ಬೀದರ: ಜಿಲ್ಲೆಯಲ್ಲಿ ಕೈಗಾರಿಕೆಗಳು, ಉದ್ಯಮಗಳು ಹೆಚ್ಚೆಚ್ಚು ಅಭಿವೃದ್ಧಿಯಾಗಬೇಕು ಎಂಬುದು ಸರ್ಕಾರದ ಅಪೇಕ್ಷೆಯಾಗಿದೆ. ಸ್ವಾವಲಂಬಿಗಳಾಗಿ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ನೆರವಾಗಬೇಕು ಎಂದು ಜಿಲ್ಲಾ ಅಗ್ರಣಿ ಬ್ಯಾಂಕಿನ ಮುಖ್ಯ ಪ್ರಬಂಧಕ ಪಂಡಿತ್ ಹೊಸಳ್ಳಿ ಹೇಳಿದರು.
ಸಹಾರ್ದ ಸಂಸ್ಥೆ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಆಶ್ರಯದಲ್ಲಿ ಬಸವಕಲ್ಯಾಣದ ಡಿಸಿಸಿ ಬ್ಯಾಂಕ್ ಸಂಭಾಗಣದಲ್ಲಿ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿರುವ ಸ್ವ-ಉದ್ಯೋಗಾಕಾಂಕ್ಷಿಗಳಾದ ಫಲಾನುಭವಿಗಗೆ ನಡೆದ ನೂತನ ಕೈಗಾರಿಕಾ ನೀತಿ ಮತ್ತು ಉದ್ಯಮ ಶೀಲತೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಂಕ್‌ಗಳು ಆಸ್ತಿ ನಿರ್ಮಾಣಕ್ಕಾಗಿ ಸಾಲ ನೀಡಲು ಸದಾ ಸಿದ್ದವಿದ್ದು, ಉದ್ಯಮಿಗಳಿಗೆ ತೊಂದರೆ ನೀಡುವುದು ಬ್ಯಾಂಕ್ ಗಳ ಉದ್ದೇಶವಲ್ಲ. ಉದ್ಯಮಿಗಳಿಗೆ ಸಾಲ ನೀಡಲು ಬ್ಯಾಂಕನಲ್ಲಿ ಸಿಬಿಲ್ ಎಂಬ ತಾಂತ್ರಿಕ ವ್ಯವಸ್ಥೆಯ ಸೇವೆ ಲಭ್ಯವಿದ್ದು ಇದು ಹಲವಾರು ಮಾನದಂಡಗಳ ಆಧಾರದ ಮೇಲೆ ಉದ್ಯಮದ ಸಾಮರ್ಥ್ಯ ಅಳೆಯುವ ಸಾಧನವಾಗಿದೆ. ಇದರಲ್ಲಿ ನಮೂದಾಗಿರುವ ಸಾಮರ್ಥ್ಯಗಳ ಆಧಾರದ ಮೇಲೆ ಬ್ಯಾಂಕ್ ಸಾಲ ನಿರ್ಧರಿಸಲ್ಪಡುತ್ತದೆ. ಸರ್ಕಾರವು ಅಭ್ಯರ್ಥಿಗಳ ಪರವಾಗಿ ಬ್ಯಾಂಕ್‌ಗಳಿಗೆ ವಿಶ್ವಾಸ ನೀಡುವ ಕೆಲಸ ಮಾಡುತ್ತಿದೆ. ಎಲ್ಲರೂ ವಿಶ್ವಾಸದಿಂದ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕರಾವ್ ರಘೋಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯಮ ಸ್ಥಾಪನೆಗೆ ಯುವ ಜನತೆಗೆ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ 10 ಲಕ್ಷ ರೂ. ವರೆಗೆ ಸಾಲ ನೀಡುತ್ತಿದೆ. ಶೇ. 