Advertisement

ಸದ್ದಿಲ್ಲದೇ ಆಯ್ತು 81 ಸಾವಿರ ಕೋಟಿ ಸಾಲ ಮಾಫಿ!

06:20 AM Aug 08, 2017 | Team Udayavani |

ನವದೆಹಲಿ: ಸಾಲ ಪಡೆದು ವಾಪಸ್‌ ಕಟ್ಟಲಾಗದೇ ಮನೆ ಬಿಟ್ಟು ಓಡಿ ಹೋದವರು, ತಲೆ ತಪ್ಪಿಸಿಕೊಂಡು ಓಡಾಡುತ್ತಿರುವವರು, ಏನ್‌ ಮಾಡ್ತಿರೋ ಮಾಡ್ಕೊಳಿ ಎಂದು ಬಹಿರಂಗವಾಗಿಯೇ ಅವಾಜ್‌ ಹಾಕಿಕೊಂಡು ಭಂಡ ಧೈರ್ಯದಿಂದ ತಿರುಗಾಡುತ್ತಿರುವವರ “ವಾಪಸ್‌ ಬರಲಾಗದ ಸಾಲವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಅನಾಮತ್ತಾಗಿ ಮನ್ನಾ ಅಥವಾ ಮಾಫಿ ಮಾಡಿವೆ.

Advertisement

ಈ ಮೊತ್ತ ಕೇವಲ ಸಾವಿರ ಲೆಕ್ಕದಲ್ಲೋ, ಲಕ್ಷಗಳ ಲೆಕ್ಕದಲ್ಲೋ ಅಥವಾ ಕೋಟಿಗಳ ಲೆಕ್ಕದಲ್ಲೋ ಇಲ್ಲ. ಇದು ಸಾವಿರ ಸಾವಿರ ಕೋಟಿಗಳನ್ನು ಮೀರಿದೆ. ಮಾರ್ಚ್‌ಗೆ ಅಂತ್ಯವಾದ 2017ರ ವಿತ್ತೀಯ ವರ್ಷದಲ್ಲಿ 81,683 ಕೋಟಿಯಷ್ಟು ಸಾಲವನ್ನು ಮಾಫಿ ಮಾಡಲಾಗಿದೆ.

ಸತತ ಬರದಿಂದ ಕಂಗೆಟ್ಟು ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆ ದಾರಿ ಹಿಡಿಯುತ್ತಿರುವ ರೈತನ ಕೇವಲ ಸಾವಿರ ಅಥವಾ ಲಕ್ಷಗಳ ಲೆಕ್ಕದಲ್ಲಿರುವ ಸಾಲವನ್ನು ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಇದೀಗ ಉದ್ಯಮಪತಿಗಳ ಸಾಲವನ್ನು ತಮ್ಮ ಖಾತೆಯಿಂದಲೇ ತೆಗೆದುಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಬೇಕು ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಆಗ್ರಹಿಸಿದ್ದಾರೆ.

ವಸೂಲಾಗದ ಸಾಲವನ್ನು ಮಾಫಿ ಮಾಡಿರುವ ಬಗ್ಗೆ ಹಣಕಾಸು ಇಲಾಖೆಯಿಂದಲೇ ಮಾಹಿತಿ ಸಿಕ್ಕಿದೆ. ದೇಶದಲ್ಲಿರುವ ಸರ್ಕಾರಿ ವಲಯದ ಬ್ಯಾಂಕುಗಳು ಎದುರಿಸುತ್ತಿರುವ ಅನುತ್ಪಾದಕ ಆಸ್ತಿ ಸಮಸ್ಯೆಯನ್ನು ಈಡೇರಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಣಕಾಸು ವರ್ಷವೊಂದರಲ್ಲಿ ಭಾರಿ ಪ್ರಮಾಣದ ವಸೂಲಾಗದ ಸಾಲವನ್ನು ಮಾಫಿ ಮಾಡಲಾಗಿದೆ.

2016 ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಪ್ರಮಾಣ ಶೇ.41 ರಷ್ಟು ಹೆಚ್ಚಳವಾಗಿದೆ. ಪ್ರತಿ ಬಾರಿಯೂ ಬ್ಯಾಂಕ್‌ಗಳ ಆದಾಯ ಮೇಲೆ ಭಾರಿ ಪ್ರಮಾಣದ ಹೊಡೆತ ನೀಡುತ್ತಿದ್ದ ಈ ವಸೂಲಾಗದ ಸಾಲ ಅಥವಾ ಅನುತ್ಪಾದಕ ಆಸ್ತಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಆರ್‌ಬಿಐ ಕಠಿಣ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಸಾಲದ ಹಣವನ್ನೇ “ಮಾಯಾ’ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಿವೆ.

