ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಕೇರಳ ಸಿಪಿಎಂ ಪಕ್ಷದ ಭೂಮಿ, 73 ಲಕ್ಷ ರೂ. ಬ್ಯಾಂಕ್ ಠೇವಣಿಯನ್ನು ಜಪ್ತಿ ಮಾಡಿದೆ. ಕರುವನ್ನೂರು ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ಈ ಕ್ರಮ ಕೈಗೊಂಡಿದೆ. ಒಟ್ಟು 28.65 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಇ.ಡಿ. ಎಲ್ಲ ಆರೋಪಗಳನ್ನು ಕಮ್ಯುನಿಸ್ಟ್ ಪಾರ್ಟಿ ಅಲ್ಲಗಳೆದಿದೆ. 28 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು 63 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ಇ.ಡಿ. ಜಪ್ತಿ ಮಾಡಿದೆ.
ಪಕ್ಷವೇ ಆರೋಪಿ: ಆಪ್ ಬಳಿಕ 2ನೇ ಪಕ್ಷ?
ಪ್ರಕರಣ ಕುರಿತ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಇ.ಡಿ. ಸಿಪಿಎಂ ಪಕ್ಷವನ್ನು “ಆರೋಪಿ’ ಎಂದು ನಮೂದಿಸಲಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ, ಆರೋಪಪಟ್ಟಿ ಸಲ್ಲಿಕೆಯಾದರೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಪ್ ಬಳಿಕ ಆರೋಪವನ್ನು ಎದುರಿಸುತ್ತಿರುವ ಎರಡನೇ ಪಕ್ಷ ಸಿಪಿಎಂ ಆಗಲಿದೆ.