Advertisement

ಸಿಪಿಐಎಂ ಕಚೇರಿಗೆ ಬೆಂಕಿ: ತೊಕ್ಕೊಟ್ಟಿನಲ್ಲಿ ಪ್ರತಿಭಟನೆ 

03:32 PM Feb 24, 2017 | Team Udayavani |

ತೊಕ್ಕೊಟ್ಟು:  ಕೇರಳದಲ್ಲಿ  ಜನಪರ ಆಡಳಿತ ನಡೆಸುತ್ತಿರುವ  ಪಿಣರಾಯಿ ವಿಜಯನ್‌ ಅವರು ಮಂಗಳೂರಿನಲ್ಲಿ ನಡೆಯುವ  ರ್ಯಾಲಿಯಲ್ಲಿ ಭಾಗವಹಿಸುವುದನ್ನು ಸಹಿಸದ ಕಿಡಿಗೇಡಿಗಳು  ದೇರಳಕಟ್ಟೆ, ಕುತ್ತಾರು, ಪಂಡಿತ್‌ ಹೌಸ್‌ ಭಾಗದಲ್ಲಿ  ಫ್ಲೆಕ್ಸ್‌ಗಳನ್ನು  ಹಾಳುಗೆಡವಿ, ಈಗ ಸಿಪಿಐಎಂ ಕಚೇರಿಗೆ ಬೆಂಕಿ ಹಚ್ಚಿರುವುದು ಖಂಡನೀಯ ಎಂದು ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್‌ ಹೇಳಿದರು.

Advertisement

ತೊಕ್ಕೊಟ್ಟಿನಲ್ಲಿರುವ  ಸಿಪಿಐಎಂ ಉಳ್ಳಾಲ ವಲಯ ಕಚೇರಿಗೆ  ಬೆಂಕಿ  ಹಚ್ಚಿರುವುದನ್ನು ಖಂಡಿಸಿ ಇಲ್ಲಿನ ಬಸ್ಸು ನಿಲ್ದಾಣದಲ್ಲಿ  ಗುರುವಾರ ನಡೆದ ಪ್ರತಿಭಟನೆಯಲ್ಲಿ  ಅವರು ಮಾತನಾಡಿದರು.ಜಿಲ್ಲೆಯಲ್ಲಿ ಶೇ.70ರಷ್ಟು ಮಂದಿ ಶಾಂತಿಪ್ರಿಯರು.  ಆದರೆ    ಕೋಮುವಾದದ ಹಾದಿಯಲ್ಲಿ   ನಡೆದ ಯುವಕರು ಕ್ರಿಮಿನಲ್‌ಗ‌ಳಾಗಿ, ಜೀವ ಕಳೆದು ಮನೆಮಂದಿಯನ್ನು ಬೀದಿಪಾಲು ಮಾಡಿದ್ದಾರೆ.  ತೊಕ್ಕೊಟ್ಟಿನ ಬೆಂಕಿ ಪ್ರಕರಣದಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂದು ಆರೋಪಿಸಿದರು.

ಉಳ್ಳಾಲ ಭಾಗದಲ್ಲಿ ಸಿಪಿಎಂ ಚಳವಳಿ ಸಕ್ರಿಯವಾಗಿದ್ದು , ಇದರಿಂದ ಸಂಘಪರಿವಾರದ ನೇತಾರರು ಕಾರ್ಯಕರ್ತರ ಮೂಲಕ  ಬೆಂಕಿ ಹಾಕಿಸಿದ್ದಾರೆ ಎಂದು  ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆರೋಪಿಸಿದರು.

ಸಭೆಯಲ್ಲಿ  ಜಿಲ್ಲಾ ಸಮಿತಿ ಸದಸ್ಯೆ ಪದ್ಮಾವತಿ ಎಸ್‌. ಶೆಟ್ಟಿ,  ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ರಂಗಪ್ಪ ಶ್ರೀಯಾನ್‌,  ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಬಾಲಕೃಷ್ಣ ಶೆಟ್ಟಿ, ಜೀವನರಾಜ್‌ ಕುತ್ತಾರ್‌, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ  ಜಯಂತ ನಾಯ್ಕ, ಜನಾರ್ದನ ಕುತ್ತಾರ್‌, ರೋಹಿದಾಸ್‌ ಭಟ್ನಗರ, ರಾಮಚಂದ್ರ ವಕೀಲ, ಬಾಬು ಪಿಲಾರು ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನೆಯ ಪೂರ್ವಭಾವಿಯಾಗಿ ತೊಕ್ಕೊಟ್ಟು ಒಳಪೇಟೆಯ ಕಚೇರಿಯಿಂದ  ಜಂಕ್ಷನ್‌ವರೆಗೆ ಪ್ರತಿಭಟನಾ ಜಾಥಾ ನಡೆಯಿತು.