Advertisement

ಇದಷ್ಟೇ ಅಲ್ಲ, ಕಳೆದ ಐದು ವರ್ಷಗಳಿಂದ ಸಾಲದ ಹಣವನ್ನು ಮಾಯ ಅಥವಾ ಮಾಫಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅಂದರೆ ಈ ಅವಧಿಯಲ್ಲಿ 2.46 ಲಕ್ಷ ಕೋಟಿ ರೂ. ಸಾಲದ ಹಣವನ್ನು ಮಾಫಿ ಮಾಡಲಾಗಿದೆ. 2012-13ನೇ ಸಾಲಿನಲ್ಲಿ 27,231 ಕೋಟಿ ರೂ. ಮಾಫಿ ಮಾಡಿದ್ದರೆ, ಆ ವರ್ಷ ಒಟ್ಟಾರೆಯಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ನಿವ್ವಳ ಲಾಭ 45,849 ಕೋಟಿ ರೂ.ನಷ್ಟಾಗಿತ್ತು. ಆದರೆ 2017ನೇ ಹಣಕಾಸು ವರ್ಷದಲ್ಲಿ 81,683 ಕೋಟಿ ರೂ. ಮಾಫಿ ಮಾಡಿದ್ದರೆ, ಇದೇ ಬ್ಯಾಂಕುಗಳ ನಿವ್ವಳ ಲಾಭ ಕೇವಲ 474 ಕೋಟಿ ಮಾತ್ರ ಬಂದಿದೆ.

ಕಳೆದ ಮೂರು ವರ್ಷಗಳಿಂದ ಅನುತ್ಪಾದಕ ಆಸ್ತಿ ಮೇಲೆ ಕೆಂಗಣ್ಣು ಬೀರಿರುವ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ, ಇದರ ಪರಿಹಾರಕ್ಕಾಗಿ ಕೆಲವೊಂದು ಮಾರ್ಗೋಪಾಯ ಕಂಡು ಹಿಡಿದಿವೆ. ಕಳೆದ ವರ್ಷವಷ್ಟೇ ಕೇಂದ್ರ ಸರ್ಕಾರ ದಿವಾಳಿತನ ಸಂಹಿತೆ ಜಾರಿಗೆ ತಂದಿದೆ. ಅಲ್ಲದೆ ಆರ್‌ಬಿಐ ಕೂಡ ಸುಸ್ತಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಬ್ಯಾಂಕುಗಳಿಗೆ ಕಾನೂನಿನ ಅಸ್ತ್ರವನ್ನು ನೀಡಿದೆ. ಹೀಗಾಗಿಯೇ ಬ್ಯಾಂಕುಗಳು ಭಾರಿ ಮೊತ್ತದ ಸಾಲ ಉಳಿಸಿಕೊಂಡ 12 ಕಂಪನಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಿದೆ. ಈ ಕಂಪನಿಗಳ ಒಟ್ಟಾರೆ ಸಾಲದ ಮೊತ್ತವೇ 2.5 ಲಕ್ಷ ಕೋಟಿ ಇದೆ.

ದೇಶದಲ್ಲಿನ ಒಟ್ಟಾರೆ ಅನುತ್ಪಾದಕ ಆಸ್ತಿ
9.64 ಲಕ್ಷ ಕೋಟಿ
ಮಾಫಿ ಮಾಡಿದ ಸಾಲದ ಮೊತ್ತ
– 81,683 ಕೋಟಿ
ಕಳೆದ ವರ್ಷದ ಮೊತ್ತ
– 57, 586 ಕೋಟಿ
ಐದು ವರ್ಷದ ಮಾಫಿ ಮೊತ್ತ
– 2.46 ಲಕ್ಷ ಕೋಟಿ

ದೇಶದ ರೈತರು ಹೊಂದಿರುವ ಒಟ್ಟಾರೆ ಮೊತ್ತ
– 12.6 ಲಕ್ಷ ಕೋಟಿ ರೂ.
90 ಕೋಟಿ – ಸಾಲ ಪಡೆದಿರುವ ರೈತರ ಸಂಖ್ಯೆ
46 ಕೋಟಿ – ಸಾಲ ಕಟ್ಟದೇ ಇರುವ ರೈತರ ಸಂಖ್ಯೆ
47,000 ರೂ. – ಪ್ರತಿ ರೈತ ಕುಟುಂಬದ ಮೇಲಿನ ಸಾಲದ ಮೊತ್ತ
3,097 – ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ

