಿ ಕಾಲೇಜುಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಮೂಲಭೂತ ಸೌಕರ್ಯದ ಜತೆಗೆ ಶಿಕ್ಷಣ ನೀಡುತ್ತಿದೆ. ಇದು ಉತ್ತಮ ವಿಚಾರವಾದರೂ, ಗುಣಮಟ್ಟದ ಶಿಕ್ಷಣದ ಬಗ್ಗೆಯೂ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂಬ ಸಲಹೆ ನೀಡಿದರು.

ಗುಣಮಟ್ಟದ ಶಿಕ್ಷಣ ನೀಡದೇ ಇದ್ದರೆ, ನಮ್ಮ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಕಷ್ಟವಾಗುತ್ತದೆ.ನಮ್ಮಲ್ಲಿ ಯುವ ಶಕ್ತಿ ಹೆಚ್ಚಾಗಿದೆ. 2020ರ ವೇಳೆಗೆ ದೇಶದ ಜನಸಂಖ್ಯೆಯ ಶೇ.50ರಷ್ಟು ಯುವಕರೇ ತುಂಬಿರುತ್ತಾರೆ. ಈ ವೇಳೆಗೆ ಜಾಗತಿಕವಾಗಿ ಯುಎಸ್‌ ಶೇ.46ರಷ್ಟು, ಯುರೋಪ್‌ ಶೇ.42ರಷ್ಟು, ಜಪಾನ್‌ ಶೇ.48ರಷ್ಟು ಹಾಗೂ ಭಾರತ ಶೇ.27ರಷ್ಟು ಯುವ ಶಕ್ತಿ ಹೊಂದಲಿದೆ. ಭಾರತದ ಯುವ ಶಕ್ತಿಯನ್ನು ದೇಶದ ಅಭಿವೃದ್ಧಿಯಲ್ಲಿ ಚೆನ್ನಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕಾರ್ಯಕ್ರಮ ಕೈಗೆತ್ತಿಕೊಳ್ಳದೇ ಇದ್ದರೇ, ದೊಡ್ಡ ಹೊಡೆತ ಉಂಟಾಗಲಿದೆ ಎಂದು ಎಚ್ಚರಿಸಿದರು.

