Advertisement

CP Yogeeshwara ಮತ್ತೆ ದಿಲ್ಲಿಗೆ!; ‘ಸೈನಿಕ’ನ ಮುಂದಿನ ನಡೆಯೇ ಬಹಳ ಕುತೂಹಲ

01:05 AM Oct 08, 2024 | Team Udayavani |

ರಾಮನಗರ: ಚನ್ನಪಟ್ಟಣದಲ್ಲಿ ಕ್ಷೇತ್ರ ಸಂಚಾರ ವೇಳೆ “ಸಿ.ಪಿ. ಯೋಗೇಶ್ವರ್‌ಗೆ ಟಿಕೆಟ್‌ ಇಲ್ಲ’ ಎಂಬ ಸಂದೇಶವನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ರವಾನಿಸಿರುವ ಬೆನ್ನಲ್ಲೇ ಎನ್‌ಡಿಎ ಟಿಕೆಟ್‌ ಕೈತಪ್ಪಿದರೆ ಯೋಗೇಶ್ವರ್‌ ನಡೆ ಏನು ಎಂಬ ಪ್ರಶ್ನೆ ಎದುರಾಗಿದೆ. ಮೈತ್ರಿ ಟಿಕೆಟ್‌ ತರುವ ಮೊದಲ ಪ್ರಯತ್ನ ವಿಫಲವಾಗಿದ್ದು ಎರಡನೇ ಪ್ರಯತ್ನಕ್ಕೆ ಮುಂದಾಗಿರುವ ಅವರು ಪಕ್ಷದ ವರಿಷ್ಠರನ್ನು ಭೇಟಿಯಾಗಲು ದಿಲ್ಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.

Advertisement

ಮೈತ್ರಿ ಧರ್ಮಕ್ಕೆ ಒಪ್ಪಿ ನಿಖೀಲ್‌ ಕುಮಾರಸ್ವಾಮಿಗೆ ಟಿಕೆಟ್‌ ಬಿಟ್ಟುಕೊಟ್ಟಿದ್ದೇ ಆದಲ್ಲಿ ಯೋಗೇಶ್ವರ್‌ ಶಾಶ್ವತವಾಗಿ ಚನ್ನಪಟ್ಟಣವನ್ನು ಕಳೆದುಕೊಳ್ಳಬೇಕಾಗುತ್ತದೆ. ತನ್ನ ಕ್ಷೇತ್ರದಲ್ಲಿ ಸೈಡ್‌ಲೈನ್‌ ಆಗಲು ಯೋಗೇಶ್ವರ್‌ಗೆ ಇಷ್ಟವಿಲ್ಲ. ಕಳೆದ 25 ವರ್ಷಗಳಿಂದ ಚನ್ನಪಟ್ಟಣದಲ್ಲಿ ಜೆಡಿಎಸ್‌ ಮತ್ತು ಯೋಗೇಶ್ವರ್‌ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿದೆ. ಇದೀಗ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಅವರು ಸೈಡ್‌ಲೈನ್‌ ಆಗುವುದು ಖಚಿತ. ಹಾಗಾಗಿ ತನ್ನ ಕಾರ್ಯತಂತ್ರ ಬದಲಿಸಿಕೊಳ್ಳಲಿದ್ದಾರೆ ಎಂದು ಅವರ ಆಪ್ತಮೂಲಗಳು ಹೇಳುತ್ತಿವೆ.

ಕಾರ್ಯತಂತ್ರ ಏನು?

5 ಬಾರಿ ಗೆಲ್ಲುವ ಮೂಲಕ ಚನ್ನಪಟ್ಟಣದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದ ಯೋಗೇಶ್ವರ್‌ಗೆ ಎಚ್‌.ಡಿ. ಕುಮಾರಸ್ವಾಮಿ ಪ್ರವೇಶದಿಂದಾಗಿ ಕ್ಷೇತ್ರ ಕಳೆದು ಕೊಳ್ಳುವಂತಾಗಿದೆ. ಇದೀಗ ಉಪಚುನಾವಣೆ ಮೂಲಕ ಮತ್ತೆ ಕ್ಷೇತ್ರದಲ್ಲಿ ಪ್ರಾಬಲ್ಯ ಮುಂದುವರಿಸಲು ಕಾಯುತ್ತಿರುವ ಯೋಗೇಶ್ವರ್‌, ಮೈತ್ರಿ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದರು. ಕುಮಾರಸ್ವಾಮಿ ಕ್ಷೇತ್ರದಲ್ಲಿ ಸಂಚಾರ ಮಾಡುವ ಮೂಲಕ ಯೋಗೇಶ್ವರ್‌ಗೆ ಟಿಕೆಟ್‌ ಇಲ್ಲ ಎಂಬ ಸುಳಿವು ನೀಡಿದ್ದು ಇದೀಗ ಕ್ಷೇತ್ರ ಉಳಿಸಿಕೊಳ್ಳಬೇಕು ಎಂದಾದಲ್ಲಿ ಮೈತ್ರಿಯಿಂದ ಹೊರಗೆ ನಿಂತು ಚುನಾವಣೆ ಎದುರಿಸಬೇಕಿದೆ.

