ಗುಡಿಬಂಡೆ: ರಾಜ್ಯದಲ್ಲಿ 5 ವರ್ಷಗಳಿಂದ ಉರ್ದು ಅಕಾಡೆಮಿ ಸಮಿತಿ ನಿಷ್ಕ್ರಿಯವಾಗಿದ್ದು, ಕೂಡಲೇ ರಚನೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಉರ್ದು ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹಮದ್ ನಾಸೀರ್ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉರ್ದು ಅಕಾಡೆಮಿ ಸರ್ಕಾರದ ಒಂದು ಅಂಗವಾಗಿದೆ. ಹಲವು ವರ್ಷಗಳಿಂದ ಸಮಿತಿ ರಚನೆ ಆಗದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ರಾಜ್ಯದಲ್ಲಿ 4 ಸಾವಿರ ಉರ್ದು ಶಾಲೆಗಳಿದ್ದವು, ಇವುಗಳ ಪೈಕಿ 200ಕ್ಕೂ ಹೆಚ್ಚು ಈಗಾಗಲೇ ಮುಚ್ಚಿವೆ ಎಂದು ಹೇಳಿದರು. ಉರ್ದು ಅಕಾಡೆಮಿಯ ಅನುದಾನದಿಂದ ಈ ಹಿಂದೆ ಸಂಜೆ ತರಗತಿ ನಡೆಸಲಾಗುತ್ತಿತ್ತು.
ಇದರ ಜೊತೆಯಲ್ಲೇ ಉರ್ದು ಶಾಲೆಗೆ ಶಿಕ್ಷಕರನ್ನು ನೇಮಿಸಿ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿತ್ತು. ಆದರೆ, ಈಗ ಅಕಾಡೆಮಿ ನಿಷ್ಕ್ರಿಯವಾಗಿರುವುದರಿಂದ ಉರ್ದು ಭಾಷೆ ಕಣ್ಮರೆಯಾಗುವ ಸ್ಥಿತಿ ಬಂದು ತಲುಪಿದೆ ಎಂದು ವಿವರಿಸಿದರು.ಜೊತೆಗೆ ಮೂಲ ಸೌಕರ್ಯಗಳಿಲ್ಲದ ಸರ್ಕಾರಿ ಶಾಲೆ ಮುಚ್ಚುವುದಾಗಿ ಸರ್ಕಾರ ಹೇಳುತ್ತಿದೆ. ಮುಚ್ಚುವುದರ ಬದಲು ಸೌಲಭ್ಯ ಕಲ್ಪಿಸಿ, ಶಿಕ್ಷಕರ ನೇಮಿಸಿ, ಉರ್ದು ಅಕಾಡೆಮಿ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದರು. ಬಳಿಕ ಉರ್ದು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಮೊಹಮದ್ ಹಜ್ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಉರ್ದು ಅಕಾಡೆಮಿ ಸಮಿತಿ ಅಸ್ತಿತ್ವದಲ್ಲಿದ್ದಾಗ ಅನೇಕ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿತ್ತು.
ಪ್ರತಿಭಾ ಕಾರಂಜಿ, ಉರ್ದು ಕವಿಗಳಿಗೆ ಪ್ರೋತ್ಸಾಹ, ಹೀಗೆ ಹತ್ತು ಹಲವು ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೆ, ಉರ್ದು ಅಕಾಡೆಮಿ ತಟಸ್ಥವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳೂ ತಟಸ್ಥವಾಗಿವೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉರ್ದು ಸಾಹಿತ್ಯ ಪರಿಷತ್‌ನ ಫಯಾಜ್ ಅಹಮದ್, ಇಮ್ರಾನ್ ಪಾಷ ಹಾಜರಿದ್ದರು.