Advertisement

ಜನರ ಮನಸ್ಸು ತಿದ್ದುವಂತಹ ಸಾಹಿತ್ಯ ರಚನೆ ಮಾಡಿ

09:34 AM Aug 27, 2019 | Suhan S |

ಧಾರವಾಡ: ಸಮಾಜ ವ್ಯವಸ್ಥೆಯಲ್ಲಿ ಸಾಹಿತಿಗಳಿಗೆ ಉಚ್ಚ ಸ್ಥಾನವಿದ್ದು, ಪ್ರತಿಯೊಬ್ಬ ಸಾಹಿತಿಯೂ ಜನರ ಮನಸ್ಸು ತಿದ್ದುವಂತಹ ಸಾಹಿತ್ಯ ರಚನೆ ಮಾಡಬೇಕಾಗಿದೆ ಎಂದು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವಿವಿ ಕುಲಪತಿ ಡಾ| ನಿರಂಜನಕುಮಾರ ಹೇಳಿದರು.

Advertisement

ಜನತಾ ಶಿಕ್ಷಣ ಸಮಿತಿ ಹಾಗೂ ಸಪ್ನ ಬುಕ್‌ ಹೌಸ್‌ ಸಹಯೋಗದಲ್ಲಿ ನಾಡೋಜ ಡಾ| ಕಮಲಾ ಹಂಪನಾ ಅವರ ಜೀವನಯಾನ ‘ಬೇರು- ಬೆಂಕಿ-ಬಿಳಲು’ ಕೃತಿಯ ಅನುಸಂಧಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಭಾಷೆಯ ಬೆಳವಣಿಗೆಯಲ್ಲಿ ಸಾಹಿತಿಗಳ ಪಾತ್ರ ಮುಖ್ಯವಾದದ್ದು. ತನ್ನ ಬರವಣಿಗೆ ಮೂಲಕ ಕವಿ ಪ್ರಕೃತಿಯ ಸೌಂದರ್ಯವನ್ನು ಸೆರೆ ಹಿಡಿಯುತ್ತಾನೆ. ಸಮಾಜದ ಪರಿವರ್ತನೆಗೆ ಶಿಕ್ಷಣ ಮುಖ್ಯವಾಗಿದ್ದು, ವೀರೇಂದ್ರ ಹೆಗ್ಗಡೆಯವರು ಶಿಕ್ಷಣ ಪ್ರಸಾರಕ್ಕೆ ಮಹತ್ವ ಕೊಟ್ಟಿದ್ದಾರೆ ಎಂದರು.

ಕೃತಿ ಲೋಕಾರ್ಪಣೆ ಮಾಡಿದ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಡಾ|ಪದ್ಮರಾಜ ದಂಡಾವತಿ ಮಾತನಾಡಿ, ಇದೊಂದು ಆತ್ಮಕತೆಯ ರೂಪದಲ್ಲಿಯೇ ಹೊರಹೊಮ್ಮಿದ ಜೀವನಯಾನವಾಗಿದೆ. ಕೃತಿ ಓದಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಸಾಹಿತಿ ದಂಪತಿಗಳಲ್ಲಿಯೇ ಆದರ್ಶದ ಜೀವನವನ್ನು ನಡೆಸುತ್ತಿರುವ ಅಪರೂಪದ ಜೋಡಿಯಾಗಿದೆ. ಹಂಪನಾ ಅವರೂ ಆತ್ಮಕತೆ ಬರೆಯಲಿ ಎಂದು ಆಶಿಸಿದರು.