ರಾಜ್ಯಪಾಲ ವಿ.ಆರ್‌.ವಾಲಾ ಮಾತನಾಡಿ, ದೇಶಕ್ಕೆ ಇಂದು ವಿಜ್ಞಾನದ ಅವಶ್ಯಕತೆ ಇದೆ. ರಾಷ್ಟ್ರಕ್ಕೆ ಬೇಕಾದ ಹೊಸ ಸಂಶೋಧನೆ ವಿಜ್ಞಾನದಿಂದ ಮಾತ್ರ ಸಾಧ್ಯ. ವಿಜ್ಞಾನ ಕ್ಷೇತ್ರಕ್ಕೆ ನಿರೀಕ್ಷೆಯಷ್ಟು ಆರ್ಥಿಕ ಅನುದಾನ ಸಿಗುತ್ತಿಲ್ಲ. ಉತ್ತರ ಕೋರಿಯ, ಇಸ್ರೇಲ್‌, ಜಪಾನ್‌, ರಷ್ಯಾ, ಅಮೆರಿಕ ಮೊದಲಾದ ದೇಶದ ವಿಜ್ಞಾನದ ಜತೆಗೆ ಭಾರತೀಯ ಪ್ರತಿಷ್ಠಿತ ವಿಜ್ಞಾನಿಗಳಿಂದ ಯುವ ವಿಜ್ಞಾನಿಗಳು ಪ್ರೇರಣೆ ಪಡೆದು ರಾಷ್ಟ್ರದ ಉನ್ನತಿಗಾಗಿ ಶ್ರಮಿಸಬೇಕು. ತಂತ್ರಜ್ಞಾನ ಮತ್ತು ವಿಜ್ಞಾನ ಒಟ್ಟೊಟ್ಟಿಗೆ ಸಾಗಬೇಕು. ಭಾರತದಲ್ಲಿ ಸಿದ್ಧಾಂತವೂ ಇದೆ. ತಂತ್ರಜ್ಞಾನವೂ ಇದೆ, ಅದನ್ನು ಚೆನ್ನಾಗಿ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರ ಜವಾಬ್ದಾರಿ ಸಾಕಷ್ಟು ಇರುತ್ತದೆ. ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳ ಬಾಂಧವ್ಯ ಚೆನ್ನಾಗಿ ಇಟ್ಟುಕೊಳ್ಳುವುದೇ ಸವಾಲಿನ ವಿಚಾರವಾಗಿದೆ. ಇಂದು ಜಾಗತಿಕ ಮತ್ತು ಸ್ಥಳೀಯ ಮಟ್ಟದಲ್ಲಿ ಅನೇಕ ಸಮಸ್ಯೆಗಳಿವೆ. ಹವಮಾನ ವೈಪರಿತ್ಯ, ಮಾರಣಾಂತಿಕ ರೋಗಗಳ ವಿರುದ್ಧ ಹೋರಾಟಕ್ಕೆ ಯುವ ಶಕ್ತಿ ಮುಂದಾಗಬೇಕು. ವಿಜ್ಞಾನದಿಂದಲೇ ಎಲ್ಲದಕ್ಕೂ ಉತ್ತರ ನೀಡಲು ಸಾಧ್ಯವಿಲ್ಲ. ಮಾನವೀಯತೆಯೂ ಅದರ ಜತೆ ಇರಬೇಕು ಹಾಗೂ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಐಐಎಸ್ಸಿಯಲ್ಲಿ ವಿವಿಧ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿಯನ್ನ ಸುಮಾರು 625 ವಿದ್ಯಾರ್ಥಿಗಳಿಗೆ ಹಾಗು 52 ಮಂದಿಗೆ ಪಿಎಚ್‌.ಡಿ ಪ್ರದಾನ ಮಾಡಲಾಯಿತು.

ಐಐಎಸ್ಸಿ ನಿರ್ದೇಶಕ ಅನುರಾಗ್‌ ಕುಮಾರ್‌, ರಿಜಿಸ್ಟ್ರಾರ್‌ ವಿ. ರಾಜರಾಮನ್‌, ಗವರ್ನಿಂಗ್‌ ಕೌನ್ಸಿಲ್‌ ಅಧ್ಯಕ್ಷ ಪಿ.ರಾಮರಾವ್‌, ವಿವಿಧ ವಿಭಾಗದ ಡೀನ್‌ಗಳಾದ ಎಂ.ಕೆ.ಸೂರಪ್ಪ, ಅಂಜಲಿ ಕರಂದ್ರೆ, ಹಿರಿಯ ವಿಜ್ಞಾನಿ ಪ್ರೊ. ಸಿ.ಎನ್‌.ಆರ್‌.ರಾವ್‌, ಬೆಂಗಳೂರು ಅಭಿವೃದ್ಧಿ ಸಚಿವ  ಕೆ.ಜೆ.ಜಾರ್ಜ್‌ ಮೊದಲಾವರು ಉಪಸ್ಥಿತರಿದ್ದರು.

ದೇಶದ ಪ್ರತಿಷ್ಠಿತ ಹಾಗೂ ದೇಶಕ್ಕೆ ಹೆಮ್ಮೆ ತಂದುಕೊಟ್ಟಿರುವ ಭಾರತೀಯ ವಿಜ್ಞಾನ ಸಂಸ್ಥೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಕೊನೆಯ ಭೇಟಿ ನೀಡುತ್ತಿರುವುದು ಅತ್ಯಂತ ತೃಪ್ತಿತಂದಿದೆ.
– ಪ್ರಣಬ್‌ ಮುಖರ್ಜಿ, ರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next