Advertisement

ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಜನಜಾಗೃತಿ ರೂಪಿಸಿ: ಮಹಾದೇವ

01:38 PM Apr 02, 2018 | Team Udayavani |

ಬೀದರ: ಚುನಾವಣೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇರುವ ಬಗ್ಗೆ ಜನತೆಗೆ ತಿಳಿಹೇಳುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಏಕಕಾಲಕ್ಕೆ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಅವರು ಸೆಕ್ಟರ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ಮತಗಟ್ಟೆಗಳ ಸ್ಥಿತಿಗತಿ ಸೇರಿದಂತೆ ಇನ್ನಿತರ ವಿಷಯವನ್ನೊಳಗೊಂಡು
ಸೆಕ್ಟರ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಈಗಾಗಲೇ ತರಬೇತಿ ಪಡೆದಿರುವ ಮತಗಟ್ಟೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಆರ್‌ಐಗಳೊಂದಿಗೆ ಸೇರಿ ಈ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಬೇಕು. ಈ ಜನಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರು, ಯುವಜನರು, ಸಾರ್ವಜನಿಕರನ್ನು ಹೆಚ್ಚು ಸಂಖ್ಯೆಯಲ್ಲಿ ಸೇರಿಸುವ ವ್ಯವಸ್ಥೆ ಮಾಡಬೇಕು ಎಂದರು.

ಈ ಕಾರ್ಯಕ್ರಮವು ಪ್ರತಿಹಳ್ಳಿಗಳಲ್ಲಿ ಆಗುವಂತೆ ನೋಡಿಕೊಳ್ಳಬೇಕು. ಇದುವರೆಗೆ ಹೆಸರು ಸೇರಿಸದೇ ಉಳಿದವರು ಇನ್ನಾದರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವಂತೆ ಅವರಿಗೆ ಪ್ರೋತ್ಸಾಹಿಸಬೇಕು. ಅಲ್ಲದೇ ಯಾವುದೇ ಆಮಿಷಕ್ಕೊಳಗಾಗದೇ ಮತದಾನ ಮಾಡಲು ಮುಂದಾಗುವಂತೆ ಅರಿವು ಮೂಡಿಸುವ ಕೆಲಸವಾಗಬೇಕು. ಸಾರ್ವಜನಿಕ ಸ್ಥಳವಾಗಲಿ, ಮನೆಯಂಗಳ ಇಲ್ಲವೇ ಚಾವಡಿಯಲ್ಲಾಗಲಿ ಜನರನ್ನು ಗುಂಪಾಗಿ ಸೇರಿಸಿ ನಾನು ತಪ್ಪದೇ ಮತದಾನ ಮಾಡುತ್ತೇನೆ ಎನ್ನುವ ಪ್ರತಿಜ್ಞೆ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್‌. ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾದ ಎಲ್ಲಾ ಮತಗಟ್ಟೆಗಳು ಸುಸ್ಥಿತಿಯಲ್ಲಿವೆಯೋ ಇಲ್ಲವೋ ಎಂಬುದರ ಬಗ್ಗೆ ಸೆಕ್ಟರ್‌ ಅಧಿಕಾರಿಗಳು ಪರಿಶೀಲಿಸಬೇಕು. ವಿದ್ಯುತ್‌ ಸೌಕರ್ಯ, ಗಾಳಿ ಬೆಳಕು, ಕುಡಿವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯವನ್ನು ಅಲ್ಲಿ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು. ಸೆಕ್ಟರ್‌ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಆ ಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದರು.

ಕೆಲವು ಮತಗಟ್ಟೆಗಳಲ್ಲಿ ಇದುವರೆಗೆ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಮತಗಟ್ಟೆಗಳಿಗೆ ರ್‍ಯಾಂಪ್‌ ವ್ಯವಸ್ಥೆ ಮಾಡಬೇಕಿದೆ ಎಂದು ಸೆಕ್ಟರ್‌ ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಕೂಡಲೇ ದುರಸ್ತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಚುನಾವಣೆ ತಹಶೀಲ್ದಾರ ಪಾವನಿ ಕುಲಕರ್ಣಿ ಉಪಸ್ಥಿತರಿದ್ದರು.

Advertisement

ನ್ಯಾಯಸಮ್ಮತ ಚುನಾವಣೆಗೆ ಅರಿವು ಮೂಡಿಸಲು ಕ್ರಮ
ಬೀದರ:
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಸೆಲ್ವಮಣಿ ಆರ್‌. ಅವರ ನೇತೃತ್ವದಲ್ಲಿ ಸ್ವೀಪ್‌ (ಸಿಸ್ಟೇಮೆಟಿಕ್‌ ವೋಟರ್ ಎಜ್ಯುಕೇಶನ್‌ ಆ್ಯಂಡ್‌ ಎಲೆಕ್ಟೋರಲ್‌ ಪಾರ್ಟಿಸಿಪೇಶನ್‌) ಸಮಿತಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಲಾಖಾವಾರು ಮತ್ತಷ್ಟು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಈಗಾಗಲೇ ಸ್ವೀಪ್‌ ಸಮಿತಿಯಿಂದ ಚುನಾವಣೆಯ ಬಗ್ಗೆ, ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಹಂತಗಳಲ್ಲಿ ಚವಟುವಟಿಕೆಗಳು ನಡೆಯುತ್ತಿವೆ ಎಂದು ಚುನಾವಣೆ ಮಾಸ್ಟರ್‌ ಟ್ರೇನರ್‌ ಗೌತಮ ಅರಳಿ ಸಭೆಗೆ ಮಾಹಿತಿ ನೀಡಿದರು. 

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಚುನಾವಣೆ ಸಾಕ್ಷರತಾ ತಂಡ (ಎಲೆಕ್ಟೋರಲ್‌ ಲಿಟರಸಿ ಕ್ಲಬ್‌)ಗಳ ಚಟುವಟಿಕೆಗಳನ್ನು ಚುರುಕುಗೊಳಿಸಲು ಇದೇ ವೇಳೆಯಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಇನಾಯತಲಿ ಶಿಂಧೆ ಅವರಿಗೆ ಸೂಚಿಸಲಾಯಿತು. ಆಶಾ ಕಾರ್ಯಕರ್ತೆಯರನ್ನೊಳಗೊಂಡು ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಕಾರ್ಯಾಗಾರವೊಂದನ್ನು ಆಯೋಜಿಸಲು ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಎಂ.ಎ.ಜಬ್ಟಾರ ಅವರಿಗೆ ನಿರ್ದೇಶನ ನೀಡಲಾಯಿತು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿರುವ ಎಲ್ಲಾ ಸಿಬ್ಬಂದಿಗೆಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲು ಇಲಾಖೆಯ ಜಿಲ್ಲಾ ಅಧಿಕಾರಿ ಐ.ಎಸ್‌. ಪಾಂಚಾಳ ಅವರಿಗೆ ಸೂಚನೆ ನೀಡಲಾಯಿತು. ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಬರುವ ಏ.14 ಕೊನೆಯ ದಿನಾಂಕ ಆಗಿದ್ದು, ಈ ಬಗ್ಗೆ ಜನತೆಗೆ ಮತ್ತೂಮ್ಮೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಸ್ವೀಪ್‌ ಸಮಿತಿಯಿಂದ ಮತ್ತಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next