ಡಾ| ಕಮಲಾ ಹಂಪನಾ ಮಾತನಾಡಿ, ಇವತ್ತಿನ ಶಿಕ್ಷಣ ವ್ಯವಸ್ಥೆಯ ಬದಲಾವಣೆಯಲ್ಲಿ ಪ್ರಾರಂಭದ ಹಂತದಿಂದಲೇ ಕನ್ನಡ ಮಾಧ್ಯಮದಲ್ಲಿ ಕಲಿಸುವುದರೊಂದಿಗೆ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ಇಂಗ್ಲಿಷ್‌ನ್ನೂ ಒಂದು ವಿಷಯವನ್ನಾಗಿ ಕಲಿಸುವುದು ಅಗತ್ಯವಾಗಿದೆ. ದೇಶದಲ್ಲಿ ಹಲವಾರು ಧರ್ಮ, ಜಾತಿಗಳಿವೆ. ನಾವೆಲ್ಲರೂ ಹಿಂದೂಗಳೆ. ಆದರೆ ಹಿಂದು ಪದದ ಬಳಕೆ ಸಮಂಜಸವಲ್ಲ. ನಾವು ಭಾರತೀಯರು ಎಂಬ ಪದ ಬಳಕೆ ಸೂಕ್ತ ಎಂದರು. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಡಾ| ಹಂಪ ನಾಗರಾಜಯ್ಯ ಅವರನ್ನು ಜನತಾ ಶಿಕ್ಷಣ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ| ಹಂಪ ನಾಗರಾಜಯ್ಯ ಮಾತನಾಡಿ, ಅತ್ಯಂತ ಪ್ರಾಚೀನವಾದ ಭಾಷೆಗಳು ಪ್ರಾಕೃತ ಮತ್ತು ಸಂಸ್ಕೃತ. ಸಂಸ್ಕೃತಕ್ಕೆ ದೇಶದಲ್ಲಿ ದೊರೆತ ಸ್ಥಾನಮಾನ ಅಪಾರ. ದೇಶದಲ್ಲಿ ಹದಿನಾಲ್ಕು ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. ಒಂದು ಕಾಲದಲ್ಲಿ ಪ್ರಾಕೃತ ಭಾಷೆ ಆಡುಮಾತಿನ ಜನಪ್ರಿಯ ಭಾಷೆಯಾಗಿತ್ತು. ಇಂತಹ ಪ್ರಾಕೃತ ಭಾಷೆಯ ಬೆಳವಣಿಗೆ ಮತ್ತು ಅಧ್ಯಯನಕ್ಕಾಗಿ ಪ್ರಾಕೃತ ವಿಶ್ವವಿದ್ಯಾಲಯದ ಸ್ಥಾಪನೆಯ ಅಗತ್ಯವಿದೆ ಎಂದರು.

ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ| ಮೊಗಳ್ಳಿ ಗಣೇಶ್‌, ಶಿವಮೊಗ್ಗ ಕುವೆಂಪು ವಿವಿ ಪ್ರಾಧ್ಯಾಪಕ ಡಾ| ಪ್ರಶಾಂತ ನಾಯಕ ಮಾತನಾಡಿದರು. ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ| ನ. ವಜ್ರಕುಮಾರ ಅಧ್ಯಕ್ಷತೆ ವಹಿಸಿದ್ದರು. ಡಾ| ಶಾಂತಿನಾಥ ದಿಬ್ಬದ, ಪ್ರೊ| ಮಾಲತಿ ಪಟ್ಟಣಶೆಟ್ಟಿ, ಹನುಮಾಕ್ಷಿ ಗೋಗಿ, ಪಿ.ಜಿ. ಕೆಂಪಣ್ಣವರ, ಸುಮನಕ್ಕ ವಜ್ರಕುಮಾರ, ಸೂರಜ ಜೈನ, ಜೆ.ಆರ್‌. ಕುಂದಗೋಳ ಇದ್ದರು. ಡಾ| ಅಜಿತಪ್ರಸಾದ ಸ್ವಾಗತಿಸಿದರು. ಡಾ| ಜಿನದತ್ತ ಹಡಗಲಿ ನಿರೂಪಿಸಿದರು. ಮಹಾವೀರ ಉಪಾಧ್ಯೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next