ಸಾಲ ಮಾಫಿ ಮಾಡೋದು ಅಂದ್ರೆ ಏನು?
ಉದ್ಯಮಿಗಳು ಮಾಡಿದ 81 ಸಾವಿರ ಕೋಟಿ ರೂ. ಮನ್ನಾ ಅಲ್ಲ. ಆದರೆ, ಇದನ್ನು ಬ್ಯಾಂಕಿನ ಬ್ಯಾಲೆನ್ಸ್‌ಶೀಟ್‌ನಿಂದಲೇ ತೆಗೆದು ಹಾಕಲಾಗುತ್ತದೆ. ಅಂದರೆ, ಬ್ಯಾಂಕುಗಳು ತಾವು ಕೊಡುವ ಸಾಲವನ್ನು “ಆಸ್ತಿ’ ಎಂದು ಪರಿಗಣಿಸಿದರೆ, ಇದರಿಂದ ಬರುವ ಬಡ್ಡಿಯನ್ನು “ಆದಾಯ’ವೆಂದು ಲೆಕ್ಕ ಹಾಕುತ್ತವೆ. ಸಾಲ ಸರಿಯಾಗಿ ಕಟ್ಟುತ್ತಿದ್ದಾಗ, ಆದಾಯ ಚೆನ್ನಾಗಿಯೇ ಬರುತ್ತದೆ. ಆದರೆ ಸಾಲ ಕಟ್ಟದೇ ಹೋದಲ್ಲಿ ಆದಾಯ ಬರುವುದೇ ಇಲ್ಲ. ಆಗ ಈ ಸಾಲವನ್ನು ಬ್ಯಾಂಕುಗಳು “ಅನುತ್ಪಾದಕ ಆಸ್ತಿ’ ಎಂದು ಪರಿಗಣಿಸುತ್ತವೆ. ತುಂಬಾ ವರ್ಷಗಳ ವರೆಗೆ ಇಂಥ ಅನುತ್ಪಾದಕ ಆಸ್ತಿ ಇಟ್ಟುಕೊಂಡಿದ್ದರೆ ಬ್ಯಾಂಕುಗಳ ಆದಾಯ ಇಳಿಕೆಯಾಗುತ್ತದೆ. ಹೀಗಾಗಿ ಬ್ಯಾಂಕುಗಳು ಈ ಹಣವನ್ನೇ ಬ್ಯಾಲೆನ್ಸ್‌ ಶೀಟ್‌ನಿಂದ ತೆಗೆಯುತ್ತವೆ. ಆದರೆ, ವಸೂಲು ಮಾಡುವ ಕೆಲಸ ಮಾತ್ರ ನಿಲ್ಲಿಸುವುದಿಲ್ಲ. ಬ್ಯಾಲೆನ್ಸ್‌ ಶೀಟ್‌ನಿಂದ ತೆಗೆಯುವ ಉದ್ದೇಶ, ಸದರಿ ಬ್ಯಾಂಕಿನಲ್ಲಿ ಅನುತ್ಪಾದಕ ಆಸ್ತಿಯೇ ಹೆಚ್ಚಾಗಿದೆ. ಆದಾಯದ ಮೂಲಗಲೇ ಇಲ್ಲ ಎಂಬ ಭಾವನೆ ಬರಬಾರದು ಎಂಬ ದೃಷ್ಟಿಯಿಂದ ಈ ಕೆಲಸ ಮಾಡಲಾಗುತ್ತದೆ.

ನಾವು ಕಾರ್ಪೊರೇಟ್‌ಗಳ ಪರ ಇಲ್ಲ ಎಂದು ಹೇಳುತ್ತಿದ್ದ ಬಿಜೆಪಿ ಇದೀಗ ಅವರು ಮಾಡಿದ್ದ ಸಾಲವನ್ನು ಮಾಫಿ ಮಾಡಿದೆ. ಹೀಗಾಗಿ ಅದು ಯಾರ ಪರ ಇದೆ ಎಂಬುದನ್ನು ಬಹಿರಂಗಗೊಳಿಸಬೇಕು.
– ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next