ಹೊಸದಿಲ್ಲಿ: ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ಗೋ ರಕ್ಷಣೆ ನೆಪದಲ್ಲಿ ಗುಂಪುಗಳು ನಡೆಸುತ್ತಿರುವ ದಾಂಧಲೆಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಇಂಥ ಕೃತ್ಯಗಳ ತಡೆಗೆ ವಿಶೇಷ ಟಾಸ್ಕ್ಫೋರ್ಸ್ ರಚಿಸಬೇಕು ಎಂದು ಹೇಳಿರುವ ಕೋರ್ಟ್, ಅದಕ್ಕಾಗಿ ಒಟ್ಟು ಏಳು ದಿನಗಳ ಕಾಲಾವಕಾಶ ನೀಡಿದೆ.
ಪ್ರತಿಯೊಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ಗೋ ರಕ್ಷಣೆ ನೆಪದಲ್ಲಿ ಕಾನೂನು ಭಂಗ ತಡೆವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವರದಿ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಆದೇಶಿಸಿದೆ.
ಗೋ ರಕ್ಷಕರೆಂಬ ಗುಂಪು ಕಾನೂನು ಕೈಗೆತ್ತಿಕೊಂಡರೆ ಕೇಂದ್ರ ಸರಕಾರ ರಾಜ್ಯಗಳಿಗೆ ನಿರ್ದೇಶ ನೀಡಲು ಸಾಧ್ಯವೇ ಎಂಬುದರ ಬಗ್ಗೆ ಲಿಖೀತವಾಗಿ ಪ್ರಮಾಣ ಪತ್ರ ಸಲ್ಲಿಸುವಂತೆಯೂ ಸೂಚಿಸಿದೆ. ಮಹಾತ್ಮಾ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ವಿವಿಧ ರಾಜ್ಯಗಳಲ್ಲಿ ಗೋ ರಕ್ಷಣೆ ನೆಪದಲ್ಲಿ ನಡೆಯುತ್ತಿರುವ ಗಲಭೆಗಳನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾ ಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಗೋ ರಕ್ಷಣೆ ನೆಪದಲ್ಲಿನ ಪ್ರಕರಣಗಳಿಗೆ ಕೇಂದ್ರದ ಬೆಂಬಲವಿಲ್ಲ. ಅಂಥ ಬೆಳವಣಿಗೆ ಉಂಟಾದಾಗ ಅದನ್ನು ರಾಜ್ಯ ಸರಕಾರಗಳೇ ನಿಭಾಯಿಸಬೇಕು ಎಂದು ಜುಲೈಯಲ್ಲಿ ಕೇಂದ್ರ ಸರಕಾರ ಸಲ್ಲಿಸಿದ್ದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ ಸಂವಿಧಾನದ 256ನೇ ವಿಧಿಯನ್ವಯ ರಾಜ್ಯಗಳಿಗೆ ಕಾನೂನು ಸುವ್ಯವಸ್ಥೆ ಪಾಲನೆ ಬಗ್ಗೆ ನಿರ್ದೇಶ ನೀಡಲು ಸಾಧ್ಯವಿಲ್ಲವೇ ಎಂಬ ಬಗ್ಗೆ ಲಿಖೀತ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿತು.
ತುಷಾರ್ ಗಾಂಧಿ ಪರ ವಾದಿಸಿದ ನ್ಯಾಯ ವಾದಿ ಇಂದಿರಾ ಜೈಸಿಂಗ್ ಕೇಂದ್ರದ ಹಿಂದಿನ ಹೇಳಿಕೆ ಪ್ರಸ್ತಾವ ಮಾಡಿದ್ದರು. ಮುಂದಿನ ವಿಚಾರಣೆ ಸೆ. 22ರಂದು ನಡೆಯಲಿದೆ.