ಹೈದರಾಬಾದ್: ಸಿಡಿಮದ್ದು ತುಂಬಿಸಿಟ್ಟಿದ್ದ ಅನಾನಾಸ್ ತಿಂದು ಗರ್ಭಿಣಿ ಆನೆ ಹತ್ಯೆಗೀಡಾದ ಪ್ರಕರಣ ಇತ್ತೀಚೆಗೆ ಕೇರಳದಲ್ಲಿ ನಡೆದಿತ್ತು. ಇದೀಗ ಸಿಡಿಮದ್ದು ತುಂಬಿಸಿ ಪ್ಯಾಕ್ ನಲ್ಲಿ ಸುತ್ತಿಟ್ಟಿದ್ದ ಚೆಂಡಿನಾಕೃತಿಯ ಆಹಾರ ತಿಂದ ಪರಿಣಾಮ ದನದ ಬಾಯಿ ಛಿದ್ರವಾಗಿ ಹೋದ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಕೋಗಿಲೇರು ಗ್ರಾಮದ ಪೇಡಾ ಪಂಜಾನಿ ಬ್ಲಾಕ್ ಪ್ರದೇಶದಲ್ಲಿನ ಗೋ ಶಾಲೆಯಲ್ಲಿದ್ದ ದನ ಸಮೀಪದ ಕಾಡಿನಲ್ಲಿ ಮೇಯುತ್ತಿತ್ತು. ಈ ವೇಳೆ ಚೆಂಡಿನಾಕಾರದ ವಸ್ತುವಿನೊಳಗೆ ಸ್ಫೋಟಕ ತುಂಬಿಸಿ ಇಟ್ಟಿದ್ದನ್ನು ಆಹಾರ ಎಂದು ಪರಿಗಣಿಸಿ ದನ ತಿಂದಿತ್ತು. ಆದರೆ ಅದು ಬಾಯೊಳಗೆ ಸ್ಫೋಟಗೊಂಡಿರುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಲೋಕೇಶ್ ರೆಡ್ಡಿ ತಿಳಿಸಿದ್ದಾರೆ.
ಸ್ಫೋಟದ ಪರಿಣಾಮ ದನದ ಕೆಳದವಡೆ ಛಿದ್ರವಾಗಿ ಹೋಗಿತ್ತು. ದೊಡ್ಡ ಶಬ್ದ ಕೇಳಿ ಸ್ಥಳೀಯ ಜನರು ಘಟನೆ ನಡೆದ ಕಾಡಿನ ಪ್ರದೇಶಕ್ಕೆ ಹೋಗಿ ನೋಡಿದಾಗ ದನದ ಬಾಯಲ್ಲಿ ರಕ್ತ ಸೋರುತ್ತಿತ್ತು. ಕೂಡಲೇ ದನವನ್ನು ಗೋ ಶಾಲೆಗೆ ತಂದು ಪ್ರಥಮ ಚಿಕಿತ್ಸೆ ಮಾಡಿಸಿರುವುದಾಗಿ ವರದಿ ವಿವರಿಸಿದೆ.
ನಂತರ ದನವನ್ನು ತಿರುಪತಿಯಲ್ಲಿರು ಸರ್ಕಾರಿ ಗೋ ಆಸ್ಪತ್ರೆಗೆ ದಾಖಲಿಸಿದ್ದು, ಸೋಮವಾರ ಸರ್ಜರಿ ನಡೆಸಲಾಗಿತ್ತು ಎಂದು ಇನ್ಸ್ ಪೆಕ್ಟರ್ ರೆಡ್ಡಿ ತಿಳಿಸಿದ್ದಾರೆ.
ಗೋ ಮಾತಾ ಪೀಠಂನ ಅರ್ಜುನ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಗಾಯಗೊಂಡಿರುವ ದನದ ಸ್ಥಿತಿ ತುಂಬಾ ಗಂಭೀರವಾಗಿದೆ. ಕೆಳ ದವಡೆ ಸಂಪೂರ್ಣ ಛಿದ್ರವಾಗಿ ಹೋಗಿದೆ. ಸರ್ಜರಿ ನಡೆಸಿದರೂ ಕೆಳ ದವಡೆ ಮೊದಲಿನ ಸ್ಥಿತಿಗೆ ಬರುತ್ತದೆಯೇ ಎಂಬ ಬಗ್ಗೆ ಖಚಿತತೆ ಇಲ್ಲ. ಸದ್ಯ ದನ ಜೀವಂತವಾಗಿದೆ. ದ್ರವ ಆಹಾರ ಕುಡಿಯುತ್ತಿದ್ದು, ಇದು ಮತ್ತೆ ಮೊದಲಿನ ರೀತಿ ಆಗಿ ಹುಲ್ಲು ತಿನ್ನಲು ಸಾಧ್ಯವಾಗುತ್ತದೆಯೇ ಎಂಬುದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ತಿನ್ನುವ ವಸ್ತುವಿನೊಳಕ್ಕೆ ಸಲ್ಫರ್ ಹಾಗೂ ಇತರ ವಸ್ತುಗಳನ್ನು ಹಾಕಿ ಸ್ಫೋಟಕ ತಯಾರಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕಾಡು ಹಂದಿಯನ್ನು ಕೊಲ್ಲಲು ಸ್ಥಳೀಯರು ಈ ಸ್ಫೋಟಕ ಇಟ್ಟಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ನಾವು ಈಗಾಗಲೇ ಕೆಲವು ಶಂಕಿತರನ್ನು ಗುರುತಿಸಿದ್ದು, ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ರೆಡ್ಡಿ ತಿಳಿಸಿದ್ದಾರೆ.