ಹುಣಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹುಣಸೂರು ನಗರ ಠಾಣೆಯಲ್ಲಿ ನಗರ ವ್ಯಾಪ್ತಿಯ 144 ಮಂದಿ ರೌಡಿಶೀಟರ್‌ಗಳ ಪೆರೇಡ್ ನಡೆಸಿದರು. ನಗರ ಠಾಣೆ ಆವರಣದಲ್ಲಿ ರೌಡಿಶೀಟರ್ ಪೆರೇಡ್ ನಡೆಸಿದ ವೃತ್ತ ನಿರೀಕ್ಷಕ ಶಿವಕುಮಾರ್ ಮಾತನಾಡಿ, ಮುಂದಿನ ಏ.18 ಮತ್ತು 23ಕ್ಕೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೊಷಣೆಯಾಗಿದೆ.
ಮೇ 23ರ ವರೆಗೂ ಚುನಾವಣಾ ಮಾದರಿ ನೀತಿ ಸಂಹಿತೆ ಚಾರಿಯಲ್ಲಿರುತ್ತದೆ. ನಗರ ವ್ಯಾಪ್ತಿಯಲ್ಲದೆ ಇತರೆಡೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಲ್ಲಿ ಭಾಗವಹಿಸದಂತೆ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸಿದಲ್ಲಿ ಕಠಿಣ ಕ್ರಮ ಎದುರಿಸಬೇಕಾದೀತು. ಈ ಹಿಂದಿನ ಎಲ್ಲ ಘಟನೆಗಳನ್ನು ಮರೆತು ನಿಮ್ಮೊಂದಿಗೆ ನಿಮ್ಮ ಕುಟುಂಬವಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಜೀವನ ನಡೆಸಿ.
ಮುಂದೆ ಒಳ್ಳೆ ರೀತಿಯ ಜೀವನ ನಡೆಸಿದಲ್ಲಿ ಕಾನೂನು ಚೌಕಟ್ಟಿನಲ್ಲಿ ವಿನಾಯಿತಿ ಸಿಗಲಿದೆ ಎಂದು ಎಚ್ಚರಿಸಿದರು. ನಗರಠಾಣೆ ಎಸ್‌ಐ.ಮಹೇಶ್ ಮಾತನಾಡಿ, ರೌಡಿ ಶೀಟರ್ ಪಟ್ಟಿಯಲ್ಲಿರುವವರ ಮೇಲೆ ಪೊಲೀಸರು ಸದಾ ನಿಗಾವಹಿಸಿರುತ್ತಾರೆ,
ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಮತ್ತೆ ಕಾನೂನು ಕ್ರಮ ಎದುರಿಸಬೇಕಾದೀತು. ಸಮಾಜ ಘಾತುಕ ಮತ್ತು ಕಾನೂನು ಬಾಹಿರ ಚಟುವಟಿಕೆ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಭಾಗಿಯಾಗಿದ್ದು ರುಜುವಾತಾದಲ್ಲಿ ಜೈಲುವಾಸ ಅನುಭವಿಸಬೇಕಾಗುತ್ತದೆಂದು ಎಚ್ಚರಿಸಿದರು.
ಮುಚ್ಚಳಿಕೆ: ನಗರ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಲ್ಲಿ ವಿವಿಧ ಕಾರಣಗಳಿಂದ 144 ಮಂದಿ ವಿರುದ್ಧ (ಸಾರ್ವಜನಿಕ ಶಾಂತಿ ಭಂಗ ತರುವ ಮುನ್ನೆಚ್ಚರಿಕೆ) ಸಿ.ಆರ್.ಪಿ.ಸಿ.107ರಡಿ ಪ್ರಕರಣ ದಾಖಲಿಸಲಾಗಿತ್ತು, ಎಲ್ಲರಿಗೂ ತಲಾ 5 ಲಕ್ಷ ಮುಚ್ಚಳಿಕೆ ಬಾಂಡ್ ಪಡೆಯಲಾಗಿತ್ತು, ಮುಂದೆ ಯಾವುದೇ ಘಟನೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.