ನವದೆಹಲಿ:18 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರು ಬುಧವಾರ(ಏಪ್ರಿಲ್ 28) ಸಂಜೆ 4ಗಂಟೆಯಿಂದ ಕೋ ವಿನ್ ವೆಬ್ ಸೈಟ್, ಆರೋಗ್ಯ ಸೇತು ಆ್ಯಪ್ ಮೂಲಕ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಕೇಂದ್ರ ಸರಕಾರ ತಿಳಿಸಿದ ಹಿನ್ನೆಲೆಯಲ್ಲಿ ಬಹುತೇಕರು ಹೆಸರು ನೋಂದಾಯಿಸಲು ಮುಂದಾದಾಗ ಕೋ ವಿನ್ ವೆಬ್ ಸೈಟ್ ಸರ್ವರ್ ಕ್ರ್ಯಾಶ್ ಆಗಿರುವುದಾಗಿ ದೂರಿದ್ದಾರೆ.
ಇದನ್ನೂ ಓದಿ:ಕೋವಿಡ್ ನಿರ್ಬಂಧ ಮೀರಿ ಜಾತ್ರೆ-ರಥದ ಗಾಲಿಗೆ ಸಿಕ್ಕ ವ್ಯಕ್ತಿ ಸಾವು
ಕೆಲವು ಮಂದಿ ಕೋ ವಿನ್ ವೆಬ್ ಸೈಟ್ ಮೂಲಕ ತಮ್ಮ ಹೆಸರನ್ನು ಯಶಸ್ವಿಯಾಗಿ ನೋಂದಣಿ ಮಾಡಿದ ನಂತರ ಏಕಾಏಕಿ ಜನರು ನೋಂದಣಿಗೆ ಮುಂದಾದ ಪರಿಣಾಮ ಕೋ ವಿನ್ ವೆಬ್ ಸೈಟ್ ಕ್ರ್ಯಾಶ್ ಆಗಿ ನೋಂದಣಿ ಮಾಡಲು ಸಾಧ್ಯವಾಗಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.
ಕೋ ವಿನ್ ವೆಬ್ ಪೋರ್ಟಲ್ ನಲ್ಲಿ ಹೆಸರು ನೋಂದಣಿಗೆ ಮುಂದಾದವರಿಗೆ “ಕೋ ವಿನ್ ಸರ್ವರ್ ನಲ್ಲಿ ದೋಷ ಕಂಡು ಬಂದಿದ್ದು, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ” ಎಂಬ ಸಂದೇಶ ಬಂದಿರುವುದಾಗಿ ಹಲವರು ದೂರಿದ್ದಾರೆ.
ಇಂದು ಸಂಜೆ 4ಗಂಟೆಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹೆಸರು ನೋಂದಣಿ ಆರಂಭವಾದ ಒಂದು ಗಂಟೆಯೊಳಗೆ ಕೋ ವಿನ್ ವೆಬ್ ಸೈಟ್ ನಲ್ಲಿ ಸಣ್ಣ ಪ್ರಮಾಣದ ತಾಂತ್ರಿಕ ದೋಷ ಕಂಡುಬಂದಿದ್ದು, ಅದನ್ನು ಸರಿಪಡಿಸಲಾಗಿದೆ ಎಂದು ವರದಿ ವಿವರಿಸಿದೆ.
ಕೇಂದ್ರ ಸರ್ಕಾರದ “ಉಮಂಗ್’ ವೆಬ್‌ಸೈಟ್, ಆರೋಗ್ಯ ಸೇತು ಮೂಲಕವೂ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ. ಮೇ 1ರಿಂದ ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿತ್ತು.