ಎಚ್.ಡಿ.ಕೋಟೆ: ಕಂದಾಯ ಇಲಾಖೆ ನೌಕರನ ಪತ್ನಿ ಹಾಗೂ ಸಂಬಂಧಿಕರಿಗೆ ಸಾಗುವಳಿ ಕೊಡಿಸಲು ನಕಲಿ ದಾಖಲೆ ಸೃಷ್ಟಿಸಿ ಭೂ ಹಗರಣ ನಡೆಸಿದ್ದು, ಸಾಬೀತಾದ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕು ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 6 ಜನರಲ್ಲಿ ನಾಲ್ವರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಯಾರ್ಯಾರು ಸಸ್ಪೆಂಡ್!: ತಾಲೂಕಿನ ಕಂದಾಯ ಇಲಾಖೆ ಕಸಬಾ ರಾಜಸ್ವ ನಿರೀಕ್ಷಕ ಮಹೇಶ್, ಪಡುಕೋಟೆ ವೃತ್ತದ ಗ್ರಾಮ ಲೆಕ್ಕಿಗ ಅನಿಲ್ ಕುಮಾರ್, ತಹಶೀಲ್ದಾರ್ ಕಚೇರಿ ಪ್ರಥಮ ದರ್ಜೆ ಸಹಾಯಕ ವಿಷ್ಣು, ಮುಜರಾಯಿ ಇಲಾಖೆಯ ಹರೀಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾಧಿಕಾರಿಗಳು ಅಮಾನತು ಮಾಡಿದ್ದಾರೆ. ಇನ್ನು ಇದೆ ಭೂಹಗರಣದಲ್ಲಿ ಭಾಗಿಯಾಗಿರುವ ಇಲ್ಲಿನ ಶಿರಸ್ತೆದಾರ್ ಕುಮಾರ್ ಮತ್ತು ತಹಶೀಲ್ದಾರ್ ರತ್ನಾಂಬಿಕೆ ಅವರನ್ನು ಅಮಾನತ್ತುಗೊಳಿಸುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂಬುದು ತಿಳಿದು ಬಂದಿದೆ.
ಏನಿದು ಪ್ರಕರಣ?: ಎಚ್.ಡಿ.ಕೋಟೆ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಡುಕೋಟೆ ವೃತ್ತದ ಗ್ರಾಮ ಲೆಕ್ಕಿಗ ಅನಿಲ್ ಕುಮಾರ್ ತಮ್ಮ ಸಂಬಂಧಿಕರಾದ ಅಣ್ಣೂರು ತಾಲೂಕಿನ ಸುಜಾತ ಹಾಗೂ ಕಂದಾಯ ಇಲಾಖೆ ಮುಜರಾಯಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನೌಕರ ಹರೀಶ್ ಪತ್ನಿ ಭವ್ಯ ಹೆಸರಿಗೆ ತಾಲೂಕಿನ ಪಡು ಕೋಟೆ ಸರ್ವೆ ನಂ.53ರಲ್ಲಿ ಸುಮಾ ರು 5 ಎಕರೆ ಜಮೀನನ್ನು ಕಬಳಿಸಲು ಸಾಗುವಳಿ ಪಡೆಯುವ ನಿಟ್ಟಿನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿದ್ದರು. ಸರ್ಕಾರಿ ಜಮೀನು ಕಬಳಿಸಲು ಇದಕ್ಕೆ ತಹಶೀಲ್ದಾರ್ ರತ್ನಾಂಬಿಕೆ, ಶಿರಸ್ತೆದಾರ್ ಕುಮಾರ್, ಕಸಬಾ ಆರ್‌ಐ ಮಹೇಶ್, ಪ್ರಥಮ ದರ್ಜೆ ಸಹಾಯಕ ವಿಷ್ಣು ನಕಲಿ ದಾಖಲೆ ಸೃಷ್ಟಿಸಲು ಭಾಗಿಯಾಗಿದ್ದರು. ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಕೆಲವರು ಕಂದಾಯ ಇಲಾಖೆಗೆ ದೂರು ನೀಡಿದ್ದರು. ಜೊತೆಗೆ ಉದಯವಾಣಿಯಲ್ಲೂ ಭೂ ಹಗರಣದ ಬಗ್ಗೆ ನಿರಂತರ ವರದಿ ಪ್ರಕಟವಾಗಿತ್ತು.
