ಸಿಂಧನೂರು: ನಗರದ ಕೋಟೆ ಬಡಾವಣೆ ರಸ್ತೆಯಲ್ಲಿ ಕೈಗೊಂಡ ರಂಗಮಂದಿರ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದ್ದು,ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಯ ತಾಣವಾಗಬೇಕಿದ್ದ ಕಟ್ಟಡ ಇದೀಗ ತಾಜ್ಯ, ದನಕರುಗಳು, ಹಂದಿಗಳ ತಾಣವಾಗಿ ಮಾರ್ಪಟ್ಟಿದೆ.
2011ರಲ್ಲಿ ಆಗ ಶಾಸಕರಾಗಿದ್ದ ನಾಡಗೌಡರ ಅವಧಿಯಲ್ಲೇ ರಂಗಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಬುನಾದಿ ಹಾಕಿ ಕೈಬಿಡಲಾಗಿತ್ತು. ಕಲಾಸಕ್ತರು ಜಿಲ್ಲಾ ಮತ್ತು ತಾಲೂಕು ಆಡಳಿತ ಗಮನ ಸೆಳೆದಾಗ ಪಿಲ್ಲರ್ ಹಾಕಲಾಯಿತು. ಪ್ರತಿ ಬಾರಿ ಸಾರ್ವಜನಿಕರು, ಸಂಘಟನೆಗಳಿಂದ ಒತ್ತಡ ಬಂದಾಗ ಮಾತ್ರ ಕಾಮಗಾರಿ ಕೈಗೊಳ್ಳುವ ಸಂಬಂಧಿಸಿದ ಅಧಿಕಾರಿಗಳು, ಜಿಲ್ಲಾಡಳಿತ ನಂತರ ಇತ್ತ ತಲೆ ಹಾಕಿಲ್ಲ. ಹೀಗಾಗಿ ರಂಗಮಂದಿರ ಕಾಮಗಾರಿ ಅರ್ಧಕ್ಕೆ ನಿಂತಿದೆ. ರಂಗಮಂದಿರ ಶೀಘ್ರ ಪೂರ್ಣಗೊಂಡು ಸಾಂಸ್ಕೃತಿಕ ಚಟುವಟಿಕೆಗೆ ವೇದಿಕೆ ಆಗಬಹುದೆಂಬ ನಗರದ ಜನತೆ, ಕಲಾಸಕ್ತರ ನಿರೀಕ್ಷೆ ಹುಸಿಯಾಗಿದೆ. ಜಿಲ್ಲಾಡಳಿತ ಮತ್ತು ನಗರಸಭೆ ಕುಂಭಕರ್ಣ ನಿದ್ರೆಗೆ ಜಾರಿದೆ.
ಅನುದಾನ ಎಷ್ಟು: ವೆಂಕಟರಾವ್ ನಾಡಗೌಡ ಅವರು ಶಾಸಕರಾಗಿದ್ದಾಗ 83 ಕೋಟಿ ರೂ. ವೆಚ್ಚದ ರಂಗಮಂದಿರ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಅದರಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 20 ಲಕ್ಷ, ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ ಮತ್ತು ವಿಜಯ್ ಮಲ್ಯ ಅವರ ಅನುದಾನದಿಂದ ತಲಾ 10 ಲಕ್ಷ, ವಿಧಾನ ಪರಿಷತ್ ಸದಸ್ಯ ಕೃಷ್ಣಪ್ಪ ಅವರ ಅನುದಾನದಿಂದ 6 ಲಕ್ಷ ಹಾಗೂ ನಗರಸಭೆಯ ಅನುದಾನದಿಂದ 30 ಲಕ್ಷ ಸೇರಿದಂತೆ ಒಟ್ಟು 83 ಲಕ್ಷ ರೂ. ಬಿಡುಗಡೆಯಾಗಿದೆ. ಇದರಲ್ಲಿ 50 ಲಕ್ಷದಷ್ಟು ಮಾತ್ರ ಕೆಲಸ ಆಗಿದೆ. ಕಾಮಗಾರಿ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಹಣ ದುರ್ಬಳಕೆ ಪ್ರಕರಣಗಳ ಸುಳಿಗೆ ಸಿಲುಕಿದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸಿಬಿಐ ತನಿಖೆಗೆ ಎದುರಿಸಬೇಕಾಗಿ ಬಂದ ಹಿನ್ನೆಲೆಯಲ್ಲಿ ರಂಗಮಂದಿರ ಕಾಮಗಾರಿಗೆ ಅರ್ಧಕ್ಕೆ ನಿಂತಿದ್ದು ಮೇಲೇಳುತ್ತಲೇ ಇಲ್ಲ. ಈ ಕುರಿತು 3 ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಚೂರುಪಾರು ಕೆಲಸ ಮಾಡಿದ್ದು ಬಿಟ್ಟರೆ ನಂತರ ಹೇಳಿಕೊಳ್ಳುವಂತಹ ಕೆಲಸ ಆಗಿಲ್ಲ. ಇದು ಸಾರ್ವಜನಿಕರು, ಕಲಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ತಾಜ್ಯ ಎಸೆಯುವ ತಾಣ: ರಂಗಮಂದಿರ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಸುತ್ತಲಿನ ಅಂಗಡಿಕಾರರು, ನಿವಾಸಿಗಳು ಈ ಜಾಗದಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ದನಕರುಗಳು, ಹಂದಿ-ನಾಯಿಗಳು ಇಲ್ಲಿಯೇ ಹೊರಳಾಡುತ್ತಿವೆ. ಮಳೆ ಬಂದರೆ ಈ ಜಾಗೆ ಕೊಳಚೆ ಪ್ರದೇಶದಂತಾಗುತ್ತದೆ. ದುರ್ನಾತ ಹರಡುತ್ತಿದೆ. ಕೆಲವರು ಇಲ್ಲಿಯೇ ಮೂತ್ರ ವಿಸರ್ಜಿಸುತ್ತಾರೆ. ನಗರದ ಸಾಂಸ್ಕೃತಿಕ ಚಟುವಟಿಕೆಗೆ ವೇದಿಕೆ ಆಗಬೇಕಿದ್ದ ಕಟ್ಟಡವಿಂದು ಅನಾಥವಾಗಿ ನಿಂತಿದೆ.
ಹೋರಾಟ ಸ್ತಬ್ದ: ತಾಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕೆಲ ಪದಾಧಿಕಾರಿಗಳು ಸೇರಿ ಸಮಾನ ಮನಸ್ಕರು ಈ ಹಿಂದೆ ರಂಗಮಂದಿರ ಕಾಮಗಾರಿ ವಿಳಂಬ ಖಂಡಿಸಿ ಧ್ವನಿ ಎತ್ತಿದ್ದರು. ತುರುಸಿನ ಹೋರಾಟ ಕೂಡ ನಡೆಸಿದ್ದರು. ಕೆಲ ದಿನಗಳಿಂದ ಅವರೂ ಸಹ ಮೌನಕ್ಕೆ ಶರಣಾಗಿದ್ದು, ಹೀಗಾಗಿ ಪರ್ಮೆನೆಂಟಾಗಿ ರಂಗಮಂದಿರ ಈಗ ಜಾನುವಾರುಗಳ ಡ್ರಾಮಾ ಮಂದಿರವಾಗಿ ಮಾರ್ಪಟ್ಟಿದೆ ಎನ್ನುವುದು ಕೆಲವರ ಅಭಿಪ್ರಾಯ.
•ಚಂದ್ರಶೇಖರ ಯರದಿಹಾಳ