ಗಂಗಾವತಿ: ನಗರದ ಎಪಿಎಂಸಿ ಗಂಜ್ ಹಮಾಲಿ ಕಾರ್ಮಿಕರ ಕ್ವಾಟ್ರಸ್‌ನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳು ಬಿರುಕು ಬಿಟ್ಟಿದ್ದು, ಭಯದ ನೆರಳಿನಲ್ಲಿ ಶಾಲಾ ವಿದ್ಯಾರ್ಥಿಗಳು ಪಾಠ ಕಲಿಯುವ ಸಂದರ್ಭ ಬಂದಿದೆ. ಗಂಜ್ ಪ್ರದೇಶ ಮತ್ತು ಕೃಷಿ ವಿಜ್ಞಾನ ಕೇಂದ್ರದ ನೌಕರರ ಮಕ್ಕಳಿಗಾಗಿ ಶಾಲೆ ಆರಂಭವಾಗಿದೆ.
1ರಿಂದ 5ನೇ ತರಗತಿ ಇರುವ ಶಾಲೆಯಲ್ಲಿ ಒಟ್ಟು 30 ವಿದ್ಯಾರ್ಥಿಗಳಿದ್ದಾರೆ. ಶಾಲೆ ಬೀಳುವ ಹಂತದಲ್ಲಿರುವುದರಿಂದ ಪಾಲಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತಿದ್ದಾರೆ. 2005-06ನೇ ಸಾಲಿನ ಸರಕಾರದ ಅನುದಾನದಲ್ಲಿ ಈ ಶಾಲೆಯ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ.
ಗುಣಮಟ್ಟ ಸರಿಯಾಗಿ ಇಲ್ಲದ ಕಾರಣ ಮೂರು ಕೊಠಡಿಗಳ ಗೋಡೆ, ನೆಲ ಕುಸಿದಿದ್ದು ಬೀಳುವ ಹಂತ ತಲುಪಿವೆ. ಸದ್ಯ ಒಂದು ಕೋಣೆಯನ್ನು ಶಾಲಾ ಶಿಕ್ಷಕರೇ ದುರಸ್ತಿ ಮಾಡಿಸಿಕೊಂಡು ಐದು ತರಗತಿಯನ್ನು ಒಂದೇ ಕಡೆ ನಡೆಸುತ್ತಿದ್ದಾರೆ. ಬಿಸಿಯೂಟ ತಯಾರಿಸುವ ಕೋಣೆ ಸಹ ಬೀಳುವ ಹಂತದಲ್ಲಿದ್ದು ಮೇಲ್ಛಾವಣಿ ಚತ್ತು ಆಗಾಗ ಅಡುಗೆಯಲ್ಲಿ ಬಿದ್ದ ಸಂದರ್ಭವೂ ಇದೆ.
ಪತ್ರ: ಬೀಳುವ ಹಂತ ತಲುಪಿರುವ ಕೊಠಡಿಗಳನ್ನು ನೆಲಸಮ ಮಾಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಲಾ ಮುಖ್ಯೋಪಾಧ್ಯಯರು ಅನೇಕ ಭಾರಿ ಪತ್ರ ಬರೆದರೂ ಪ್ರಯೋಜನ ವಾಗಿಲ್ಲ. ಶಾಲೆಯ ಅವಧಿಯಲ್ಲಿ ಮಕ್ಕಳು ಈ ಕೋಣೆಗಳಲ್ಲಿ ಆಟವಾಡಲು ತೆರಳುತ್ತಿದ್ದು, ಕಟ್ಟಡ ಬಿದ್ದರೆ ಅನಾವುತ ಸಂಭವಿಸುತ್ತದೆ. ಹಳೆಯ ಕೋಣೆ ಆಗಿರುವುದರಿಂದ ಕೋಣೆಯ ಒಳೆಗೆ ನೆಲ ಕುಸಿದಿದ್ದು ಹುಳ ಹುಪ್ಪಡಿ ಸೇರಿದ್ದು ಇದರಿಂದ ಮಕ್ಕಳಿಗೆ ಅಪಾಯವಾಗುವ ಸಂಭವ ಇರುವುದರಿಂದ ಕೂಡಲೇ ಈ ಕಟ್ಟಡ ಕೆಡವುವಂತೆ ಪತ್ರ ಬರೆಯಲಾಗಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಹೊಂದಿದ್ದಾರೆ.