25ರಿಂದ 35ರಷ್ಟು ಸಹಾಯಧನ ನೀಡಲಾಗುತ್ತಿದೆ. ಮಾರಾಟ ತೆರಿಗೆ, ವಿದ್ಯುಚ್ಚಕ್ತಿ ಬಿಲ್, ನೋಂದಣೆ ಶುಲ್ಕಗಳಲ್ಲೂ ಭಾರಿ ಪ್ರಮಾಣದ ರಿಯಾಯಿತಿ ನೀಡುವ ಸೌಲಭ್ಯವಿದೆ. ಇನ್ನೂ ಹೆಚ್ಚಿನ ಮೊತ್ತದ ಅವಶ್ಯಕತೆ ಇರುವವರಿಗಾಗಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜೆನೆಯಡಿ 20 ಲಕ್ಷದ ವರೆಗೂ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆರ್ಥಿಕ ಸಾಕ್ಷರತಾ ಕೇಂದ್ರದ ಪ್ರಬಂಧಕ ವಾಸುದೇವ ಮಣಕಲ್ ಮಾತನಾಡಿ ಪ್ರತಿಯೊಂದು ವ್ಯವಹಾರಕ್ಕೂ ಸಂವಹನದ ಅವಶ್ಯಕತೆಯಿರುತ್ತದೆ ಎಂದರು. ಸಹಾಯಕ ನಿರ್ದೇಶಕ ನಾಗಪ್ಪಾ ರೆಡ್ಡಿ, ಬ್ಯಾಂಕ್ ವ್ಯವಸ್ಥಾಪಕ ರಘುನಾಥ ರೆಡ್ಡಿ, ಲೆಕ್ಕಿಗ ಶ್ರೀಕಾಂತ್ ಗುದಗೆ ಇದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನಿಲ್ ಪರೇಶಾನೆ ನಿರೂಪಿಸಿದರು. ನಾಗಶೆಟ್ಟಿ ಘೋಡಂಪಳ್ಳಿ ವಂದಿಸಿದರು
ಸಾಂಪ್ರಾದಾಯಿಕ ಉದ್ಯಮಚಿ ಮೂಲೆಗುಂಪು: ಬಸವಕಲ್ಯಾಣ ತಾಲೂಕಿನಲ್ಲಿ ಈ ಮೇಲಿನ ಯೋಜನೆಗಳಿಗೆ ಸಾಕಷ್ಟು ಅರ್ಜಿಗಳೇ ಬಾರದಿರುವುದರಿಂದ ಯೋಜನೆ ಜಾರಿಯಲ್ಲಿ ಹಿಂದುಳಿದಿದೆ. ಈ ಪ್ರದೇಶದಲ್ಲಿ ಜನರು ಉದ್ಯಮಗಳನ್ನು ನಡೆಸುತ್ತಿದ್ದು ಅತೀ ಹೆಚ್ಚು ಉದ್ಯೋಗವಕಾಶಗಳು ಲಭ್ಯವಿವೆ. ಆದರೂ ಉದ್ಯಮಿಗಳು ಸಂತೃಪ್ತ ಭಾವದಿಂದ ಇರುವುದರಿಂದ ಇನ್ನೂ ಹೆಚ್ಚು ಅಭಿವೃದ್ಧಿಗೆ ಅವಕಾಶವಿದ್ದರೂ ಸೌಲಭ್ಯಗಳ ಬಳಕೆಯಲ್ಲಿ ಹಿಂದುಳಿದಿದೆ. ಉದ್ಯಮವು ನಿರಂತರ ಬದಲಾವಣೆ ಮತ್ತು ಕಠಿಣ ಪರಿಶ್ರಮ ಅಪೇಕ್ಷಿಸುತ್ತದೆ. ದಿನವೂ ಕಾಲಿಡುವ ನೂತನ ತಂತ್ರಜ್ಞಾನಗಳು ಸಾಂಪ್ರಾದಾಯಿಕ ಉದ್ಯಮಗಳನ್ನು ಮೂಲೆಗುಂಪಾಗಿಸುತ್ತಿವೆ. ಆದ್ದರಿಂದ ಉದ್ಯಮಿಗಳು ಸದಾ ಜಾಗೃತವಾಗಿದ್ದು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುಂದುವರಿಯುತ್ತಿರಬೇಕು.