ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ನಡೆದಿರುವ 164 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷಿಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳ ಕುರಿತು ವಿವಿಧ ಠಾಣೆಗಳಲ್ಲಿ 25 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಬೆಂಗಳೂರುಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ ಡಿ.ಚನ್ನಣ್ಣನವರ್ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಕೈಗಾರಿಕಾ ಪ್ರದೇಶಕ್ಕೆ ಸಮೀಪದ ರಘುನಾಥಪುರ, ಶಿವಪುರ ಗ್ರಾಮಗಳಲ್ಲಿ ಜೀವಂತವಾಗಿರುವ ವ್ಯಕ್ತಿಗಳು ಮೃತ ಪಟ್ಟಿದ್ದಾರೆ ಎಂದು ಮರಣ ಪ್ರಮಾಣ ಪತ್ರ ಪಡೆದು ಅಕ್ರಮವಾಗಿ ಖಾತೆ ಬದಲಾವಣೆ ಮಾಡಿಕೊಂಡು ಜಮೀನುಮಾರಾಟ ಮಾಡಲಾಗಿದೆ. ಸಾಸಲು ಹೋಬಳಿಯ ತೋಡಲ ಬಂಡೆ ಗ್ರಾಮದಲ್ಲಿ ರುದ್ರಪ್ಪ ಎಂಬುವವರು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಮುತ್ತು ರಾಯಪ್ಪ ಎಂಬುವವರಿಗೆ ಸೇರಿದ್ದ ಜಮೀನನ್ನುತನ್ನದು ಎಂದು ವಂಶವೃಕ್ಷ ಮಾಡಿಸಿಕೊಂಡಿದ್ದಾರೆ. ಗ್ರಾಮದ ಹತ್ತು ಜನ ಸಾಕ್ಷಿಗಳ ನಕಲಿಸಹಿಗಳನ್ನು ಹಾಕುವ ಮೂಲಕ ಅಕ್ರಮವಾಗಿ ತಮ್ಮ ಹೆಸರಿಗೆ ಖಾತೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಒಂದೊಂದು ಜಮೀನು ಪ್ರಕರಣದಲ್ಲೂ ಒಂದೊಂದು ರೀತಿಯ ಅಕ್ರಮಗಳು ನಡೆದಿವೆ ಎಂದು ತಿಳಿಸಿದರು.
ತಾಲೂಕಿನಲ್ಲಿ ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಕಲಿ ದಾಖಲೆಗಳ ಸೃಷ್ಟಿ ಮಿತಿ ಮೀರಿದೆ. ಜಮೀನುಗಳಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿಸುವಲ್ಲಿ ತಾಲೂಕಿನಲ್ಲಿ ಮೂರು ಗುಂಪುಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ನಕಲಿ ದಾಖಲೆ ಹೊಂದಿರುವ ಜಮೀನು ಮಾರಾಟ, ಖರೀದಿಯಲ್ಲಿ ರೌಡಿಶೀಟರ್‌ಗಳು, ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದು ಸಕ್ರಿಯವಾಗಿದೆ.ಈ ಬಗ್ಗೆಯು ತನಿಖೆಯಲ್ಲಿ ಬೆಳಕಿಗೆ ಬಂದಿದೆಎಂದರು.
ಆರ್‌ಟಿಸಿ ಪರಿಶೀಲಿಸಿಕೊಳ್ಳಿ: ಊರಿನಲ್ಲಿ ಇರದೇ ನೀಲಗಿರಿ ತೋಪುಗಳನ್ನು ಬೆಳೆಸಿರುವ ಹಾಗೂ ಹೊರ ಊರುಗಳಲ್ಲಿ ಇರುವವರು ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ತಮ್ಮಜಮೀನಿನ ಆರ್‌ಟಿಸಿ ಗಳನ್ನು ಪರಿಶೀಲಿಸಿಕೊಳ್ಳಬೇಕು. ಅಲ್ಲದೆ ಯಾವುದೇ ಜಮೀನಿನ ಖಾತೆ ವರ್ಗಾವಣೆಯ ವಿವಿಧ ಹಂತಗಳನ್ನುತಮ್ಮ ಮೊಬೈಲ್‌ಗಳಲ್ಲಿಯೇ ಆನ್‌ಲೈನ್‌ಗಳ ಮೂಲಕ ಪರಿಶೀಲನೆ ನಡೆಸಿಕೊಳ್ಳಬಹುದಾಗಿದೆ. ಹೀಗಾಗಿ ಖಾತೆ ಬದಲಾವಣೆ ಕುರಿತಂತೆ ಅನುಮಾನ ಬಂದ ಕೂಡಲೇ ಕಂದಾಯ ಇಲಾಖೆಗೆ ಹಾಗೂ ಪೊಲೀಸರಿಗು ಲಿಖೀತದೂರು ನೀಡಬಹುದಾಗಿದೆ ಎಂದರು.
ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಯತಂಡವನ್ನು ಬೆಯಲಿಗೆ ತಂದ ಡಿವೈಎಸ್ಪಿಟಿ.ರಂಗಪ್ಪ ಸೇರಿದಂತೆ ಪೊಲೀಸರ ತಂಡಕ್ಕೆಕೇಂದ್ರವಲಯ ಐಜಿಪಿ ಅವರು ನಗದುಬಹುಮಾನ ಘೋಷಣೆ ಮಾಡಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ಅಧೀಕ್ಷಕ ಲಕ್ಷ್ಮೀಗಣೇಶ್, ಡಿವೈಎಸ್ಪಿಟಿ.ರಂಗಪ್ಪ, ಸರ್ಕಲ್ ಇನ್ಸ್‌ಪೆಕ್ಟರ್‌ಎಂ.ಬಿ.ನವೀನ್‌ಕುಮಾರ್, ಇನ್ಸ್‌ಪೆಕ್ಟರ್‌ಸತೀಶ್, ಸಬ್ ಇನ್ಸೆಪೆಕ್ಟರ್ ಮಂಜುನಾಥ್,ಗಜೇಂದ್ರ ಇತರರಿದ್ದರು.