ಹುಬ್ಬಳ್ಳಿ: ಅವಳಿನಗರದ ಮಧ್ಯೆ ಪ್ರತ್ಯೇಕ ಮಾರ್ಗದಲ್ಲಿ ಸಾರಿಗೆ ಸೇವೆ ಒದಗಿಸಲು ಆರಂಭಿಸಿರುವ ಬಿಆರ್ ಟಿಎಸ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಲವು ಅಡೆತಡೆಗಳ ಮಧ್ಯೆಯೇ ಬಸ್ ಸೇವೆ ಮುಂದುವರಿದಿದೆ.
ಸದ್ಯ ಬಿಆರ್‌ಟಿಎಸ್ ಮಾರ್ಗಕ್ಕೆ ದೊಡ್ಡ ಅಡೆತಡೆ ನವಲೂರು ಬ್ರಿಡ್ಜ್ . ಬಸ್ ಸಂಚಾರಕ್ಕೆ ಎರಡು ಒಮ್ಮುಖ ಪ್ರತ್ಯೇಕ ಬ್ರಿಡ್ಜ್ಗಳನ್ನು ಮಾಡಲಾಗಿದ್ದರೂ ಒಂದು ಬ್ರಿಡ್ಜ್ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಒಂದೇ ಬ್ರಿಡ್ಜ್ ಮೇಲೆ ಬಸ್ ಗಳು ಸಂಚರಿಸುವಂತಾಗಿದೆ. ಆದರೆ ಕಾಮಗಾರಿ ಅಪೂರ್ಣಗೊಂಡ ಬ್ರಿಡ್ಜ್ (ಆರ್‌ಒಬಿ) ಮುಖ್ಯ ಪಿಲ್ಲರ್‌ನಲ್ಲಿ ಬಿರುಕು ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಬೀಮ್‌ಗಳಲ್ಲಿ ಬಿರುಕು ಕಾಣುವುದು ಸಾಮಾನ್ಯ. ಅದನ್ನು ಸುಲಭವಾಗಿ ದುರಸ್ತಿ ಮಾಡಲಾಗುತ್ತದೆ. ಆದರೆ ಕಾಲಮ್‌ನಲ್ಲಿಯೇ ಬಿರುಕು ಕಾಣಿಸಿರುವುದು ವಿಷಯವನ್ನು ಗಂಭೀರವಾಗಿಸಿದೆ. ರೈಲ್ವೆ ಟ್ರ್ಯಾಕ್ ಸಮೀಪ ಬ್ರಿಡ್ಜ್ ನಲ್ಲಿ ಕೆಲವೆಡೆ ಬಿರುಕು ಮೂಡಿದೆ. ಸೇತುವೆ ಬಳಕೆಗೆ ಮುನ್ನವೇ ಬಿರುಕು ಉಂಟಾಗಿರುವುದು ಭದ್ರತೆ ಬಗ್ಗೆ ಸಂದೇಹ ಮೂಡುವಂತಾಗಿದೆ. ಧಾರವಾಡದಿಂದ ಬರುವಾಗ ನವಲೂರು ಕೆರೆ ಸಮೀಪದಿಂದ ಆರಂಭವಾಗುವ ಬ್ರಿಡ್ಜ್ ಹಾಶಮಿ ಹಾಶಮ್ ಅಲಿ ಶಾ ಖಾದ್ರಿ ದರ್ಗಾವರೆಗೂ ಇದೆ. ಸೇತುವೆ ಹೊರತಾಗಿ ಇತರ ವಾಹನಗಳು ಸಂಚರಿಸಲು 2 ಏಕಮುಖ ಮಾರ್ಗಗಳನ್ನು ನಿರ್ಮಿಸಲಾಗಿದೆ. ಬಿಆರ್‌ಟಿಎಸ್ ರಸ್ತೆಗಾಗಿ ಈಗಾಗಲೇ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದು, ಅರ್ಧ ಕಾಮಗಾರಿ ಮಾಡಿರುವುದರಿಂದ ಇಕ್ಕಟ್ಟಿನಲ್ಲಿಯೇ ವಾಹನಗಳು ಸಂಚರಿಸಬೇಕಿದೆ.