ಅಮಾನತಿಗೆ ವರದಿ ಸಲ್ಲಿಸಿದ್ದ ಎಸಿ: ಭೂ ಹಗರಣ ನಡೆದಿರುವ ಬಗ್ಗೆ ಬಂದಿದ್ದ ದೂರುಗಳ ಅನ್ವಯ ಹುಣಸೂರು ಉಪವಿಭಾಗ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿದ್ದಾಗ ಕಂದಾಯ ಇಲಾಖೆಯ ಈ 6 ಜನ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಹುಣಸೂರು ಎಸಿ ರುಚಿ ಬಿಂದಾಲ್ ಅವರು ಕಳೆದ ತಿಂಗಳು ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯಲ್ಲೇ ಆದ ಅಕ್ರಮದ ವಿರುದ್ಧ ಅಧಿಕಾರಿಗಳನ್ನು ಅಮಾನತುಪಡಿಸುವ ಮೂಲಕ ದಿಟ್ಟ ನಿರ್ಧಾರ ತಗೆದುಕೊಂಡು ಭೂಹಗರಣದಲ್ಲಿ ಭಾಗಿಯಾಗಿರುವ ಇಲ್ಲಿನ ತಹಶೀಲ್ದಾರ್ ರತ್ನಾಂಬಿಕೆ ಹಾಗೂ ಶಿರಸ್ತೆದಾರ್ ಕುಮಾರ್ ಅವರನ್ನು ಅಮಾನತುಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈಗ ಅಮಾನತಾಗಿರುವ ಅಧಿಕಾರಿಗಳು ಇದೆ ರೀತಿ ಇನ್ನಷ್ಟು ಭೂಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಚರ್ಚೆ ಮುನ್ನೆಲೆಗೆ ಬಂದಿದೆ.
ಜತೆಗೆ ಹತ್ತಾರೂ ವರ್ಷಗಳಿಂದ ತಾಲೂಕಿನ ಕಂದಾಯ ಇಲಾಖೆಯಲ್ಲೇ ಇದ್ದುಕೊಂಡು ಜನರ ಜೀವ ಹಿಂಡುತ್ತಿದ್ದ ಕಸಬಾ ರಾಜಸ್ವ ನಿರೀಕ್ಷಕ ಮಹೇಶ್, ಅನಿಲ್, ಹರೀಶ್, ವಿಷ್ಣು ಅವರು ಅಮಾನತಾಗಿದ್ದು ಜನರು, ರೈತರು ಸಂತಸಗೊಂಡಿದ್ದಾರೆ.
ಈ ಹಗರಣದಲ್ಲಿ ಇನ್ನೂ ಅನೇಕರಿದ್ದು ಅವರ ಮೇಲೆಯೂ ಸೂಕ್ತ ತನಿಖೆ ಕೈಗೊಂಡು ಅಮಾನತು ಮಾಡಿ ಅವರ ಜಾಗಕ್ಕೆ ಸೂಕ್ತ ಅಧಿಕಾರಿಗಳನ್ನು ನೇಮಕ ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿ ಗಳು ನಕಲಿ ದಾಖಲೆ ಸೃಷ್ಟಿಸಿ ಕರ್ತವ್ಯಲೋಪ ಎಸಗಿರುವ ಬಗ್ಗೆ ಹುಣಸೂರಿನ ಎಸಿ ಅವರು ಸಲ್ಲಿಸಿದ್ದ ಸಮಗ್ರ ವರದಿಯನ್ನು ಪರಿಶೀಲಿಸಿ ಅದರಂತೆ ಎಚ್.ಡಿ.ಕೋಟೆ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ನಾಲ್ವರನ್ನು ಅಮಾನತು ಗೊಳಿಸಲಾಗಿದೆ.
ಇನ್ನೂ ತಹಶೀಲ್ದಾರ್ ಮತ್ತು ಶಿರಸ್ತೇದಾರ್ ಅವರನ್ನು ಅಮಾನತು ಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯ ಲಾಗಿದೆ. ಇದೇ ಭೂ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮತ್ತಿಬ್ಬರು ನೌಕರರ ವಿಚಾರಣೆ ನಡೆಯುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು.
-ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿಗಳು
-ಬಿ.ನಿಂಗಣ್ಣಕೋಟೆ