Advertisement

ಮುಖಂಡರ ಭೇಟಿ 
ಸಚಿವ ಯು.ಟಿ. ಖಾದರ್‌ ಸಹಿತ ವಿವಿಧ ಪಕ್ಷಗಳ ಮುಖಂಡರು ಭೇಟಿ ನೀಡಿ ಘಟನೆಯನ್ನು ಖಂಡಿಸಿದರು.ಸಿಪಿಐಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಆರ್‌. ಶ್ರಿಯಾನ್‌, ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರ್ಯ, ಕಾರ್ಯದರ್ಶಿ ಮಂಡಳಿ ಸದಸ್ಯ ಬಾಲಕೃಷ್ಣ ಶೆಟ್ಟಿ,  ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್‌, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ, ಉಳ್ಳಾಲ ನಗರಸಭಾ ಅಧ್ಯಕ್ಷ ಕುಂಞಿಮೋನು, ಕಾಂಗ್ರೆಸ್‌ ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಎನ್‌. ಎಸ್‌. ಕರೀಂ, ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಮಹಮ್ಮದ್‌ ಮುಸ್ತಾಫ, ಕಿನ್ಯ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಸಿರಾಜ್‌ ಕಿನ್ಯ, ನಗರಸಭಾ ಸದಸ್ಯರಾದ ಮುಸ್ತಾಫ, ಭಾಝಿಲ್‌ ಡಿ’ಸೋಜಾ, ಪಿಯೂಷ್‌ ಡಿ’ಸೋಜಾ ಸಹಿತ ವಿವಿಧ ಪಕ್ಷಗಳ ಮುಖಂಡರು ಭೇಟಿ ನೀಡಿ ಖಂಡಿಸಿದರು. 

ಸಂಪೂರ್ಣ ಭದ್ರತೆ:  ಖಾದರ್‌ 
ಬೆಂಕಿ ಹಚ್ಚಿರುವ ಘಟನೆ  ಖಂಡನೀಯ,  ಸಾಮರಸ್ಯದ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂದರ್ಭ  ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ನಡೆಸುವವರು ದೇಶದ್ರೋಹಿಗಳು.  ಕೃತ್ಯ ನಡೆಸಿದವರನ್ನು ಕೂಡಲೇ ಪತ್ತೆಹಚ್ಚುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ.  ಘಟನೆ ಕುರಿತು ಗೃಹಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ  ತಿಳಿಸಲಾಗಿದ್ದು,  ಕೇರಳ ಮುಖ್ಯಮಂತ್ರಿ ಗೆ ತಲಪಾಡಿಯಿಂದ ಮಂಗಳೂರುವರೆಗೆ  ಭದ್ರತೆ ಒದಗಿಸುವುದಾಗಿ  ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ. 

ರೈತ ಸಂಘ ಖಂಡನೆ
ಘಟನೆಯನ್ನು ಕೋಟೆಕಾರು ಸರ್ಕಲ್‌ ರೈತ ಸಂಘ ತೀವ್ರವಾಗಿ ಖಂಡಿಸಿದೆ.ಇಂಥ ಘಟನೆಗಳ  ವಿರುದ್ಧ ರೈತ ಸಂಘ ತೀವ್ರ ಹೋರಾಟ ನಡೆಸಲಿದೆ ಎಂದು ಕೊಟೆಕಾರು ಸರ್ಕಲ್‌ ರೈತ ಸಂಘದ ಅಧ್ಯಕ್ಷ ಸಂಜೀವ ಪಿಲಾರ್‌ ಮತ್ತು ಜಯಂತ ಅಂಬ್ಲಿಮೊಗರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಡಿವೈಎಫ್‌ಐ ಖಂಡನೆ
ಬೆಂಕಿ ಕೊಟ್ಟ ಕಿಡಿಗೇಡಿಗಳನ್ನು  48 ಗಂಟೆಯೊಳಗಡೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಳ್ಳಾಲ ಪೊಲೀಸ್‌ ಠಾಣೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿ ಎಚ್ಚರಿಸಿದೆ.  ಪಿಣರಾಯಿ ವಿಜಯನ್‌ ಪಾಲ್ಗೊಳ್ಳುವ ಐಕ್ಯತಾ ರ್ಯಾಲಿ ಯÍಶಸ್ಸಿಗೆ  ಡಿವೈಎಫ್‌ಐ ಸರ್ವ ರೀತಿಯ ಸಹಕಾರ ನೀಡಲಿದೆ.  ಸಂಘ ಪರಿವಾರದ ಯಾವುದೇ ದಾಳಿಗಳನ್ನು ಎದುರಿಸಲು ಡಿವೈಎಫ್‌ಐ ಸಜ್ಜಾಗಿದೆ ಎಂದು  ಸಮಿತಿಯ ಕಾರ್ಯದರ್ಶಿ ಜೀವನ್‌ ರಾಜ್‌ ಕುತ್ತಾರ್‌  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next