ಬ್ರಿಡ್ಜ್ನ ಮುಖ್ಯ ಬೀಮ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಲ್ಲದೇ ಹೊರಭಾಗದಲ್ಲಿ ಅಳವಡಿಸಿದ್ದ ಕೆಲವು ಸಿಮೆಂಟ್ ಬ್ಲಾಕ್‌ಗಳು ಕುಸಿದಿವೆ. ಸನಿಹದಲ್ಲಿಯೇ ರೈಲು ಟ್ರ್ಯಾಕ್ ಇದೆ. ಅಲ್ಲದೇ ಡಬ್ಲಿಂಗ್ ಕಾಮಗಾರಿ ಕೂಡ ನಡೆಯುತ್ತಿದೆ. ಬ್ರಿಡ್ಜ್ನಲ್ಲಿ ಬಿರುಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಈ ಬ್ರಿಡ್ಜ್ ಮೇಲೆ ಸದ್ಯಕ್ಕೆ ಯಾವುದೇ ವಾಹನಗಳು ಸಂಚರಿಸುತ್ತಿಲ್ಲ. ವಾಹನ ಸಂಚಾರವಿಲ್ಲದ ಬ್ರಿಡ್ಜ್ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸಂಜೆಯಾಗುತ್ತಿದ್ದಂತೆಯೇ ಮದ್ಯವ್ಯಸನಿಗಳು ಇಲ್ಲಿಗೆ ಬಂದು ಮದ್ಯಪಾನ ಮಾಡುತ್ತಾರೆ. ಸಂಜೆಯಾಗುತ್ತಿದ್ದಂತೆಯೇ ಕೆಲವು ಯುವಕರು ಇಲ್ಲಿ ಬ್ರಿಡ್ಜ್ ಮೇಲೆ ಬೈಕ್ ಸ್ಟಂಟ್ ಮಾಡುತ್ತಿದ್ದಾರೆ. ರೈಲು ಮೇಲ್ಸೇತುವೆ ಕಾರಣದಿಂದಾಗಿ ನವಲೂರು ಗ್ರಾಮಕ್ಕೆ ಬಿಆರ್‌ಟಿಎಸ್ ಬಸ್ ನಿಲುಗಡೆ ಕಲ್ಪಿಸಲು ಸಾಧ್ಯವಿಲ್ಲ ಎಂದು ತಿಳಿದ ತಕ್ಷಣ ಕೆಲವು ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೆಲವರು ಬ್ರಿಡ್ಜ್ ನಿರ್ಮಾಣ ಖಂಡಿಸಿದ್ದಾರೆ. ನವಲೂರು ಗ್ರಾಮಸ್ಥರಿಗೆ ಬಿಆರ್‌ಟಿಎಸ್ ಬಸ್ ಸಂಚಾರಕ್ಕೆ ಅನುಕೂಲೆ ಕಲ್ಪಿಸಲು ನವಲೂರಿನಿಂದ ಸತ್ತೂರವರೆಗೆ ಮಿನಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಗ್ರಾಮಸ್ಥರು ಅಲ್ಲಿಂದ ಬಿಆರ್‌ಟಿಎಸ್ ಮೂಲಕ ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಬಿಆರ್‌ಟಿಎಸ್ ಬಸ್ ಗಳ ಮೂಲಕ ಸತ್ತೂರಿಗೆ ಬಂದಿಳಿದ ನಂತರ ಮಿನಿ ಬಸ್‌ಗಳ ಮೂಲಕ ಗ್ರಾಮಕ್ಕೆ ತೆರಳಬಹುದಾಗಿದೆ. ಆದರೆ ಇದಕ್ಕೆ ಹಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಾರೆ. ಗ್ರಾಮಕ್ಕೆ ಬಿಆರ್‌ಟಿಎಸ್ ಬಸ್ ಗಳ ನಿಲುಗಡೆ ಕಲ್ಪಿಸಲು ಅನುಕೂಲವಾಗುವಂತೆ ಮಾರ್ಗ ನಿರ್ಮಾಣ ಮಾಡಬೇಕಿತ್ತು ಎಂಬುದು ಅವರ ಆರೋಪವಾಗಿದೆ.
ಬಿಆರ್‌ಟಿಎಸ್ ಸೇವೆ ಆರಂಭಗೊಂಡು ಹಲವು ತಿಂಗಳುಗಳು ಗತಿಸಿದರೂ ನವಲೂರು ಬ್ರಿಡ್ಜ್ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿದ್ದರೆ ತ್ವರಿತವಾಗಿ ಅದನ್ನು ಬಗೆಹರಿಸಿ ಬ್ರಿಡ್ಜ್ ಸಂಚಾರಕ್ಕೆ ಮುಕ್ತಗೊಳಿಸಬೇಕು. ಬ್ರಿಡ್ಜ್ ಬಿರುಕು ಬಿಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿ ದುರಸ್ತಿ ಮಾಡಬೇಕು.
-ಸುರೇಶ, ನವಲೂರು ನಿವಾಸಿ
-ವಿಶ್ವನಾಥ ಕೋಟಿ