Advertisement

ಸಿಪಿಐಎಂ ಕಚೇರಿ ಮೇಲಿನ ದಾಳಿ ಖಂಡಿಸಿ ಪ್ರತಿಕೃತಿ ದಹನ

02:53 PM Feb 24, 2017 | Team Udayavani |

ಕಲಬುರಗಿ: ಮಂಗಳೂರಿನ ಸಿಪಿಐಎಂ ಕಚೇರಿ ಮೇಲೆ ನಡೆದಿರುವ ದಾಳಿ ನಡೆಸಿ ಬೆಂಕಿ ಹಚ್ಚಲು ಪ್ರಯತ್ನಿಸಿರುವ ದಗಾಕೋರರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಗುರುವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದವು. 

Advertisement

ಇದು ಕೇವಲ ಒಂದು ಕಚೇರಿ ಮೇಲಿನ ದಾಳಿಯಲ್ಲಿ ಪ್ರಜಾಪ್ರಭುತ್ವದ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ಪ್ರತಿಭಟನಾಕಾರರು ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಇಂತಹ ಘಟನೆ ನಡೆದಿದ್ದರೂ ಸರಕಾರ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ಬಿಜೆಪಿಯ ನಳೀನ  ಕಟೀಲು ಪ್ರಚೋದನಾಕಾರಿ ಹೇಳಿಕೆ ನೀಡಿ ಘಟನೆಯನ್ನು ಇನ್ನಷ್ಟು ಸಂಘರ್ಷಕ್ಕೆ ಒಯ್ಯುವ ಪ್ರಯತ್ನ ಮಾಡಿದ್ದಾರೆ.

ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಕೋಮು ವಿಧ್ವಂಸಕ ಕೃತ್ಯಗಳಿಗೆ ಸರಕಾರ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ಕೆ.ನೀಲಾ, ಮೀನಾಕ್ಷಿ ಬಾಳಿ, ಡಾ| ಕೈಲಾಸ ಕಡಗಂಚಿ, ಪ್ರಭು ಖಾನಾಪುರೆ, ಚಂದ್ರಶೇಖರ ಎನ್‌.ಎಂ, ಶಾಂತೇಶ ಕೋಡ್ಲಿ, ಭವಾನಿಪ್ರಸಾದ, ಜಯಶ್ರೀ ಕಟ್ಟಿಮನಿ, ಮೇಘರಾಜ ಕರಾಟೆ, ವಿರೂಪಾಕ್ಷಪ್ಪ ತಡಕಲ್‌, ಜೈಭೀಮ ಸಿಂಧೆ, ಜಗದೀಶ ಪಾಟೀಲ, ಅಶ್ವಿ‌ನಿ ಮದನಕರ, ಮಲ್ಲಮ್ಮ ಮದನಕರ ಹಾಗೂ ಇತರರು ಇದ್ದರು.

ಭಾರತೀಯ ಮಾರ್ಕ್ಸಿಸ್ಟ್‌ ಪಕ್ಷದಿಂದ ಪ್ರತಿಭಟನೆ: ಮಂಗಳೂರಿನ ಸಿಪಿಐಎಂ ಪಕ್ಷದ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಡಲು ಪ್ರಯತ್ನ ಮಾಡಿರುವುದನ್ನು ಖಂಡಿಸಿ ಭಾರತೀಯ ಮಾರ್ಕ್‌ಸಿಸ್ಟ್‌ ಪಕ್ಷದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

Advertisement

ಪ್ರತಿಭಟನೆಕಾರರು ನಂತರ ಜಿಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕೆಲ ಕಿಡಿಗೇಡಿಗಳು ಮಂಗಳೂರಿನ ಸಿಪಿಐಎಂ ಕಚೇರಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದು, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. 

ರಾಜಕೀಯ ಪಕ್ಷವೊಂದರ ಕಚೇರಿಯ ಮೇಲೆ ದಾಳಿ ಮಾಡಿದ್ದು ಖಂಡನೀಯವಾಗಿದೆ. ಕೂಡಲೇ ಇಂತಹ ಘಟನೆಗಳು ಮರುಕಳಿಸದ ಹಾಗೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ಪಕ್ಷದ ಹಿರಿಯ ಮುಖಂಡ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ಶರಣಬಸಪ್ಪ ಮಮಶೆಟ್ಟಿ, ಸುಭಾಷ ಜೇವರ್ಗಿ, ಅಶೋಕ ಮ್ಯಾಗೇರಿ, ರಫದುಲ್‌ ಪಟೇಲ್‌, ಸಿದ್ದು ಹರವಾಳ, ಉಮೇಶ ನಾಗು ಮುಂತಾದವರು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next