Advertisement

ಸಿ.ಪಿ.ಯೋಗೇಶ್ವರ್‌ ಆಡಿಯೋ: ತೀವ್ರ ಚರ್ಚೆ

12:34 AM Jan 15, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆಯ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

Advertisement

ಚುನಾವಣೆಗೆ ಮುನ್ನವೇ ನಾವು ಆಪರೇಷನ್‌ ಮಾಡುತ್ತೇವೆಂಬ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಆಡಿಯೋ ತಮ್ಮದಲ್ಲ ಎಂದು ಯೋಗೇಶ್ವರ್‌ ಹೇಳಿದ್ದಾರೆ.

ಆಡಿಯೋ ಬಹಿರಂಗವಾದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಯೋಗೇಶ್ವರ್‌ ಚರ್ಚಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಡಿಯೋ ನನ್ನದಲ್ಲ. ಅದು ಯಾವುದೋ ನಕಲಿ ಸಂಭಾಷಣೆ. ರಾಜಕೀಯ ವಿರೋಧಿಗಳು ಅದನ್ನು ಸೃಷ್ಟಿಸಿದ್ದಾರೆಂದು ಹೇಳಿದರು.

ಯಾವುದೇ ವಿಚಾರವಿದ್ದರೂ ನಾನು ನೇರವಾಗಿ ಮಾತನಾಡುವ ವ್ಯಕ್ತಿ. ನಾನು ಈಗ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ. ಮುಖ್ಯಮಂತ್ರಿಗಳು ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ನಾನು ಚನ್ನಪಟ್ಟಣದಲ್ಲೇ ಸ್ಪರ್ಧಿ ಸುತ್ತೇನೆ. ಕುಮಾರಸ್ವಾಮಿಯವರು ನಮ್ಮ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದಕ್ಕಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಎಂದು ಹೇಳಿದರು.

Advertisement

ಆಡಿಯೋದಲ್ಲಿ ಏನಿದೆ?
ಕಾರ್ಯಕರ್ತರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು ಎಂದು ಹೇಳಲಾಗುತ್ತಿರುವ ಆಡಿಯೋ ಬಹಿರಂಗವಾಗಿದ್ದು, ಅದರಲ್ಲಿ ಚುನಾವಣೆಗೆ ಮುಂಚಿತವಾಗಿಯೇ ಆಪರೇಷನ್‌ ಕಮಲ ನಡೆಸುತ್ತೇವೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಿಂದ ಹಲವಾರು ನಾಯಕರು ಬಿಜೆಪಿಗೆ ಬರುತ್ತಾರೆ. ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ನಡೆಯುತ್ತದೆ.

ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್‌ ಪ್ರಭಾವಿ ನಾಯಕರಾದರೂ ಅಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕೋಲಾರದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್‌ನ ಪ್ರಭಾವಿ ನಾಯಕರೊಬ್ಬರನ್ನು ಕಣಕ್ಕೆ ಇಳಿಸುತ್ತೇವೆ. ಅವರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಅಷ್ಟಕ್ಕೂ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲಬೇಕು. ಆಗಲೇ ನಿಜವಾದ ರಾಜಕಾರಣ ಆರಂಭವಾಗುತ್ತದೆ ಎಂಬ ವಿಚಾರ ಧ್ವನಿ ಸುರಳಿಯಲ್ಲಿದೆ. ಇದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಗ್ಗೆಯೂ ತುಸು ಆಕ್ಷೇಪಾರ್ಹ ಮಾತನ್ನು ಆಡಿಯೋದಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಅಮಿತ್‌ ಶಾ ಹಳೆ ಮೈಸೂರು ಭಾಗದಲ್ಲಿ ಹೊಂದಾಣಿಕೆ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಅಶೋಕ್‌ ಚುನಾವಣೆಗೆ ನಿಲ್ಲಬೇಕು. ನಾನು ಬೇಕಿದ್ದರೆ ಶಿವಕುಮಾರ್‌ ವಿರುದ್ಧ ಸ್ಪರ್ಧೆ ಮಾಡುತ್ತೇನೆಂಬ ಮಾತುಗಳು ಆಡಿಯೋದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next