ಯೋಗೇಶ್ವರ್‌ ಮುಂದಿರುವ ಆಯ್ಕೆ ಎಂದರೆ ಬಿಜೆಪಿ ವರಿಷ್ಠರ ಮೂಲಕ ಒತ್ತಡ ತರಿಸಿ ಚನ್ನಪಟ್ಟಣ ಟಿಕೆಟ್‌ ಬಿಟ್ಟುಕೊಡುವಂತೆ ಕುಮಾರಸ್ವಾಮಿ ಮನವೊಲಿಸುವುದು. ಇಲ್ಲವೇ ಮೈತ್ರಿಯಿಂದ ಹೊರಬಂದು ಸ್ಪರ್ಧೆ ಮಾಡಲು ಸಾಧ್ಯ ವಿರುವ ಬೇರೆ ಆಯ್ಕೆ ಪರಿಶೀಲಿಸುವುದು. ಬಿಜೆಪಿ ತೊರೆದು ಸ್ಪರ್ಧೆಗೆ ಮುಂದಾದರೆ ಯೋಗೇಶ್ವರ್‌ ಆಯ್ಕೆ ಯಾವುದು ಎಂಬ ಪ್ರಶ್ನೆ ಎದುರಾಗಿದೆ. ಬಿಜೆಪಿಯಲ್ಲೇ ಉಳಿದು ಮೈತ್ರಿ ಧರ್ಮ ಪಾಲಿಸುತ್ತಾರಾ? ತಮ್ಮ ಹಳೆಯ ಪಕ್ಷ ಕಾಂಗ್ರೆಸ್‌ಗೆ ಸೇರುತ್ತಾರಾ? ಅವರನ್ನು ಡಿ.ಕೆ. ಶಿವಕುಮಾರ್‌ ಸುಲಭವಾಗಿ ಕಾಂಗ್ರೆಸ್‌ಗೆ ಸ್ವಾಗತಿಸುತ್ತಾರಾ? 2013ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ ತಂದಂತೆ ಬೇರೆ ಯಾವುದಾದರೂ ಪಕ್ಷದ ಟಿಕೆಟ್‌ ತರುತ್ತಾರಾ ಎಂದು ಕಾದು ನೋಡಬೇಕಿದೆ.

Advertisement

ದಿಲ್ಲಿಯಲ್ಲೇ ಅಂತಿಮ ನಿರ್ಧಾರ?

ಸೋಮವಾರ ಬೆಳಗ್ಗೆ ಯೋಗೇಶ್ವರ್‌ ದಿಲ್ಲಿಯ ವಿಮಾನ ಹತ್ತಿದ್ದಾರೆ. ಅಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ತನ್ನ ಕೊನೆಯ ಪ್ರಯತ್ನ ಮಾಡಲಿದ್ದು ಎನ್‌ಡಿಎ ಟಿಕೆಟ್‌ ಪಡೆಯುವುದು ಸಾಧ್ಯವಾಗದೇ ಹೋದಲ್ಲಿ ಪರ್ಯಾಯ ನಿರ್ಧಾರವನ್ನು ಅಲ್ಲಿಯೇ ನಿರ್ಧರಿಸಿಕೊಂಡು ಬರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯೋಗೇಶ್ವರ್‌ ವಿರುದ್ಧ  ಎಚ್‌ಡಿಕೆ ಗುಡುಗು

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ ಕಸರತ್ತಿನ ನಡುವೆಯೇ ಬಿಜೆಪಿ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್‌ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಅವರಿಗೆ ಟಿಕೆಟ್‌ ಕೊಟ್ಟರೆ ಇಲ್ಲಿ ನನ್ನ ಪಕ್ಷ, ಕಾರ್ಯಕರ್ತರನ್ನು ಉಳಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ರವಿವಾರ ರಾತ್ರಿ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಮಾಡಿದ್ದೇ ನಾನು, ಮಂಡ್ಯದಲ್ಲಿ ಗೆದ್ದದ್ದೇ ನಮ್ಮಿಂದ, ಪ್ರಧಾನಿ ಮೋದಿ ಪರಿಚಯ ಮಾಡಿಸಿಕೊಟ್ಟಿದ್ದೇ ನಾನು ಎಂದು ನನ್ನ ಸ್ನೇಹಿತರೊಬ್ಬರು ಹೇಳಿಕೊಂಡು ಬರುತ್ತಿದ್ದಾರೆ. ಅವರ ಕೈಗೆ ಟಿಕೆಟ್‌ ಕೊಟ್ಟರೆ ಇಲ್ಲಿ ನನ್ನ ಪಕ್ಷ, ಕಾರ್ಯಕರ್ತರನ್ನು ಉಳಿಸುತ್ತಾರಾ ಎಂದು ಅಸಮಾಧಾನ ಹೊರಹಾಕಿದರು.

ಇಲ್ಲಿ ಎಲ್ಲವನ್ನೂ ಬಿಡಿಸಿ ಹೇಳಲು ಆಗುವುದಿಲ್ಲ, ನಾನು ಎಲ್ಲವನ್ನೂ ಎಲ್ಲೂ ಹೇಳಿ ಕೊಂಡಿಲ್ಲ. ನಾಲ್ಕೈದು ತಿಂಗಳಿಂದ ಏನೆಲ್ಲ ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ ಎಂದು ಯೋಗೇಶ್ವರ್‌ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next